ಪಶುಗಳ ಉತ್ತಮ ಆರೋಗ್ಯಕ್ಕೆ ಸ್ಪೆಷಾಲಿಟಿ ಆಸ್ಪತ್ರೆ: ಸಚಿವ

327

Get real time updates directly on you device, subscribe now.

ತುಮಕೂರು: ಜಿಲ್ಲೆಯ ಪಶುಗಳ ಉತ್ತಮ ಆರೋಗ್ಯಕ್ಕಾಗಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರದ ಶಿರಾಗೇಟ್‌ ಬಳಿಯ ಅರಳೀಮರದ ಪಾಳ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಸ್ಪೆಷಾಲಿಟಿ ಪಶು ಆಸ್ಪತ್ರೆ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗುಣವಾಗದ ಮತ್ತು ತುರ್ತು ಸಂದರ್ಭಗಳಲ್ಲಿ ರಾಸುಗಳನ್ನು ನಗರದ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಿಸಿ ಅಗತ್ಯ ಚಿಕಿತ್ಸೆ ಕೊಡಿಸಬೇಕು, ತಾಲೂಕು ಪಶು ಆಸ್ಪತ್ರೆಗಳಿಂದ ಶಿಫಾರಸ್ಸು ಮಾಡಲಾದ ಪ್ರಾಣಿಗಳನ್ನು ಈ ಆಸ್ಪತ್ರೆಯಲ್ಲಿ ಆಧುನಿಕ ಸೌಲಭ್ಯಗಳಾದ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌, ಎಕ್ಸ್ ರೇ, ಪ್ರಯೋಗಾಲಯ ಹಾಗೂ ಶಸ್ತ್ರಚಿಕಿತ್ಸೆ ಸೌಲಭ್ಯಗಳೊಂದಿಗೆ ಚಿಕಿತ್ಸೆ ನೀಡಲಾಗುವುದು ಎಂದರು.
ಈ ಆಸ್ಪತ್ರೆ ನಿರ್ಮಾಣದಿಂದ ಸಾರ್ವಜನಿಕರು ತಮ್ಮ ಸಾಕು ಪ್ರಾಣಿಗಳನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಒಯ್ಯುವುದು ತಪ್ಪುತ್ತದೆ ಎಂದರಲ್ಲದೆ, ತುಮಕೂರು ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸುತ್ತಿದ್ದು, ಇದಕ್ಕೆ ಪೂರಕವಾಗಿ ಪಶುಗಳ ಆರೋಗ್ಯ ಸ್ಥಿತಿಯನ್ನು ಉತ್ತಮವಾಗಿಡಲು ಇಂತಹ ಆಸ್ಪತ್ರೆಗಳು ಸಹಕಾರಿಯಾಗಲಿವೆ ಎಂದರು.
ಜಿಲ್ಲೆಯಲ್ಲಿ ಹರಡುತ್ತಿರುವ ಕೋವಿಡ್‌ ಸೋಂಕು ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್‌ ಸೋಂಕು ಹೆಚ್ಚುತ್ತಿದ್ದರೂ ಸೋಂಕಿನ ತೀವ್ರತೆ ಅಷ್ಟೇನು ಇಲ್ಲದಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಶೇ.87 ರಷ್ಟು ಎರಡನೇ ಡೋಸ್‌ ಲಸಿಕಾಕರಣ ಪೂರ್ಣಗೊಂಡಿದ್ದು, ಲಸಿಕಾಕರಣವನ್ನು ಶೇ.100 ರಷ್ಟನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು, ಲಸಿಕೆ ಪಡೆದ ಪರಿಣಾಮ ವೈರಾಣು ಇದ್ದರೂ ದೇಹಕ್ಕೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಹಾಗಾಗಿ ಭಯಪಡದೆ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಕಳೆದ ಮೂರ್ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆಸ್ಪತ್ರೆಯ ಕಟ್ಟಡವನ್ನು ಅಗತ್ಯ ಮೂಲ ಸೌಕರ್ಯಗಳೊಂದಿಗೆ ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದು, ಆಸ್ಪತ್ರೆಯ ಸಿಬ್ಬಂದಿ ದಕ್ಷವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಜಿ.ವಿ.ಜಯಣ್ಣ, ಸ್ಪೆಷಾಲಿಟಿ ಆಸ್ಪತ್ರೆಯ ಉಪ ನಿರ್ದೇಶಕ ಡಾ.ಎ.ಸಿ.ದಿವಾಕರ್‌, ಕರ್ನಾಟಕ ರಾಜ್ಯ ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ರುದ್ರಪ್ರಸಾದ್‌, ಡಾ.ವಿಶ್ವನಾಥ್‌, ಡಾ.ಮಹಲಿಂಗೇಶ್ವರ್‌ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!