ಶಿರಾ: ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನ ತನ್ನತ್ತ ಸೆಳೆಯುತ್ತಿದ್ದು, ಬಹುಮತ ಪಡೆದು ಸರ್ಕಾರ ರಚಿಸುವ ಪೂರ್ವ ಸಿದ್ಧತೆಗೆ ಈಗಿನಿಂದಲೇ ಜಿಲ್ಲೆಯಾದ್ಯಂತ ಅಭ್ಯರ್ಥಿಗಳ ಹುಡುಕಾಟ ನಡೆಸುತ್ತಿದೆ, ಒಂದಷ್ಟು ಬೇರೆ ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ವರಿಷ್ಠರ ಸಂಪರ್ಕದಲ್ಲಿದ್ದಾರೆ ಎಂಬ ಮಾತು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಈಚೆಗೆ ಡಾ.ಜಿ.ಪರಮೇಶ್ವರ್ ಅವರು ಜಿಲ್ಲೆಯ ವಿವಿಧ ಪಕ್ಷದ ಹಾಲಿ ಹಾಗೂ ಮಾಜಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಮುಂದಾಗಿದ್ದಾರೆ. ಹೆಸರುಗಳನ್ನು ಈಗಾಗಲೇ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಲ್ಲಿ ಆಂತಕ ಹೆಚ್ಚುವಂತೆ ಮಾಡಿದೆ.
ಕಾಂಗ್ರೆಸ್‌ನಿಂದ ಟಿಬಿಜೆ ಸ್ಪರ್ಧೆ ಖಚಿತ
ಶಿರಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ ಬಹುತೇಕ ಸ್ಪರ್ಧಿಸಲಿದ್ದು ಇದು ಕೊನೆ ಚುನಾವಣೆ ಆಗಿದೆ ಎಂಬುದು ಜಿಲ್ಲಾ ನಾಯಕರಿಂದಲೇ ಕೇಳಿ ಬರುತ್ತಿರುವ ಮಾತು, ಟಿ.ಬಿ.ಜಯಚಂದ್ರ ಅವರ ಪುತ್ರ ಸಂತೋಷ್ ಜಯಚಂದ್ರ ರಾಜಕಾರಣದಲ್ಲಿ ಆಸಕ್ತಿ ತೋರದ ಕಾರಣ ಮತ್ತೋರ್ವ ಪುತ್ರ ಸಂಜಯ್ ಸ್ಥಳೀಯ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕರ್ತರ ವಿಶ್ವಾಸ ಗಳಿಸಿದ್ದಾರೆ. ಈ ಮಧ್ಯೆ ತಾನೂ ಆಕಾಂಕ್ಷಿ ಎಂದು ಹೇಳಿಕೊಂಡು ಚಿ.ನಾ.ಹಳ್ಳಿ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಕ್ಷೇತ್ರದಲ್ಲಿ ಸಂಚಾರ ಮಾಡಿ ಕಾರ್ಯಕರ್ತರ ವಿರೋಧಕ್ಕೆ ಕಾರಣವಾಗಿರುವುದು ಹಳೇ ವಿಚಾರ.
ಜೆಡಿಎಸ್ ನಿಂದ ಉಗ್ರೇಶ್ ಗೆ ಅವಕಾಶ
ಇನ್ನೂ ಬಿ.ಸತ್ಯನಾರಾಯಣ್ ನಿಧನದ ನಂತರ ಪಕ್ಷ ನಿಷ್ಟರಿಗೆ ಟಿಕೆಟ್ ನೀಡಿ ಶಿರಾ ಕ್ಷೇತ್ರವನ್ನು ಸದೃಢಗೊಳಿಸಬೇಕು ಎಂಬ ಆಶಯ ಜೆಡಿಎಸ್ ವರಿಷ್ಠರದ್ದಾಗಿದೆ, ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಕಾರ್ಯಕರ್ತರ ವಿರೋಧಕ್ಕೆ ಕಾರಣವಾಗುವುದಲ್ಲದೆ ಪಕ್ಷಾಂತರ ಚಟುವಟಿಕೆ ನಡೆದು ಮತ್ತೆ ಜೆಡಿಎಸ್‌ಗೆ ಹಿನ್ನಡೆ ಅನುಭವಿಸುವಂತಾಗುತ್ತದೆ ಎಂದು ಅರಿತು ಹಾಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್. ಉಗ್ರೇಶ್ ಗೆ ಶಿರಾ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ ಎಂಬ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ.
