ತುಮಕೂರು: ಭಾರತೀಯ ಸಂವಿಧಾನವು ವಿವಿಧ ಧರ್ಮ, ಬಣ್ಣ, ಭಾಷೆ, ಸಂಸ್ಕೃತಿ, ಆಚಾರ- ವಿಚಾರಗಳ ವೈವಿಧ್ಯತೆಯ ನಡುವೆ ದೇಶದ ಏಕತೆ ಸಾರುವ ಮಾದರಿ ಪ್ರಜಾತಂತ್ರ ವ್ಯವಸ್ಥೆಯಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 73ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿ, ಭಾರತ ದೇಶವು ಸ್ವಾತಂತ್ರ್ಯ ಪಡೆದ ಬಳಿಕ ಸಂಪೂರ್ಣ ಕಾರ್ಯೋನ್ಮುಖವಾದ ಸಂವಿಧಾನ ರಚನಾ ಸಮಿತಿಯು 2 ವರ್ಷಗಳ ಕಾಲ ನಿರಂತರ ಶ್ರಮವಹಿಸಿ ಸಂವಿಧಾನದ ಪ್ರಾಥಮಿಕ ಕರಡು ಪ್ರತಿ ಸಿದ್ಧಪಡಿಸಿತು, ನಂತರ ಸಂವಿಧಾನದ ಕರಡು ಪ್ರತಿಯ ಬಗ್ಗೆ ಚರ್ಚೆ ನಡೆದು ಅಂತಿಮವಾಗಿ 1949ರ ನವೆಂಬರ್ 26ರಂದು ಸಂವಿಧಾನ ಅಂಗೀಕರಿಸಲಾಯಿತು, ವಿಧಿಗಳು, ಅನುಸೂಚಿಗಳು ಹಾಗೂ ಅಧ್ಯಾಯಗಳನ್ನೊಳಗೊಂಡ ಭಾರತ ಸಂವಿಧಾನವು 1950ರ ಜನವರಿ 26 ರಂದು ಜಾರಿಗೆ ಬಂದಿತು. ಇದೇ ದಿನವನ್ನು ಪ್ರತಿ ವರ್ಷ ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಪದ್ಮಭೂಷಣ ಡಾ.ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾಗಿ 3 ವರ್ಷ ಸಂದಿದ್ದು, ಪೂಜ್ಯ ಸ್ವಾಮೀಜಿಯವರು ಲಿಂಗೈಕ್ಯರಾದ ದಿನವಾದ ಜನವರಿ 21ನ್ನು ರಾಜ್ಯ ಸರ್ಕಾರವು ದಾಸೋಹ ದಿನವೆಂದು ಘೋಷಿಸಿದೆ. ಈ ನಿಟ್ಟಿನಲ್ಲಿ ಸರ್ಕಾರವು ಅನ್ನ, ಅಕ್ಷರ ಹಾಗೂ ಆಶ್ರಯ ಪರಿಕಲ್ಪನೆಯಲ್ಲಿ ಹಲವಾರು ಕಾರ್ಯಕ್ರಮ ರೂಪಿಸಿದೆಯಲ್ಲದೆ, ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶ್ರೀಗಳ ಭಾವಚಿತ್ರ ಅಳವಡಿಸಲು ಸುತ್ತೋಲೆ ಹೊರಡಿಸಿದ್ದು, ಈಗಾಗಲೇ ಶಿವಕುಮಾರ ಸ್ವಾಮೀಜಿಯವರ ಮಂದಸ್ಮಿತ ಭಾವಚಿತ್ರಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಎಲ್ಲಾ ಸರ್ಕಾರಿ ಕಚೇರಿಗಳಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
ಪ್ರಪಂಚದ ಹಲವಾರು ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ, ಭಾರತೀಯ ಸಮಾಜಕ್ಕೆ ಪೂರಕವಾಗುವ ಉತ್ತಮ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿ ದೇಶಕ್ಕೆ ಅರ್ಪಣೆ ಮಾಡಿದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಾರ್ಯ ಚಿರಸ್ಮರಣೀಯ, ಸಂವಿಧಾನ ರಚನಾಕಾರರಲ್ಲಿ ಒಬ್ಬರಾದ ಕರ್ನಾಟಕದ ಹೆಮ್ಮೆಯ ಪುತ್ರ ಬೆನಗಲ್ ನರಸಿಂಹರಾವ್ ಅವರೂ ಕೂಡ ಉತ್ತಮ ಅಂಶಗಳನ್ನು ನಮ್ಮ ಸಂವಿಧಾನಕ್ಕೆ ಸೇರಿಸಿದ್ದಾರೆ. ವಿವಿಧತೆಯಲ್ಲಿ ಏಕತೆ, ವೈವಿಧ್ಯಮಯ ಸಂಸ್ಕೃತಿ, ಶ್ರೀಮಂತ ಇತಿಹಾಸವು ಸಮಗ್ರ ಭಾರತದ ಪರಿಕಲ್ಪನೆಯ ಅಡಿಪಾಯಗಳಾಗಿದ್ದು, ಶಾಂತಿ, ಅಹಿಂಸೆ, ಸಮಾನತೆ, ಸಹಬಾಳ್ವೆ ಮತ್ತು ಸರ್ವಧರ್ಮ ಸಹಿಷ್ಣುತೆ ನಮ್ಮ ಗಣತಂತ್ರ ವ್ಯವಸ್ಥೆಯ ಮೂಲ ಆಶಯವಾಗಿದೆ ಎಂದರು.
