ಕುಣಿಗಲ್: ಕ್ಷುಲಕ ಕಾರಣಕ್ಕೆ ಪುಂಡ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಆವರಣದಲ್ಲಿ ಜಗಳವಾಡುತ್ತಿದ್ದು, ಬುದ್ಧಿ ಹೇಳಲು ಹೋದ ಸಾರಿಗೆ ಸಿಬ್ಬಂದಿ ಮೇಲೆ ಕೈ ಮಾಡಲು ಮುಂದಾಗಿದ್ದು ಸಾರಿಗೆ ಸಿಬ್ಬಂದಿ ಹಲ್ಲೆ ಕೋರರನ್ನು ಪೊಲೀಸರ ವಶಕ್ಕೆ ನೀಡಿದ ಘಟನೆ ಸೋಮವಾರ ಮಧ್ಯಾಹ್ನ ನಡೆಯಿತು.
ಪಟ್ಟಣದಲ್ಲಿ ಮಧ್ಯಾಹ್ನ ಒಂದುವರೆಯಿಂದ ನಾಲ್ಕು ಗಂಟೆವರೆಗೂ ವಿವಿಧ ಶಾಲೆ, ಕಾಲೇಜುಗಳು ಬಿಡುತ್ತವೆ. ಬಹುತೇಕ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಬಸ್‌ನಿಲ್ದಾಣದಲ್ಲಿ ಜಮಾವಣೆಗೊಂಡು ಹಲವಾರು ಬಾರಿ ಕೆಲಸಕ್ಕೆ ಬಾರದ ಕ್ಷುಲಕ ಕಾರಣಕ್ಕೆ ಸಣ್ಣಪುಟ್ಟ ಗಲಾಟೆ ಮಾಡಿಕೊಳ್ಳುತ್ತಾರೆ. ಇವರ ಗಲಾಟೆಗೆ ಕಾಲೇಜು ವ್ಯಾಸಂಗ ಬಿಟ್ಟು ಅಲೆದಾಡಿಕೊಂಡ ಕೆಲ ಹುಡುಗರು ಸಹ ಸೇರಿಕೊಳ್ಳುತ್ತಾರೆ. ಸೋಮವಾರ ಮಧ್ಯಾಹ್ನ ಮೂರುಗಂಟೆ ಸಮಯದಲ್ಲಿ ವಿದ್ಯಾರ್ಥಿಗಳ ಎರಡು ಬಣಗಳ ನಡುವೆ ವಾಗ್ವಾದ ನಡೆದು ವಾಗ್ವಾದ ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಸ್ಥಳದಲ್ಲಿದ್ದ ಸಾರಿಗೆ ಸಂಸ್ಥೆಯ ಕೆಲ ನಿರ್ವಾಹಕರು, ಚಾಲಕರು ವಿದ್ಯಾರ್ಥಿಗಳಿಗೆ ಬುದ್ಧಿಹೇಳಿ ಜಗಳ ಬಿಡಸಲು ಮುಂದಾದಾಗ ಕೆಲವರು ಸಾರಿಗೆ ಸಿಬ್ಬಂದಿ ಮೇಲೆ ಮುಗಿಬಿದ್ದರು. ಇತರೆ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದರು. ಈ ಹಂತದಲ್ಲಿ ಕೆಲ ಹಲ್ಲೆ ಕೋರ ವಿದ್ಯಾರ್ಥಿಗಳು ಪರಾರಿಯಾದರು. ಘಟನೆ ಖಂಡಿಸಿರುವ ಕೆಲ ವಿದ್ಯಾರ್ಥಿನಿಯರು ಮಧ್ಯಾಹ್ನ ಎರಡುಗಂಟೆಯಿಂದ ನಾಲ್ಕು ಗಂಟೆವರೆಗೂ ಸಾರಿಗೆ ಸಂಸ್ಥೆ ಬಸ್‌ನಿಲ್ದಾಣದಲ್ಲಿ ಮಹಿಳಾ ಪೊಲೀಸರು ಅಥವಾ ಪೊಲೀಸರನ್ನು ನಿಯೋಜಿಸಿದರೆ ಇಂತಹ ಕುಕೃತ್ಯಗಳಿಗೆ ಕಡಿವಾಣ ಬೀಳುತ್ತವೆ, ಈ ನಿಟ್ಟಿನಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದಿದ್ದಾರೆ.
ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ- ಹಲ್ಲೆಕೋರರ ಬಂಧನ
Get real time updates directly on you device, subscribe now.
Comments are closed.