ಹಿಂದೆ ನಡೆದ ಉಪ ಚುನಾವಣೆಯಲ್ಲಿ ಬಿ.ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಸ್ಪರ್ಧೆ ಮಾಡಿದರಾದರೂ ಅವರಿಗೆ ಯಾವುದೇ ಅನುಕಂಪದ ಮತಗಳು ಲಭಿಸಲಿಲ್ಲ, ಹಣದ ಹೊಳೆ ಮುಂದೆ ಜೆಡಿಎಸ್ ಅಭ್ಯರ್ಥಿ ಯಾವುದೇ ಜಾದು ಮಾಡಲಾಗದೆ ಸೋಲಿನ ಸುಳಿಗೆ ಸಿಲುಕುವಂತಾಯಿತು.
ಕಮಲದ ಅಭ್ಯರ್ಥಿ ರಾಜೇಶ್ ಗೌಡ
ಡಾ.ಸಿ.ಎಂ.ರಾಜೇಶ್‌ಗೌಡ ಈ ಬಾರಿಯೂ ಬಿಜೆಪಿ ಪಕ್ಷದಿಂದಲೇ ಸ್ಪರ್ಧೆ ಮಾಡಲಿದ್ದಾರೆ, ಉಪ ಚುನಾವಣೆಯಲ್ಲಿ ನಡೆದಂತಹ ತಂತ್ರಗಾರಿಕೆ ಈ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಡೆಯೋಲ್ಲ ಎಂಬ ಮಾತು ಕೇಳಿ ಬಂದಿದೆ.
ಟಿ.ಬಿ.ಜಯಚಂದ್ರ ಹಾಗೂ ಬಿಜೆಪಿ ನಾಯಕ ವಿಜಯೇಂದ್ರರಿಗೆ ನಡೆದಿದ್ದ ಮಾತಿನ ಚಕಮಕಿಯಿಂದಾಗಿ ವಿಜಯೇಂದ್ರ ಶಿರಾ ಉಪ ಚುನಾವಣೆಯನ್ನು ಪ್ರತಿಷ್ಟೆಯಾಗಿ ಪರಿಗಣಿಸಿ ಜಾತಿವಾರು ಲೆಕ್ಕಾಚಾರ, ಹಣದ ಹೊಳೆ ಹರಿಸಿ ಟಿ.ಬಿ.ಜಯಚಂದ್ರರನ್ನು ಮಣಿಸಲು ಸಾಕಷ್ಟು ತಂತ್ರಗಾರಿಕೆ ರೂಪಿಸಿದ್ದರು, ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಸೋತು ಮೊದಲ ಬಾರಿಗೆ ಕಮಲ ಅರಳಲು ಸಾಧ್ಯವಾಯಿತು.
