ಓಂಕಾರ್‌ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ

321

Get real time updates directly on you device, subscribe now.

ತುಮಕೂರು: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಎಸ್ಸಿ ಮೋರ್ಚಾ ಅಧ್ಯಕ್ಷರ ಬೀಳ್ಕೋಡುಗೆ ಮತ್ತು ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಬಿಜೆಪಿ ಜಿಲ್ಲಾಧ್ಯಕ್ಷ ಲಕ್ಷ್ಮೀಶ್‌ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ಸಿ ಮೋರ್ಚಾ ನೂತನ ಜಿಲ್ಲಾಧ್ಯಕ್ಷ ಓಂಕಾರ್‌ ಅವರಿಗೆ ಪಕ್ಷದ ಬಾವುಟ ನೀಡಿ ಅಧಿಕಾರ ಹಸ್ತಾಂತರಿಸಿದ ಜಿಲ್ಲಾಧ್ಯಕ್ಷ ಲಕ್ಷ್ಮೀಶ್‌ ಮಾತನಾಡಿ, ಪಕ್ಷದ ಸಿದ್ಧಾಂತ ಒಪ್ಪಿ, ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವವರನ್ನು ಗುರುತಿಸಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ಈ ಹಿಂದಿನಿಂದಲೂ ನಡೆಯುತ್ತಿದೆ, ಪ್ರಸ್ತುತ ಕ್ಯಾತ್ಸಂದ್ರದ ಮಾತೃಶ್ರೀ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗುರುಪ್ರಸಾದ್‌ ಮತ್ತು ಅವರ ಬೆಂಬಲಿಗರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು, ಆ ಭಾಗದಲ್ಲಿ ಪಕ್ಷ ಸಂಘಟನೆಗೆ ಬಲ ಬಂದಿದೆ ಎಂದರು.
ಶಾಸಕ ಜಿ.ಬಿ.ಜೋತಿಗಣೇಶ್‌ ಮಾತನಾಡಿ, ಪಕ್ಷದಲ್ಲಿ ಇಂದು ಜವಾಬ್ದಾರಿ ಹೆಚ್ಚಿದೆ, ಪಕ್ಷ ಮಾಡಿದ ಒಳ್ಳೆಯ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು, ಪಕ್ಷದ ಸೋಲಿಗೆ ಕೆಲವೊಮ್ಮೆ ಇಂತಹ ಘಟನೆಗಳು ಕಾರಣವಾಗುತ್ತವೆ, ಹಾಗಾಗಿ ಸಕ್ರಿಯ ಕಾರ್ಯಕರ್ತರ ಅಗತ್ಯವಿದೆ, ವಿಸಿಟಿಂಗ್‌ ಕಾರ್ಡು ಕಾರ್ಯಕರ್ತರ ಅಗತ್ಯವಿಲ್ಲ, ಅಪಪ್ರಚಾರಗಳಿಗೆ ಜನರು ಕಿವಿಗೊಡದಂತೆ ಎಚ್ಚರಿಕೆ ವಹಿಸಬೇಕಾಗಿದೆ, ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಂಬೇಡ್ಕರ್‌ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಕಾನ್‌ ಆಗಿ ಬಿಂಬಿಸಲಾಗಿದೆ, ಇದನ್ನು ಪ್ರತಿಯೊಬ್ಬರು ಮನಗಾಣಬೇಕೆಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್‌ ಮಾತನಾಡಿ, ತುಮಕೂರು ಜಿಲ್ಲೆಯನ್ನು ಇನ್ನೂ ಹೆಚ್ಚು ಶಕ್ತಿಯುತ ಮಾಡಬೇಕೆಂಬ ಉದ್ದೇಶದಿಂದ ಎರಡು ಜಿಲ್ಲೆಯಾಗಿ ಮಾಡಲಾಗಿದೆ, ಮಧುಗಿರಿ ಮತ್ತು ತುಮಕೂರು ಮಾಡಲಾಗಿದೆ, ಇದರಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಇದೆ, ಕಾರ್ಯಕರ್ತರಿಗೆ ಹೆಚ್ಚು ಜವಾಬ್ದಾರಿ ಕೊಟ್ಟರೆ ಮತ್ತಷ್ಟು ವಿಸ್ತರಿಸಲು ಸಾಕಷ್ಟು ಅವಕಾಶವಿದೆ. ಹೊಸ ಜಿಲ್ಲೆಯಾದ ಮಧುಗಿರಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರನ್ನು ನೋಡುವಂತಾಗಬೇಕು ಎಂದರು.
ಎಸ್ಸಿ ಜಿಲ್ಲಾ ಮೋರ್ಚಾ ಅಧ್ಯಕ್ಷರಾಗಿ ನೇಮಕಗೊಂಡಿರುವ ಓಂಕಾರ್‌ ಮಾತನಾಡಿ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಎಲ್ಲಾ ಎಸ್ಸಿ ಕ್ಷೇತ್ರಗಳಲ್ಲಿಯೂ ಪ್ರವಾಸ ಮಾಡಿ, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು, ಹಾಗೆಯೇ ಮುಂಬರುವ 2023ರ ವಿಧಾನಸಭಾ ಚುನಾವಣೆಗಳಲ್ಲಿ ಎಲ್ಲಾ 11 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ, ಪರಿಶಿಷ್ಟ ಜಾತಿಯ ಮತಗಳನ್ನು ಪಕ್ಷದ ಅಭ್ಯರ್ಥಿಗೆ ನೀಡುವಂತೆ ಮನವೊಲಿಸಲಾಗುವುದು ಎಂದರು.
ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ವೈ.ಹೆಚ್. ಹುಚ್ಚಯ್ಯ ಮಾತನಾಡಿ, ಇದುವರೆಗೂ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷನಾಗಿದ್ದ ನನ್ನನ್ನು, ಜಿಲ್ಲಾ ಉಪಾಧ್ಯಕ್ಷರನ್ನಾಗಿ ಪಕ್ಷ ನೇಮಕ ಮಾಡಿದೆ.ಯುವಕರಿಗೆ ಎಸ್ಸಿ ಮೋರ್ಚಾ ಜವಾಬ್ದಾರಿ ನೀಡಿದೆ. ಅವರೊಂದಿಗೆ ಸೇರಿ ಜಿಲ್ಲೆಯಲ್ಲಿ ಪ್ರವಾಸ ಮಾಡಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸುವುದಾಗಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಸಮ್ಮುಖದಲ್ಲಿ ಗುರುಪ್ರಸಾದ್‌ ಮತ್ತು ಬೆಂಬಲಿಗರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ಪಕ್ಷದ ಉಪಾಧ್ಯಕ್ಷ ವೈ.ಹೆಚ್‌.ಹುಚ್ಚಯ್ಯ, ಎಸ್ಸಿ ಮೋರ್ಚಾದ ನೂತನ ಅಧ್ಯಕ್ಷ ಓಂಕಾರ್‌ ಅವರನ್ನು ಅಭಿನಂದಿಸಲಾಯಿತು. ಪಕ್ಷದ ಮುಖಂಡರಾದ ನರಸಿಂಹಮೂರ್ತಿ, ಹನುಮಂತರಾಜು, ವರದರಾಜು, ಅಂಜನಮೂರ್ತಿ, ಸಂದೀಪ್‌ಗೌಡ, ಯಶಸ್‌ ಮತ್ತಿತರರರು ಇದ್ದರು.

Get real time updates directly on you device, subscribe now.

Comments are closed.

error: Content is protected !!