ಸಂವಿಧಾನ ಪ್ರಜಾಪ್ರಭುತ್ವದ ಬುನಾದಿ: ರಾಜೇಶ್‌ ಗೌಡ

348

Get real time updates directly on you device, subscribe now.

ಶಿರಾ: ಗಣರಾಜ್ಯೋತ್ಸವ ದಿನ ಎಂದರೆ ಬ್ರಿಟಿಷರ ಆಡಳಿತದಿಂದ ಮುಕ್ತಿ ಹೊಂದಿ ಪ್ರಜೆಗಳು ತಾವೇ ಪ್ರಭುಗಳಾದ ಸುದಿನ ಎನ್ನಬಹುದುಎಂದು ತಹಸೀಲ್ದಾರ್‌ ಮಮತಾ ತಿಳಿಸಿದರು.
ಇಲ್ಲಿನ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಬುಧವಾರ ಗಣರಾಜ್ಯೋತ್ಸವದ ಅಂಗವಾಗಿ ತಾಲ್ಲೂಕು ಆಡಳಿತದಿಂದ ನಡೆದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಸಂವಿಧಾನವನ್ನು ನೀತಿ ನಿಯಮ ಕಟ್ಟಲೆಗಳ ಮಹಾಗುಚ್ಛ ಎಂದು ಕರೆಯಬಹುದು, ಈ ದಿನ ಲಿಖಿತ ಸಂವಿಧಾನ ಜಾರಿಗೆ ತರುವ ಮೂಲಕ ನಮ್ಮದೇಶ ಸ್ವತಂತ್ರ ರಾಷ್ಟ್ರವಾಯಿತು, ನಿರಂಕುಶ ಪ್ರಭುತ್ವ ಕಿತ್ತು ಹಾಕುವ ಮೂಲಕ ನಮ್ಮನ್ನು ನಾವೇ ಆಳಿಕೊಳ್ಳುವ ಹಕ್ಕನ್ನು ಸಂವಿಧಾನ ನೀಡಿದೆ, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆ, ರಾಷ್ಟ್ರೀಯತೆ, ಶಾಂತಿ, ನಮ್ಮ ಬದುಕಿನ ಭಾಗವಾಗಬೇಕು ಎಂದು ತಿಳಿಸಿದರು.
ರಾಜ್ಯರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಆರ್‌.ಗೌಡ ಮಾತನಾಡಿ, ಕೋವಿಡ್‌ ಕಾರಣದಿಂದ ರಾಷ್ಟ್ರೀಯ ಹಬ್ಬಗಳನ್ನು ನಾವು ಸರಳವಾಗಿ ಆಚರಿಸುವ ಅನಿವಾರ್ಯತೆ ಬಂದಿದೆ, ಇಂತಹ ಸಾಂಕ್ರಾಮಿಕ ರೋಗಗಳ ವಿರುದ್ಧದ ಸಂಘರ್ಷದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿ ಸರ್ಕಾರದ ಮಾರ್ಗದರ್ಶನದ ಮೂಲಕ ರೋಗ ಓಡಿಸೋಣ, ಸಂವಿಧಾನಕ್ಕೆ ಗೌರವ, ಬೆಂಬಲ ಸೂಚಿಸಿ ದೇಶಕ್ಕೆ ಬಲ ತುಂಬುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಸ್ವತಂತ್ರ ಹೋರಾಟದ ಹಲವು ಘಟ್ಟಗಳನ್ನು ಸ್ಮರಿಸಿ ಮಾತನಾಡಿದ ಶಾಸಕ ಸಿಎಂ ರಾಜೇಶಗೌಡ, ಸಂವಿಧಾನ ನಮ್ಮ ಪ್ರಜಾಪ್ರಭುತ್ವದ ಬುನಾದಿ, ಸಂವಿಧಾನದಲ್ಲಿ ನಮಗೆ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ಸೂಚಿಸಿದೆ, ಸಂವಿಧಾನದ ಪ್ರತಿ ಪುಟಗಳಲ್ಲಿ ಭಾರತೀಯರ ಭಾವನೆ, ಸಂಸ್ಕೃತಿ, ಅಂಬೇಡ್ಕರ್‌ ಅವರ ಅನುಭವದ ಛಾಯೆಯಿದೆ, ಹಲವಾರು ಸಣ್ಣಪುಟ್ಟ ರಾಷ್ಟ್ರಗಳೇ ಪ್ರಜಾಪ್ರಭುತ್ವ ಅಳವಡಿಸಿಕೊಳ್ಳಲು ವಿಫಲವಾಗಿವೆ, 138 ಕೋಟಿಗೂ ಮೀರಿದ ಜನಸಂಖ್ಯೆ ಹೊಂದಿದ್ದರೂ ನಮ್ಮಲ್ಲಿ ಸುಭದ್ರ ಪ್ರಜಾಪ್ರಭುತ್ವ ಆಡಳಿತವಿದೆ ಎಂದರೆ ಅದಕ್ಕೆ ಸಂವಿಧಾನವೇ ಮೂಲ ಕಾರಣ, ಸಂವಿಧಾನ ಗೌರವಿಸುತ್ತಾ ನ್ಯಾಯಯುತ ಜೀವನ ನಡೆಸೋಣ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ತಹಸಿಲ್ದಾರ್‌ ಮಮತಾ ಧ್ವಜಾರೋಹಣ ನೆರವೇರಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳು ಪಥಸಂಚಲನ ನೆರವೇರಿಸಿದರು. ಪೌರಾಯುಕ್ತ ಶ್ರೀನಿವಾಸ್‌, ತಾಲೂಕು ಪಂಚಾಯಿತಿ ಇಒ ಅನಂತರಾಜು, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ಸದಸ್ಯ ಶ್ರೀಧರ್‌, ಡಿವೈಎಸ್ಪಿ ಕುಮಾರಪ್ಪ, ಬಿಇಓ ಶಂಕರಯ್ಯ, ಎಡಿಎ ರಂಗನಾಥ್‌, ನಗರಸಭೆಗೆ ಆಯ್ಕೆಗೊಂಡ ಹಲವು ನೂತನ ಸದಸ್ಯರು ಹಾಜರಿದ್ದರು.
ತಾಲೂಕು ಆಡಳಿತದಿಂದ ವಿವೇಕಾನಂದ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದ ವೇದಿಕೆಯಲ್ಲಿ ಇತ್ತೀಚೆಗಷ್ಟೇ ನಗರಸಭಾ ಸದಸ್ಯರಾಗಿ ಆಯ್ಕೆಗೊಂಡ ಹಲವಾರು ಸದಸ್ಯರು ಹಾಜರಿದ್ದುದು ಗಮನ ಸೆಳೆಯಿತು. ಇದೇ ವೇಳೆ ಕೆಲ ಮಹಿಳಾ ಸದಸ್ಯರ ಗಂಡಂದಿರು ತಮ್ಮ ಪತ್ನಿಯರ ಪರವಾಗಿ ವೇದಿಕೆ ಏರಿದ್ದರು. ಅಷ್ಟೇ ಅಲ್ಲದೆ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ನೀಡಲಾದ ಪ್ರಶಂಸನಾ ಪತ್ರ ವಿತರಣೆ ವೇಳೆ ತಹಸಿಲ್ದಾರ್‌, ಶಾಸಕರ ಜೊತೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪ್ರಶಂಸನ ಪತ್ರಗಳನ್ನು ವಿತರಿಸಿದರು.

Get real time updates directly on you device, subscribe now.

Comments are closed.

error: Content is protected !!