ಮುಖ್ಯಮಂತ್ರಿಗಳು 99 ಕೋಟಿ ರೂ. ಅಂದಾಜು ವೆಚ್ಚದಲ್ಲಿ 100 ಹಾಸಿಗೆಗಳುಳ್ಳ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ, 20 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳುಳ್ಳ ತಾಯಿ- ಮಕ್ಕಳ ಆಸ್ಪತ್ರೆ ಹಾಗೂ 50ಲಕ್ಷ ರೂ. ವೆಚ್ಚದಲ್ಲಿ 10 ಹಾಸಿಗೆಗಳುಳ್ಳ ಪೌಷ್ಟಿಕ ಪುನಃಶ್ಚೇತನ ಕೇಂದ್ರಗಳ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆಯನ್ನು ಈಗಾಗಲೇ ನೆರವೇರಿಸಿದ್ದು, ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕನ್ನು ನಿಯಂತ್ರಿಸಲು ಎಲ್ಲಾ ತಾಲೂಕುಗಳಲ್ಲಿಯೂ ಆಕ್ಸಿಜನ್ ಪ್ಲಾಂಟ್‌ಗಳ ಕಾರ್ಯಾರಂಭ ಮಾಡಲಾಗಿದೆ. ಕೋವಿಡ್ ಪರೀಕ್ಷೆ ನಡೆಸಲು ಜಿಲ್ಲೆಯ ಶಿರಾ, ತಿಪಟೂರು ಹಾಗೂ ತುಮಕೂರು ತಾಲೂಕುಗಳಲ್ಲಿ ಆರ್‌ಟಿಪಿಸಿಆರ್ ಲ್ಯಾಬ್ ಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಮೊದಲನೇ ಡೋಸ್ ಅನ್ನು ಶೇ.100 ರಷ್ಟು ಹಾಗೂ ಶೇ.85 ರಷ್ಟು ಎರಡನೇ ಡೋಸ್ ಲಸಿಕಾಕರಣ ಪೂರ್ಣಗೊಳಿಸಲಾಗಿದೆಯಲ್ಲದೆ, 15-18 ವರ್ಷದೊಳಗಿನ 80,000 ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಮೂಲಕ ಶೇ.65 ರಷ್ಟು ಗುರಿ ಸಾಧಿಸಲಾಗಿದೆ, ಬೂಸ್ಟರ್ ಡೋಸ್ ಗೆ ಸಂಬಂಧಿಸಿದಂತೆ ಶೇ.60 ರಷ್ಟು ಆರೋಗ್ಯ ಕಾರ್ಯಕರ್ತರು, ಶೇ. 52 ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಕೋವಿಡ್-19 ಹರಡುವಿಕೆ ಹೆಚ್ಚಾಗಿದ್ದರೂ ಶೇ.1 ರಿಂದ 3 ರಷ್ಟು ಮಾತ್ರ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಉಳಿದಂತೆ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸುವ ಮೂಲಕ ಕೋವಿಡ್ ಹರಡುವಿಕೆ ತಡೆಗಟ್ಟಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮೇಯರ್ ಬಿ.ಜಿ. ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಜಿ. ಮೋಹನ್ ಕುಮಾರ್ ಸೇರಿದಂತೆ ವಿವಿಧ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಯಿತು.
Get real time updates directly on you device, subscribe now.
Prev Post
Next Post
Comments are closed.