ಆದರೆ ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂತಹ ಪ್ರಚಂಡ ಗೆಲುವು ಸಾಧಿಸಲು ಸಾಧ್ಯವಾಗದಿದ್ದರೂ ಹಣದ ಹೊಳೆಯಂತು ಹರಿಸುವುದು ಅನಿವಾರ್ಯ ಎಂಬಂತಾಗಿದೆ, ಶಾಸಕ ರಾಜೇಶ್ ಗೌಡ ಅವರು ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ ಹಾಗೂ ಕಾರ್ಯಕರ್ತರ ವಿಶ್ವಾಸಗಳಿಸುತ್ತಿಲ್ಲ ಎಂಬ ಆಪಾದನೆ ಕೂಡ ಇದೆ, ಇದೆಲ್ಲವನ್ನು ಸರಿಪಡಿಸಿಕೊಂಡು ಹೇಗೆ ಚುನಾವಣಾ ತಂತ್ರ ರೂಪಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಒಟ್ಟಾರೆ 2023 ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಶಿರಾ ಕ್ಷೇತ್ರ ಸದ್ದು ಮಾಡುವುದಂತು ನಿಜ, ಉಪ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದ ರೀತಿ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಎಲ್ಲರ ಕಣ್ಣು ಶಿರಾ ಕ್ಷೇತ್ರದ ಮೇಲೆ ನೆಟ್ಟಿರುತ್ತೆ. ಈಗಾಗಲೇ ಚುನಾವಣೆ ಲೆಕ್ಕಾಚಾರ, ಅಭ್ಯರ್ಥಿಗಳ ಸ್ಪರ್ಧೆ ವಿಚಾರ ಪಕ್ಷದ ಕಾರ್ಯಕರ್ತರಲ್ಲಿ ಚರ್ಚೆಗೆ ಕಾರಣವಾಗಿದೆ, ಯಾರು ಶಿರಾ ಕ್ಷೇತ್ರದ ಅಧಿಪತಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
2023 ರಲ್ಲಿ ಆರ್.ಉಗ್ರೇಶ್ ಸ್ಪರ್ಧೆ..
ಮಾಜಿ ಸಚಿವ ಬಿ.ಸತ್ಯನಾರಾಯಣ ಅವರ ನಿಧನದಿಂದ ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಕೊಂಚ ಮಂಕಾಗಿದೆ, ಅವರ ಸ್ಥಾನ ತುಂಬ ಬಲ್ಲಂತಹ ನಾಯಕ ಯಾರು? 2023 ರಲ್ಲಿ ಅಭ್ಯರ್ಥಿ ಯಾರು ಎಂಬ ಮಾತುಗಳು ಕಾರ್ಯಕರ್ತರಲ್ಲಿ ಕೇಳಿಬರುತ್ತಿರುವ ಹೊತ್ತಲ್ಲಿ ಆರ್.ಉಗ್ರೇಶ್ ಹೆಸರು ಮುಂಚೂಣಿಗೆ ಬಂದು ನಿಂತಿದೆ.
ಪಕ್ಷ ಸಂಘಟನೆಗೆ ತನ್ನದೇ ಕೊಡುಗೆ ನೀಡುತ್ತಾ ಕ್ಷೇತ್ರದಲ್ಲಿ ಜೆಡಿಎಸ್ ಬಲವರ್ಧನೆಗೆ ಶ್ರಮಿಸುತ್ತಿರುವ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್.ಉಗ್ರೇಶ್ ಅವರೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು, ಅವರ ಸ್ಪರ್ಧೆಯಿಂದ ಬೇರೆ ಪಕ್ಷಗಳಿಗೆ ಪೈಪೋಟಿ ನೀಡಲು ಸಾಧ್ಯ ಎಂಬ ಮಾತು ಕೂಡ ಕೇಳಿ ಬಂದಿದೆ.
ಶಿರಾ ನಗರಸಭೆ ಸದಸ್ಯರಾಗಿ ಹಿಂದೆ ಉತ್ತಮ ಅಭಿವೃದ್ಧಿ ಕೆಲಸ ಮಾಡಿರುವ ಉಗ್ರೇಶ್ ಶಿರಾ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿದ್ದಾರೆ, ಅವರು ಎಂಎಲ್‌ಎ ಚುನಾವಣೆಗೆ ಸ್ಪರ್ಧಿಸಿದರೆ ಗೆಲುವು ನಿಶ್ಚಿತ, ಜೊತೆಗೆ ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತಷ್ಟು ಗಟ್ಟಿಯಾಗಲು ಸಾಧ್ಯವಾಗುತ್ತದೆ ಎಂಬ ಮಾತು ಸ್ಥಳೀಯರಿಂದಲೇ ಕೇಳಿ ಬಂದಿದೆ.
Comments are closed.