ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನಕ್ಕೆ ಆಕ್ರೋಶ

130

Get real time updates directly on you device, subscribe now.

ಪಾವಗಡ: ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವ ದಿನದಂದು ನ್ಯಾಯಧೀಶ ಮಲ್ಲಿಕಾರ್ಜುನ ಗೌಡರವರು ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರ ತೆಗಿಸಿ ಗಾಂಧೀಜಿಯ ಭಾವಚಿತ್ರವಿಡಿಸಿದ ಘಟನೆ ಖಂಡಿಸಿ ನ್ಯಾಯಾಧೀಶರ ವಿರುದ್ಧ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟ, ರೈತ ಹಾಗೂ ಪ್ರಗತಿಪರ ಸಂಘಟನೆಗಳು ಪಟ್ಟಣದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಹಾ ಆದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕನ್ನಮೇಡಿ ಎಂ.ಕೃಷ್ಣಮೂರ್ತಿ ಮಾತನಾಡಿ, ಕಾನೂನು ಶಾಸ್ತ್ರ ಅಧ್ಯಯನ ನಡೆಸಿ ಗೌರವಾನ್ವಿತ ಹುದ್ದೆಗೇರಿದ ನ್ಯಾಯಧೀಶರು ಅಂಬೇಡ್ಕರ್‌ ರಂತಹ ವಿಶ್ವ ರತ್ನರನ್ನು ಅವಮಾನಿಸಿದ್ದು ಖಂಡನೀಯ, ಕೂಡಲೇ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಡಿಎಸ್‌ಎಸ್‌ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಕೆ.ತಿಪ್ಪೇಸ್ವಾಮಿ ಮಾತನಾಡಿ ನಾನು ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸೋಲ್ಲ ಎಂಬ ನ್ಯಾಯಧೀಶನ ಕೃತ್ಯ ಇಡಿ ಸಮಾಜ ತಲೆ ತಗ್ಗಿಸುವಂತ ಘಟನೆಯ ಜೊತೆಗೆ ಅಕ್ಷಮ್ಯ ಅಪರಾಧವಾಗಿದೆ, ಹಾಗಾಗಿ ನಿಕೃಷ್ಟ ಮನಸ್ಥಿತಿಯ ನ್ಯಾಯಧೀಶ ಮಲ್ಲಿಕಾರ್ಜುನ ಗೌಡರ ಅವಧಿಯಲ್ಲಾದ ಪ್ರಕರಣಗಳ ನ್ಯಾಯದ ತೀರ್ಪುಗಳನ್ನು ಮರುಪರಿಶೀಲಿಸಿ ಸುಮೊಟೋ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಮಾದಿಗ ದಂಡೋರ ಜಿಲ್ಲಾ ಉಪಾಧ್ಯಕ್ಷ ವಳ್ಳೂರು ನಾಗೇಶ್‌ ಮಾತನಾಡಿ, ಸರ್ಕಾರ ಅಂಬೇಡ್ಕರ್‌ ರವರ ಭಾವಚಿತ್ರ ಕಡ್ಡಾಯವಾಗಿ ಇಟ್ಟು ಗೌರವಿಸಬೇಕು ಎಂಬ ಆದೇಶವಿದ್ದರೂ ಅದನ್ನ ಉಲ್ಲಂಘಿಸಿದ ನ್ಯಾಯಧೀಶನ ಈ ನಡೆ ಮುಂದೆ ಎಸ್ಸಿ, ಎಸ್ಟಿ ಸಮಾಜದವರಿಗೆ ಕಂಟಕ ಪ್ರಾಯವಾಗುತ್ತದೆ, ಹಾಗಾಗಿ ಕಾನೂನಿನಡಿಯಲ್ಲಿ ತಕ್ಕ ಶಾಸ್ತಿಯಾಗಬೇಕು ಎಂದು ಆಕೋಶ ಹೊರ ಹಾಕಿದರು.
ಕರ್ನಾಟಕ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ ದೇಶದ ಮಾದರಿ ವ್ಯಕ್ತಿಯನ್ನು ಅವಮಾನಿಸಿದ್ದು ಸಹಿಸಲಾಗದ ಘಟನೆ ಎಂದು ಅಸಹನೆ ವ್ಯಕ್ತಪಡಿಸಿದರು.
ಈ ವೇಳೆ ಅಂಬೇಡ್ಕರ್‌ ಅವರಿಗೆ ಅವಮಾನಿಸಿದ ನ್ಯಾಯಧೀಶರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಗ್ರೇಡ್‌- 2 ತಹಶೀಲ್ದಾರ್ ಸುಮತಿಯವರಿಗೆ ಹಾಗೂ ಸರ್ಕಲ್‌ ಇನ್ಸ್ ಪೆಕ್ಟರ್‌ ಲಕ್ಷ್ಮಿಕಾಂತ್‌ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಪೆದ್ದನ್ನ, ನಲಿಗಾನಹಳ್ಳಿ ಮಂಜುನಾಥ್‌, ತಮಟೆ ಸುಬ್ಬರಾಯಪ್ಪ, ವೆಂಕಟರವಣ, ನರಸಿಂಹಯ್ಯ, ಕವಿತಾ, ಜೀವಿಕ ನರಸಿಂಹಪ್ಪ, ರಾಮಾಂಜಿನಪ್ಪ, ರವಿ, ಪ್ರಕಾಶ್‌, ರಾಮಕೃಷ್ಣಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!