ಕುಣಿಗಲ್: ತಾಲೂಕು ಕಚೇರಿಯಲ್ಲಿ ಕೆಲ ದಲ್ಲಾಳಿಗಳು ಸರ್ಕಾರಿ ಸೇವೆಗೆ ಹೆಚ್ಚಿನ ಹಣ ವಸೂಲು ಮಾಡುತ್ತಿದ್ದಾರೆ, ಇವರನ್ನು ನಿಯಂತ್ರಿಸಿ ಸಕಾಲ ಯೋಜನೆಯಡಿಯಲ್ಲಿ ಅರ್ಜಿ ಪಡೆದು ಜನತೆಗೆ ಸೇವೆ ನೀಡುವಂತೆ ಬಿಜೆಪಿ ಮುಖಂಡ, ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ತಹಶೀಲ್ದಾರ್ ಗೆ ಆಗ್ರಹಿಸಿದರು.
ಗುರುವಾರ ತಾಲೂಕು ಕಚೇರಿ ಅವರಣಕ್ಕೆ ಬಂದ ಡಿ.ಕೃಷ್ಣಕುಮಾರ್ ಅವರಿಗೆ ಗ್ರಾಮಸ್ಥರೊಬ್ಬರು ಮರಣ ಪ್ರಮಾಣ ಪತ್ರ ಪಡೆಯಲು ನಾಲ್ಕು ಸಾವಿರ ಲಂಚ ಕೇಳ್ತಾರೆ, ಅಧಿಕಾರಿಗಳ ಬಳಿ ಹೋದರೆ ಸಮಸ್ಯೆ ಆಲಿಸೋಲ್ಲ, ಮೂರನೆ ವ್ಯಕ್ತಿ ಇದ್ದು ಆತ ದಿನಕ್ಕೆ ಸಾವಿರಾರು ರೂ. ವಸೂಲು ಮಾಡಿಕೊಂಡು ಹೋಗ್ತಾನೆ, ಜನಪ್ರತಿನಿಧಿಗಳ ಕೈಲಿ ಆಗದ ಕೆಲಸವನ್ನು ಕೆಲ ದಲ್ಲಾಳಿಗಳು ಕೆಲವೆ ಗಂಟೆಗಳಲ್ಲಿ, ದಿನಗಳಲ್ಲಿ ಮಾಡಿ ಕೊಡ್ತಾರೆ, ಹೀಗಾದರೆ ಹೇಗೆ ಎಂದು ಸಮಸ್ಯೆ ತೋಡಿಕೊಂಡರು.
ತಹಶೀಲ್ದಾರ್ ಮಹಾಬಲೇಶ್ವರ್ ರವರ ಕೊಠಡಿಗೆ ಆಗಮಿಸಿದ ಡಿ.ಕೃಷ್ಣಕುಮಾರ್, ದಲ್ಲಾಳಿಗಳ ಹಾವಳಿ ನಿಯಂತ್ರಿಸಿ, ಸಕಾಲದಲ್ಲಿ ಅರ್ಜಿ ಪಡೆದು ಜನತೆಗೆ ಸರಿಯಾದ ಮಾಹಿತಿ ನೀಡುವಂತೆ ಆಗ್ರಹಿಸಿದರು. ಇಲ್ಲಿ ತಹಶೀಲ್ದಾರ್ ಒಳ್ಳೆಯವರಿದ್ದಾರೆ, ಆದರೆ ಕೆಳಹಂತದ ಸಿಬ್ಬಂದಿ ದಲ್ಲಾಳಿಗಳೊಂದಿಗೆ ಶಾಮೀಲಾಗಿ ತಹಶೀಲ್ದಾರ್ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿರುವುದು ಖಂಡನೀಯ, ತಾಲೂಕು ಕಚೇರಿಯಲ್ಲಿ ಕೆಲ ಸಿಬ್ಬಂದಿ ಆಯ ಕಟ್ಟಿನ ಜಾಗದಲ್ಲಿ ಹಲವಾರು ವರ್ಷಗಳಿಂದ ಬೀಡುಬಿಟ್ಟಿದ್ದು ದಲ್ಲಾಳಿಗಳ ಮೂಲಕ ವ್ಯವಹಾರ ಮಾಡುವ ಆರೋಪ ಇದೆ, ಆಡಳಿತಾತ್ಮಕ ದೃಷ್ಟಿಯಿಂದ ಅವರನ್ನೆಲ್ಲಾ ಬದಲಿಸಿ ಎಂದರು. ತಹಶೀಲ್ದಾರ್ ಮಹಾಬಲೇಶ್ವರ್ ಅವರು ಈ ನಿಟ್ಟಿನಲ್ಲಿ ಕೂಡಲೆ ಕ್ರಮ ಕೈಗೊಳ್ಳಲಾಗುವುದು, ತಾಲೂಕು ಕಚೇರಿಯಲ್ಲಿ ಸಕಾಲದ ಮೂಲಕ ಅರ್ಜಿಸ್ವೀಕರಿಸಲಾಗುತ್ತಿದೆ ಎಂದರು.
ಕೆಲ ರೈತರು, ಕುಣಿಗಲ್ ದೊಡ್ಡಕೆರೆಯಿಂದ ತೋಟಕ್ಕೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ ಮೇರೆಗೆ, ರೈತರನ್ನುದ್ದೇಶಿಸಿ ಮಾತನಾಡಿದ ಡಿ.ಕೃಷ್ಣಕುಮಾರ್, ಈಗಾಗಲೆ ಎರಡು ದಶಕಗಳಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಟ್ಟಿಲ್ಲ, ಈ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿಗಳೊಂದಿಗೆ ಚರ್ಚಿಸಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರ ಗಮನಕ್ಕೂ ತರಲಾಗುವುದು, ಮಂಗಳ- ಮಾರ್ಕೋನಹಳ್ಳಿ ಲಿಂಕ್ ಕೆನಾಲ್ ಕಾಮಗಾರಿಗೆ ಶೀಘ್ರದಲ್ಲೆ ಸಿಎಂ ಬೊಮ್ಮಾಯಿ ಅವರಿಂದ ಶಂಕುಸ್ಥಾಪನೆ ನೆರವೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ, ಯುವ ಬಿಜೆಪಿ ಅಧ್ಯಕ್ಷ ಧನುಷ್ ಗಂಗಾಟ್ಕರ್, ಪ್ರಮುಖರಾದ ದಿನೇಶ್, ಸಂದೀಪ, ಅನೂಪ, ಶ್ರೀನಿವಾಸ, ಜಗದೀಶ, ಚಂದ್ರಶೇಖರ್, ಗಂಗಾಧರ, ಸಲ್ಮಾನ್ ಇತರರು ಇದ್ದರು.
Get real time updates directly on you device, subscribe now.
Comments are closed.