ಕುಣಿಗಲ್: ತಾಲೂಕಿನಲ್ಲಿ ಕೊವಿಡ್ ಮೂರನೆ ಅಲೆಯಲ್ಲಿ ಸೋಂಕಿತ ವೈರಾಣು ಮಾದರಿ ಪರೀಕ್ಷೆಗೆ ತಾಲೂಕಿನ ಯಾವುದೇ ವೈದ್ಯರು ಮುಂದಾಗಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಶಾಸಕ ಡಾ.ರಂಗನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ತಾಪಂ ಸಭಾಂಗಣದಲ್ಲಿ ಕೊವಿಡ್ ಮೂರನೆ ಅಲೆಯ ಬಗ್ಗೆ ನಡೆದ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ, ಮೂರನೆ ಅಲೆ ಫೆಬ್ರವರಿ ಮೊದಲ ವಾರದಲ್ಲಿ ತಾರಕಕ್ಕೆ ಏರುವ ಸಾಧ್ಯತೆ ಇದೆ. ಮೂರನೆ ಅಲೆಯಿಂದ ಹೆಚ್ಚು ಅಪಾಯ ಇರುವುದು ರೋಗ ನಿರೋಧಕ ಶಕ್ತಿ ಕಡಿಮೆ ಇರುವಂತವರು, ಹೃದ್ರೋಗಿ, ಕ್ಯಾನ್ಸರ್, ಟಿಬಿ, ಎಚ್‌ಐವಿ ಸೋಂಕಿತರು ಇವರಿಗೆ ಎಚ್ಚರದಿಂದ ಇರುವಂತೆ ಸೂಚಿಸಿ, ಸೋಂಕಿನ ಲಕ್ಷಣವಾದ ಜ್ವರ, ನೆಗಡಿ, ಗಂಟಲು ಕೆರೆತ ಇವುಗಳ ಬಗ್ಗೆ ಅರಿವು ಮೂಡಿಸಿ, ಇದುವರೆಗೂ ತಾಲೂಕಿನಲ್ಲಿ ಎರಡು ಸಾವಿರ ಪ್ರಕರಣ ವರದಿಯಾಗಿದೆ, ಸೋಂಕಿತರ ವೈರಾಣು ಮಾದರಿಯ ಪರೀಕ್ಷೆಗೆ (ಜಿನಾಮಿಕ್‌ಸೀಕ್ವೆನ್ಸ್) ಯಾವುದೆ ಮಾದರಿ ಕಳಿಸಿಲ್ಲ, ಬಿ-2 ತಳಿಯು ಆರ್‌ಟಿಪಿಸಿಆರ್ ಪರೀಕ್ಷೆಗೂ ಸಿಗದೆ ನುಸುಳುತ್ತದೆ ಇದರ ಬಗ್ಗೆ ವೈದ್ಯರಲ್ಲೂ ಅರಿವಿರಬೇಕು ಎಂದರು.
ಈಗಾಗಲೆ ಎರಡುಕೋವಿಡ್ ಅಲೆಗಳಲ್ಲಿ ತಾಲೂಕಿನಲ್ಲಿ ಹತ್ತು ಸಾವಿರಮಂದಿ ಬಳಲಿ ಚೇತರಿಸಿಕೊಂಡಿದ್ದಾರೆ. ಇವರಲ್ಲಿ ಕೊವಿಡ್ ಚಿಕಿತ್ಸೆಯ ನಂತರ ಸಾಕಷ್ಟು ಅಡ್ಡಪರಿಣಾಮಗಳಿವೆ, ಇವುಗಳ ಬಗ್ಗೆ ಆಯಾ ರೋಗಿಗಳನ್ನು ಸಂಪರ್ಕಿಸಿ ಸಮಗ್ರ ವರದಿ ತಯಾರಿಸಿ ಇಡೀ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ತಾಲೂಕಿನ ವೈದ್ಯರು ಕೆಲಸ ಮಾಡಬೇಕು, ಕೊವಿಡ್ ಲಸಿಕೆ ಪಡೆಯದಿರುವವರ ಬಗ್ಗೆ ಮಾಹಿತಿ ಪಡೆದ ಶಾಸಕರು, ತಹಶೀಲ್ದಾರ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಲಸಿಕೆ ಪಡೆಯದಿರುವವರು ಲಸಿಕೆ ಪಡೆಯುವಂತೆ, ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ತೆರಿಗೆ ನೀಡುವಂತ ಸ್ಥಿತಿ ನಿರ್ಮಾಣವಾಗುತ್ತಿದ್ದು ಇದನ್ನು ಸರಿಪಡಿಸಿಕೊಳ್ಳಬೇಕು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚಿನ ದೂರು