Source By-ವಿಜಯ ಕುಮಾರ್ ತಾಡಿ.
ಶಿರಾ: ಪ್ರಸ್ತುತ ಯುಗಾದಿ ಜನಸಾಮಾನ್ಯರಿಗೆ ಬೆಲ್ಲಕ್ಕಿಂತ ಬೇವನ್ನು ತಿನ್ನಿಸಿದ್ದೇ ಹೆಚ್ಚು. ಅದರಲ್ಲೂ ಕರೋನ ನೆಪದಲ್ಲಿ ಸರ್ಕಾರ ಲಾಕ್‌ಡೌನ್ ಘೋಷಿಸಿದ ಮೇಲೆ, ತಿಂಗಳುಗಳಗಟ್ಟಲೆ ಕಷ್ಟಪಟ್ಟು ರೈತರು ಬೆಳೆದ ಬೆಳೆಗೆ ಮಾರುಕಟ್ಟೆ, ಬೆಲೆ ದಕ್ಕದೇ ತೀವ್ರ ಕಹಿ ಅನುಭವಿಸುವಂತಾಗಿದೆ. ಮಾರುಕಟ್ಟೆ ಲಭ್ಯವಿಲ್ಲದೇ ರೈತರು ಲಕ್ಷಾಂತರ ಮೌಲ್ಯದ ಬೆಳೆಗಳನ್ನು ಜಮೀನಿನಲ್ಲೇ ಬಿಟ್ಟು ಕಣ್ಣೀರು ಹಾಕುವ ಸ್ಥಿತಿ ತಲುಪಿದ್ದು, ಸರ್ಕಾರ ಯಾವುದಾದರೂ ರೀತಿಯಲ್ಲಿ ಸ್ಪಂದಿಸಬಹುದೇ ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ರೈತನಿಗೆ ಹೊರೆಯಾದ ಕರಬೂಜಾ ಮತ್ತು ಕಲ್ಲಂಗಡಿ:
ತಾಲ್ಲೂಕಿನ ಗೌಡಗೆರೆ ಹೋಬಳಿ, ಲಕ್ಕವ್ವನಹಳ್ಳಿ ಗ್ರಾಮ ರೈತ ರಮೇಶ್ ೫ ಎಕರೆ ಪ್ರದೇಶದಲ್ಲಿ ಕರಬೂಜಾ ಬೆಳೆದಿದ್ದು, ಗುತ್ತಿಗೆಗೆ ಪಡೆದಿದ್ದ ಭೂಮಿಯಲ್ಲಿ ಸುಮಾರು ೫ ಲಕ್ಷ ರೂಪಾಯಿ ಸಾಲ ಮಾಡಿ ಬೆಳೆದಿದ್ದ ಸುಮಾರು ೧೫೦ ಟನ್ ಹಣ್ಣು ಹೊಲದಲ್ಲೇ ಕೊಳೆಯುವಂತಾಗಿದೆ. ಶ್ರೀರಾಮನವಮಿ ಹಬ್ಬದ ವೇಳೆಗೆ ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಮಾಡಿಕೊಂಡಿದ್ದ ಎಲ್ಲ ಬಗೆಯ ಸಿದ್ದತೆಗಳೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಸಮೀಪದ ಬಡಮಂಗನಹಟ್ಟಿಯ ಯುವ ರೈತ ಸಮಿತ್‌ಗೌಡ ಬೆಂಗಳೂರು ಬಿಟ್ಟು ಬಂದು ಸ್ವಗ್ರಾಮದಲ್ಲಿ ಕೃಷಿ ಮಾಡುತ್ತಿದ್ದು, ಸುಮಾರು ಮೂರೂವರೆ ಎಕರೆ ಪ್ರದೇಶದಲ್ಲಿ ಕರಬೂಜಾ ಬೆಳೆದಿದ್ದು, ಉತ್ತಮ ಫಸಲು ದಕ್ಕಿದೆ. ಆದರೆ ಅದೃಷ್ಟ ರೈತನ ಕೈ ಹಿಡಿಯುತ್ತಿಲ್ಲ. ಕೆಲವೇ ದಿನಗಳ ಹಿಂದೆ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡುವ ಕನಸು ಕಂಡಿದ್ದ ರೈತನ ಕಣ್ಣಿನಲ್ಲಿ ಇಂದು ನಿರಾಸೆ ತುಂಬಿಕೊಂದಿದೆ. ಕರಬೂಜ ಬೆಳೆದ ಇಬ್ಬರೂ ತಮಗೆ ಹತ್ತಾರು ಲಕ್ಷಕ್ಕೂ ಹೆಚ್ಚು ಮೊತ್ತದಷ್ಟು ನಷ್ಟ ಸಂಭವಿಸಿದೆ ಎಂದು ಅವಲತ್ತುಕೊಂಡಿದ್ದಾರೆ.
ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಬಡಮಂಗನಹಟ್ಟಿಯ ರೈತ ಮಾಲತೇಶ್ ತನ್ನ ಎರಡು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದು, ಸರ್ಕಾರದ ಲಾಕ್‌ಡೌನ್ ಘೋಷಣೆಯಿಂದಾಗಿ ಮಾರುಕಟ್ಟೆ ಸಮಸ್ಯೆ ಎದುರಿಸುವಂತಾಗಿದೆ. ಜೊತೆಗೆ ಹಾಪ್‌ಕಾಮ್ ನವರು ಖರೀದಿ ಮಾಡುತ್ತಾರೆ ಎಂಬ ನಂಬಿಕೆಯೂ ಹುಸಿಯಾಗಿದ್ದು, ಬೆಳೆದ ಕಲ್ಲಂಗಡಿಯನ್ನು ಗಿಡದಲ್ಲೇ ಕೊಳೆಯಲು ಬಿಟ್ಟು, ಕಣ್ಣಿರಿನಲ್ಲಿ ಕೈತೊಳೆಯುವಂತಾಗಿದೆ. ಪ್ರಕರಣದಲ್ಲಿ ರೈತನಿಗೆ ನಾಲ್ಕಾರು ಲಕ್ಷ ರೂಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದೇ ಮಾದರಿಯಲ್ಲಿ ಪಪ್ಪಾಯ ಬೆಳೆದಿದ್ದ ಹೊಸಹಳ್ಳಿ ಗ್ರಾಮದ ರೈತ ರಮೇಶ್ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ತಲುಪಿಸಲಾಗದೇ, ಕಂಗಾಲಾಗಿ ಹೋಗಿದ್ದಾನೆ. ಇಲ್ಲಿಯೂ ರೈತನೇ ನತದೃಷ್ಟ ನಷ್ಟದಾರ!
ಮೇಲಿನ ಎಲ್ಲಾ ಪ್ರಕರಣಗಳಲ್ಲೂ ರೈತರಿಗೆ ಒಂದೇ ಬಗೆಯ ಸಮಸ್ಯೆಯನ್ನು ಕಾಣಬಹುದಾಗಿದೆ. ಸರ್ಕಾರದ ಲಾಕ್‌ಡೌನ್ ಪರಿಣಾಮ ವಾಹನ ಸೌಲಭ್ಯ ಸಿಕ್ಕದೇ ಕಟಾವಿಗೆ ಬಂದಿರುವ ಹಣ್ಣನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಲಾಗದೇ ಇರುವ ಜಾಗದಲ್ಲೇ ಕೊಳೆಯುತ್ತಿರುವುದನ್ನು ಕಂಡು ರೈತರು ಕಣ್ಣೀರು ಹಾಕುವಂತಾಗಿದೆ. ಲಾಭವಿರಲಿ, ಕನಿಷ್ಟ ಬೆಳೆಯ ಮೇಲೆ ಹೂಡಿದ ಬಂಡವಾಳವಾದರೂ ಗಿಟ್ಟೀತೇ ಎಂದು ರೈತರು ಆಸೆಯಿಂದ ಕಾಯುವಂತಾಗಿದೆ. ಎಲ್ಲ ಪ್ರಕರಣಗಳಲ್ಲಿ ರೈತರಿಗೆ ಲಕ್ಷಾಂತರ ಮೊತ್ತದ ನಷ್ಟ ಸಂಭವಿಸಿದೆ. ಇಷ್ಟಾದರೂ ಸಂಬಂಧಪಟ್ಟ ಇಲಾಖೆಯಾಗಲೀ, ತಾಲ್ಲೂಕು ಆಡಳಿತವಾಗಲೀ, ಸರ್ಕಾರವಾಗಲೀ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎನ್ನುವ ದೂರು ಕೇಳಿಬಂದಿದೆ
ರೈತನನ್ನು ಬಾಡಿಸಿದ ಹೂವು:
ತಾಲ್ಲೂಕಿನ ಮಸುಗಲೋಟಿ ಗ್ರಾಮದ ರೈತ ತಿಪ್ಪೇಶ್ ಗೌಡ ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಗುಲಾಬಿ ಹೂವು ಬೆಳೆದಿದ್ದು, ಚೈತ್ರ-ವೈಶಾಖ ಮಾಸಗಳಲ್ಲಿ ನಡೆಯುವ ಶುಭ ಕಾರ್ಯಕ್ರಮಗಳ ಕಾರಣ ತನ್ನ ಗುಲಾಬಿ ಹೂವಿಗೆ ಉತ್ತಮ ಬೇಡಿಕೆ ಸಿಗಲಿದ್ದು, ಉತ್ತಮ ಲಾಭ ಸಿಗಲಿದೆ ಎಂದು ನಿರೀಕ್ಷಿಸಿದ್ದ. ಲಾಕ್‌ಡೌನ್ ಪರಿಣಾಮ ಶುಭಕಾರ್ಯಗಳು ಮುಂದೂಡಲ್ಪಟ್ಟು, ಕನಿಷ್ಟ ಹಬ್ಬಗಳನ್ನೂ ಸರಿಯಾಗಿ ಮಾಡದ ಸ್ಥಿತಿಯಲ್ಲಿ ಜನರು ಇರುವಾಗ, ಮಾರುಕಟ್ಟೆಯಲ್ಲಿ ಹೂವಿಗೆ ಬೇಡಿಕೆ ಪಾತಾಳಕ್ಕೆ ಕುಸಿದಿದೆ.
