ಹಸಿವಿನಿಂದ ಕಂಗಾಲಾದವರಿಗೆ ಸಹಾಯ
ಶಿರಾ: ಕೊರೊನಾ ವೈರಸ್ ನಿಂದ ದೇಶವೇ ಲಾಕ್‌ಡೌನ್ ಆಗಿದೆ. ಇದರಿಂದ ನಿರ್ಗತಿಕರು, ಭಿಕ್ಷುಕರು ಸೇರಿದಂತೆ ಹಸಿವಿನಿಂದ ಕಂಗಾಲಾದವರಿಗೆ ಸಾಮಾಜಿಕ ಹೋರಾಟಗಾರ ಲಿಂಗದಹಳ್ಳಿ ಚೇತನ್‌ಕುಮಾರ್ ಅನ್ನ ಉಣಬಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ನಿಷ್ಕಾಮ ಕೆಲಸದ ಮೂಲಕ ಹಲವು ಮಂದಿಯಿಂದ ಕೃತಜ್ಞತೆಗೆ ಪಾತ್ರರಾಗಿದ್ದಾರೆ.
ಸ್ನೇಹಿತರು, ಸಮಾನ ಮನಸ್ಕರು, ಕಷ್ಟಗಳಿಗೆ ತುಡಿಯುವ ಮನಸ್ಸುಳ್ಳವರು ಪರಸ್ಪರ ಒಗ್ಗೂಡಿ ಕೈಜೋಡಿಸಿದರೆ ಇಂತಹ ಕಾರ್ಯಗಳು ಸುಲಲಿತವಾಗಿ ನೆರವೇರುತ್ತದೆ ಎಂದು ಲಿಂಗದಹಳ್ಳಿ ಚೇತನ್ ಕುಮಾರ್ ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಆಹಾರವಿಲ್ಲದೆ ಪರಿತಪಿಸುತ್ತಿರುವ ಜನರ ಸಂಕಷ್ಟವನ್ನು ಅರಿತು ಸ್ವಯಂಪ್ರೇರಿತರಾಗಿ ನಾನು ಮತ್ತು ನಮ್ಮ ತಂಡ ಆಹಾರ ಒದಗಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇವೆ.
ಚಿತ್ರಾನ್ನ, ರೈಸ್ ಬಾತ್ ಸೇರಿದಂತೆ ಪ್ರತಿದಿನ ಬೇರೆ ಬೇರೆ ಆಹಾರ ತಯಾರಿಸಿ ಪ್ಯಾಕ್ ಮಾಡಿ ಸರಬರಾಜು ಮಾಡುತ್ತಿದ್ದೇವೆ. ಜೊತೆಗೆ ಅರ್ಧ ಲೀಟರ್ ನೀರಿನ ಬಾಟಲ್ ನೀಡುತ್ತಿದ್ದೇವೆ. ಅಡುಗೆ ತಯಾರಿಕೆಯಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಿ ಗ್ಲೌಸ್, ಹೆಪ್ರಾನ್ ಧರಿಸಿ ಅಡುಗೆ ಭಟ್ಟರಿಂದಲೇ ಆಹಾರ ಪದಾರ್ಥ ತಯಾರಿಸಲಾಗುತ್ತಿದೆ. ಕರ್ತವ್ಯ ನಿರತ ಪೊಲೀಸರಿಗೂ ಆಹಾರ ನೀಡಲಾಗುತ್ತಿದೆ. ವಲಸಿಗರಿಗೆ ಮತ್ತು ಪೊಲೀಸರಿಗೆ ಮಾಸ್ಕ್ ಬಳಸಿ ಮುಂದಿನ ಕಾರ್ಯ ಕೈಗೊಳ್ಳಿ ಎಂದು ಎಚ್ಚರಿಸುತ್ತಿರುವುದಾಗಿ ಹೇಳಿದರು.
ಶಿರಾ ಎಪಿಎಂಸಿ, ಕೃಷ್ಣ ನಗರ, ಬೈಪಾಸ್, ಶಿರಾ ಟೋಲ್‌ಗೇಟ್, ಕಳ್ಳಂಬೆಳ್ಳ ಹೀಗೆ ನಾನಾ ಕಡೆ ಆಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಮಾನವೀಯತೆ ತೋರುವುದು ನಮ್ಮ ಧರ್ಮ, ಎಲ್ಲಿಂದಲೋ ಬಂದವರು ಇಲ್ಲಿ ಯಾರನ್ನು ಅನ್ನ ನೀಡಿ ಎಂದು ಕೇಳಲು ಸಾಧ್ಯ. ಅಂತಹವರಿಗೆ ನಮ್ಮ ನೆರವು ಎಂದು ಹೇಳಿದರು.
ಹೀಗೆ ತೊಡಗಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದು ಮತ್ತೊಂದು ವಿಶೇಷ.
Comments are closed.