ಕೇಳಿಬರುತ್ತಿವೆ, ಇದನ್ನು ಸರಿಪಡಿಸಿಕೊಳ್ಳಬೇಕು, ಇಲ್ಲವಾದಲ್ಲಿ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೊವಿಡ್‌ನಿಂದ ಮೃತಪಟ್ಟ ಕುಟುಂಬದವರ ದಾಖಲೆ ಪಡೆದು ಎಲ್ಲಾ ಅರ್ಹರಿಗೂ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ್ ಮಾತನಾಡಿ, ಮೂರನೆ ಅಲೆ ತಪಾಸಣೆಯನ್ನು ಡಿಸೆಂಬರ್‌ನಿಂದ ದಿನಾಲೂ ಸಾವಿರ ಮಾಡುತ್ತಿದ್ದು, ಜನವರಿಯಿಂದ ಕಡಿಮೆ ಅಂದರೆ 430 ಪರೀಕ್ಷೆ ನಡೆಸಲಾಗುತ್ತಿದೆ, ಜನವರಿ 15 ರಿಂದ ಹೆಚ್ಚಿನ ಸೋಂಕು ಕಂಡು ಬಂದಿದ್ದು ಇದುವರೆಗೂ 1802 ಮಂದಿಗೆ ಸೋಂಕು ಕಂಡುಬಂದಿದ್ದು ಇದರಲ್ಲಿ 108 ಲಸಿಕೆಯ ಮೊದಲ ಡೋಸ್, 408 ಮಂದಿ ಲಸಿಕೆಯ ಎರಡು ಡೋಸ್, ಹತ್ತು ಮಂದಿ ಲಸಿಕೆಯ ಮೂರು ಡೋಸ್ ಪಡೆದಿದ್ದಾರೆ, ಗ್ರಾಮಾಂತರ ಪ್ರದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹೇಳಿದರೆ ಆರೋಗ್ಯ ಸಿಬ್ಬಂದಿಯನ್ನು ನಿಂದಿಸುತ್ತಾರೆ, ಮನ ಒಲಿಸಲು ಎಲ್ಲಾ ಪ್ರಯತ್ನ ಮಾಡಿದರೂ ಇನ್ನು ನಾಲ್ಕು ಸಾವಿರದಷ್ಟು ಮಂದಿ ಹಾಕಿಸಿಕೊಂಡಿಲ್ಲ, 15 ರಿಂದ 18ರ ವಯೋಮಾನದ 9741 ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದರು.
ತಹಶೀಲ್ದಾರ್ ಮಹಾಬಲೇಶ್ವರ್ ಮಾತನಾಡಿ, ಕೊವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ನೀಡಲು ಅಪರ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಇದ್ದು ಪರಿಶೀಲನೆ ನಡೆಸಿ ಅನುಮೋದನೆ ನೀಡುತ್ತಿದೆ, ಇದುವರೆಗೂ ಮುನ್ನೂರು ಅರ್ಜಿ ಸಲ್ಲಿಕೆಯಾಗಿದ್ದು ಇವುಗಳಲ್ಲಿ ಸುಮಾರು ಅರ್ಜಿಗಳಿಗೆ ಸಮರ್ಪಕ ದಾಖಲೆ ಇಲ್ಲ, ದಾಖಲೆಗಳಿರುವ ಅರ್ಹರಿಂದ ಅರ್ಜಿ ಪಡೆದು ಸಲ್ಲಿಸುವಂತೆ ಸೂಚಿಸಿ, ಲಸಿಕೆ ಪಡೆಯದೆ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ಸಿಪಿಐ ರಾಜು, ಮುಖ್ಯಾಧಿಕಾರಿ ರವಿಕುಮಾರ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್‌ಬಾಬು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಇದ್ದರು.
Get real time updates directly on you device, subscribe now.
Prev Post
Next Post
Comments are closed.