ಇಂಥ ಸಂದರ್ಭದಲ್ಲಿ ಹೂಗಳನ್ನು ಬಿಡಿಸಲು ನೀಡುವ ಕೂಲಿಯೂ ಗಿಟ್ಟದೇ ಇರುವ ಸ್ಥಿತಿ ತಲುಪಿದ ಕಾರಣ, ಹೂಗಳನ್ನು ಅನಿವಾರ್ಯವಾಗಿ ಗಿಡದಲ್ಲೇ ಬಿಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಹೂ ಬೆಳೆದ ರೈತನಿಗೆ ಸುಮಾರು ಐದು ಲಕ್ಷ ಮೊತ್ತದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಇದೇ ರೀತಿಯಲ್ಲಿ ನೇರಲಹಳ್ಳಿ ಗ್ರಾಮದಲ್ಲಿ ಸೇವಂತಿಗೆ ಹೂ ಬೆಳೆದಿದ್ದ ರೈತ ಶ್ರೀಧರ ಕೂಡಾ ಗಿಡದಲ್ಲೇ ಹೂ ಬಿಟ್ಟು, ತನ್ನ ವಿಧಿಗಾಗಿ ಹಳಿಯುವಂತಾಗಿದೆ.
ಮತ್ತೊಂದು ಪ್ರಕರಣದಲ್ಲಿ ಚೌಳಹಟ್ಟಿ ಗ್ರಾಮದ ರೈತ ಕಾಟೇಶ್ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಎಲೆ ಕೂಸು ಬೆಳೆದಿದ್ದು, ಖರೀದಿ ಮಾಡುವರಿಲ್ಲದೇ, ಕುರಿ ಮಂದೆ ಬಿಟ್ಟು ಮೇಯಿಸುವಂತಾಗಿದೆ. ಇದರಿಂದಲೂ ರೈತನಿಗೆ ಲಕ್ಷಾಂತರ ನಷ್ಟ ಸಂಭವಿಸಿದೆ. ಇದೇ ಅಲ್ಲದೇ ತಾಲ್ಲೂಕಿನ ಇನ್ನೂ ಹಲವಾರು ಗ್ರಾಮಗಳಲ್ಲಿ ವಿವಿಧ ಬೆಳೆ ಬೆಳೆದಿರುವ ರೈತರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.
ಜನತಾ ಕರ್ಫ್ಯೂ, ಲಾಕ್‌ಡೌನ್ ಗೆ ಕಾರಣವಾದ ಕೊರೋನಾ ವೈರಸ್ ಗಿಂತಲೂ, ರೈತನ ಬಾಳಿನಲ್ಲಿ ಬೆಳೆ ನಷ್ಟ ತೀವ್ರ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಸರ್ಕಾರ ಇಂಥ ರೈತರ ನೆರವಿಗೆ ಧಾವಿಸುವ ಅವಶ್ಯಕತೆ ಇದೆ. ಮಾರುಕಟ್ಟೆ ಸೌಲಭ್ಯ ಒದಗಿಸುವುದು, ದರ ವ್ಯತ್ಯಾಸ ಸರಿದೂಗಿಸಲು ಬೆಂಬಲ ಬೆಲೆ ಘೋಷಿಸುವುದು, ಬೆಳೆಗಾಗಿ ಮಾಡಿರುವ ಸಾಲ ಮನ್ನಾ ಮಾಡುವುದು ಅಥವಾ ಬೆಳೆ ನಷ್ಟ ಎಂದು ಪರಿಗಣಿಸಿ ವಿಮಾ ಮೊತ್ತವನ್ನಾದರೂ ಬಿಡುಗಡೆ ಮಾಡುವ ಮೂಲಕ ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ.
ಶಿರಾ ತಾಲೂಕಿನ ಲಕ್ವನಹಳ್ಳಿ ಗ್ರಾಮದಲ್ಲಿ ರೈತ ರಮೇಶ್ ಸುಮಾರು ಐದು ಎಕರೆ ಪ್ರದೇಶದಲ್ಲಿ ಬೆಳೆದ ಕರಬೂಜಾ ಹಣ್ಣು ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆ ಲಭ್ಯವಿಲ್ಲದೇ ಜಮೀನಿನಲ್ಲಿಯೇ ಕೊಳೆಯುತ್ತಿದೆ ಎಂದು ರೈತ ದೂರಿದ್ದಾನೆ.
