ಕೋಳಘಟ್ಟ ಕಲ್ಲುಗಣಿಗಾರಿಕೆ ಸ್ಥಗಿತ ಮಾಡಿ: ಕೆಂಕೆರೆ ಸತೀಶ್

168

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ಕೋಳಘಟ್ಟದ ರೈತರ ಕೃಷಿ ಬದುಕಿಗೆ ಮಾರಕವಾಗಿರುವ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸದ ಜಿಲ್ಲಾಡಳಿತ ಸ್ಥಳಿಯರ ಹಿತಕ್ಕೆ ಧಕ್ಕೆ ತಂದಿದೆ ಎಂದು ರಾಜ್ಯರೈತ ಸಂಘ ಹಾಗೂ ಹಸಿರುಸೇನೆಯ ಮುಖಂಡ ಕೆಂಕೆರೆ ಸತೀಶ್‌ ಆರೋಪಿಸಿದರು.
ತಾಲೂಕಿನ ಕೋಳಘಟ್ಟದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಯಲ್ಲಿ ಮಾತನಾಡಿ, ಕೋಳಘಟ್ಟ ಗ್ರಾಮದ ಗೋಮಾಳ ಪ್ರದೇಶದಲ್ಲಿರುವ ಬಂಡೆಯನ್ನು ಗುತ್ತಿಗೆದಾರರೊಬ್ಬರಿಗೆ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿಸಿದೆ, ಏಕಾಏಕಿ ಕಲ್ಲುಗಣಿಗಾರಿಕೆಗೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಸ್ಥಳೀಯರು ನಿತ್ಯವೂ ಭಯದ ನೆರಳಿನಲ್ಲಿ ಬದುಕುವಂತಾಗಿದೆ, ಕಲ್ಲುಗಣಿಗಾರಿಕೆ ನಿಲ್ಲಿಸಿ ಎಂಬ ಸ್ಥಳೀಯರ ಮನವಿ ಆಲಿಸುವ ಹೃದಯ ವೈಶಾಲ್ಯತೆಯನ್ನು ಜಿಲ್ಲಾಡಳಿತ ತೋರದಿರುವುದು ಅತ್ಯಂತ ನೋವಿನ ಸಂಗತಿ ಎಂದರು ವಿಷಾದ ವ್ಯಕ್ತಪಡಿಸಿದರು.
ಸ್ಥಳೀಯರು ಕಳೆದ ಒಂದು ತಿಂಗಳಿನಿಂದ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸುವಂತೆ ಒತ್ತಾಯಿಸುತ್ತಿದ್ದರೂ ಆಳುವ ಸರಕಾರಗಳು ಇತ್ತ ಗಮನಹರಿಸಿಲ್ಲ, ಯಾವುದೇ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿಲ್ಲ, ಈ ಹಿನ್ನಲೆಯಲ್ಲಿ ಕೋಳಘಟ್ಟ ಜನತೆಗೆ ತೋಡಕಾಗಿರುವ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಲು ತಿಪಟೂರು ಉಪ ವಿಭಾಗಾಧಿಕಾರಿಗಳ ಕಚೇರಿವರೆಗೂ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ರೈತ ಸಂಘ ಹೋರಾಟಕ್ಕಿಳಿಯಲಿದೆ ಎಂದು ಕೆಂಕೆರೆ ಸತೀಶ್‌ ಸ್ಪಷ್ಟಪಡಿಸಿದರು.
ರೈತ ಸಂಘದ ಪದಾಧಿಕಾರಿ ಲೋಕೇಶ್‌ ಮಾತನಾಡಿ ಸ್ಥಳೀಯರ ಅಭಿಪ್ರಾಯ ಧಿಕ್ಕರಿಸಿ ಕೋಳಘಟ್ಟದಲ್ಲಿ ಕಲ್ಲುಗಣಿಗಾರಿಕೆ ನಡೆಸುತ್ತಿರುವುದು ದುರಂತ, ರೈತರ ಕೃಷಿ ಬದುಕನ್ನು ಕಸಿಯುವ ಮೂಲಕ ಸ್ಥಳೀಯರ ಆಹಾರ ಭದ್ರತೆಯನ್ನು ಕಲ್ಲುಗಣಿಗಾರಿಕೆ ಕಸಿಯುತ್ತಿದೆ, ಗಣಿಗಾರಿಕೆಯ ಧೂಳಿನಿಂದ ಕಲುಷಿತವಾಗುತ್ತಿರುವ ಆಮ್ಲಜನಕ ಸೇವನೆ ಮಾಡುವ ಮೂಲಕ ಅನಾರೋಗ್ಯಕ್ಕೆ ತುತ್ತಾಗುತಿದ್ದಾರೆ, ಅಭಿವೃದ್ಧಿ ಹೆಸರಿನಲ್ಲಿ ಜನ ಜಾನುವಾರುಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ವ್ಯವಸ್ಥೆ ವಿರುದ್ಧ ರೈತ ಸಂಘ ಧ್ವನಿ ಎತ್ತಲಿದೆ, ಕೋಳಘಟ್ಟ ನಿವಾಸಿಗಳ ನ್ಯಾಯಯುತ ಅಹೋರಾತ್ರಿ ಹೋರಾಟಕ್ಕೆ ರೈತ ಸಂಘ ಸಾಥ್‌ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪದಾಧಿಕಾರಿ ಹಳೇಸಂಪಿಗೆ ಕೀರ್ತಿ, ತಾಲೂಕು ಅಧ್ಯಕ್ಷ ನಾಗೇಶ್‌, ಶಂಕರಣ್ಣ, ಪ್ರಕಾಶ್‌, ಎಪಿಎಂಸಿ ಸದಸ್ಯ ರೇಣುಕಯ್ಯ, ಗ್ರಾಮಸ್ಥರಾದ ನಾಗರಾಜ್‌, ಕೀರ್ತಿ, ಮಂಜುನಾಥ್‌, ಶಂಕರಪ್ಪ, ಮಲ್ಲಿಕಾರ್ಜುನ್‌, ಶಿವಬಸವಯ್ಯ, ಯೋಗಾನಂದ್‌, ಶಿಲ್ಪಾ, ಗೌರಮ್ಮ, ಶಾರದಮ್ಮ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!