ಶಿರಾ ತಾಲೂಕಿನ ಮುಸಕಲೋಟಿ ಗ್ರಾಮದಲ್ಲಿ ರೈತ ತಿಪ್ಪೇಶ್ ಗೌಡ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ಗುಲಾಬಿ ಹೂವು ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆ ಲಭ್ಯವಿಲ್ಲದೇ ಗಿಡದಲ್ಲಿಯೇ ಕೊಳೆಯುತ್ತಿದೆ ಎಂದು ರೈತ ದೂರಿದ್ದಾನೆ.
ಶಿರಾ ತಾಲೂಕಿನ ಬಡಮಂಗನಹಟ್ಟಿ ಗ್ರಾಮದಲ್ಲಿ ರೈತ ಮಾಲತೇಶ್ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಕಲ್ಲಂಗಡಿ ಹಣ್ಣು ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆ ಲಭ್ಯವಿಲ್ಲದೇ ಜಮೀನಿನಲ್ಲಿಯೇ ಕೊಳೆಯುತ್ತಿದೆ ಎಂದು ರೈತ ದೂರಿದ್ದಾನೆ.
Quotes:
ಕಲ್ಕೆರೆ ರವಿಕುಮಾರ್, ಸಮಾಜ ಸೇವಕ, ಶಿರಾ
ಶಿರಾ ತಾಲ್ಲೂಕಿನಲ್ಲಿ ರೈತರು ಬೆಳೆದ, ಈಗಾಗಲೇ ಕಟಾವಿನ ಹಂತದಲ್ಲಿರುವ ಕರಬೂಜಾ, ಕಲ್ಲಂಗಡಿ ಹಣ್ಣು, ಹೂವಿನ ಬೆಳೆಗಳು ಲಾಕ್‌ಡೌನ್ ಹಾಗೂ ರಸ್ತೆ ಸಂಚಾರ ನಿರ್ಬಂಧದಿಂದ ಜಮೀನಿನಲ್ಲಿ ಕೊಳೆಯುವಂತಾಗಿದ್ದು, ಹಾಪ್ಕಾಮ್ಸ್ ಮತ್ತು ಜಿಲ್ಲಾಡಳಿತ ಅನುಕೂಲ ಕಲ್ಪಿಸದ ಕಾರಣ ರೈತ ಕೈಗೆ ಬರಬೇಕಿದ್ದ ಹಣ ನಷ್ಟವಾಗುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ರೈತರ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದ್ದು, ತಕ್ಷಣ ಬೆಳೆ ನಷ್ಟ ಪರಿಹಾರ ನೀಡಿ ಇವರು ಪಡೆದಿರುವ ಸಾಲ ಮನ್ನಾ ಮಾಡಬೇಕು.
ತಿಪ್ಪೇಶ್ಗೌಡ, ಹೂವು ಬೆಳೆಗಾರ, ಮುಸುಗಲೋಟಿ
ನಾಲ್ಕು ಎಕರೆಯಲ್ಲಿ ಬೆಳೆದ ನಿತ್ಯ ಗುಲಾಬಿ ಹೂವಿನಿಂದ ಉತ್ತಮ ಆದಾಯ ಸಿಗುವ ನಿರೀಕ್ಷೆ ಇತ್ತು. ಈ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದು, ದೇವಸ್ಥಾನದಲ್ಲಿನ ಪೂಜಾ ಕಾರ್ಯಗಳು, ಶುಭ ಸಮಾರಂಭಗಳು ನಿಂತ ಕಾರಣ, ನಮ್ಮ ಜೀವನವನ್ನೆ ಲಾಕ್ ಮಾಡಿದಂತಾಗಿದೆ. ಸರ್ಕಾರ ರೈತನಿಗೆ ಅನುಕೂಲ ಕಲ್ಪಿಸಿ ತಕ್ಷಣ ನೆರವು ಕೊಡಲು ಸಾಧ್ಯವಾಗದಿದ್ದರೂ, ಲಾಕ್‌ಡೌನ್ ಮುಗಿದ ನಂತರವಾದರೂ ರೈತರ ನೆರವಿಗೆ ಬರಲಿ. ಬೆಳೆ ನಷ್ಟ, ವಿಮೆ ಯಾವುದಾದರೊಂದು ರೀತಿಯಲ್ಲಿ ಹಣ ನೀಡಿ, ರೈತರನ್ನು ಸಾಲ ಮುಕ್ತರನ್ನಾಗಿ ಮಾಡಲಿ.
Comments are closed.