ಗುಬ್ಬಿ: ಪುನೀತ್ ರಾಜ್ ಕುಮಾರ್ ಅವರ ಸಾವು ನಾಡಿಗೆ ತುಂಬಲಾರದ ನಷ್ಟವಾಗಿದೆ, ಅವರ ಸಾಮಾಜಿಕ ಜೀವನ, ದಾನ ಮಾಡುವಂತಹ ಗುಣ ಎಲ್ಲರಿಗೆ ಬರಲಿ ಎಂದು ಚಾಲುಕ್ಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗಭೂಷಣ್ ತಿಳಿಸಿದರು.
ಪಟ್ಟಣದ ಚಾಲುಕ್ಯ ಆಸ್ಪತ್ರೆಯಲ್ಲಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಸಾಕಷ್ಟು ರೀತಿಯಲ್ಲಿ ಸಾಮಾಜಿಕ ಸೇವೆಗಳು ದೇಶದ ಹಲವು ಭಾಗಗಳಲ್ಲಿ ನಡೆಯುತ್ತಿವೆ, ನೇತ್ರದಾನ ರಕ್ತದಾನದಂತಹ ಮಹತ್ವದ ಕೆಲಸಗಳು ಇಂದಿನ ಯುವಕರಲ್ಲಿ ಅವಶ್ಯಕತೆಯಾಗಿ ಬೇಕಾಗಿದೆ, ವರ್ಷದಲ್ಲಿ ಹಲವು ಆಚರಣೆಗಳನ್ನು ನಾವು ಮಾಡುತ್ತೇವೆ, ಆಚರಣೆಯ ಭಾಗವಾಗಿ ಇಂತಹ ವಿಶೇಷ ಕಾರ್ಯಕ್ರಮ ಮಾಡುವುದರಿಂದ ಅಂಧರ ಬದುಕಿಗೆ ಬೆಳಕಾಗುತ್ತದೆ, ಸಾವಿನ ಅಂಚಿನಲ್ಲಿರುವವರಿಗೆ ರಕ್ತ ನೀಡಿದಾಗ ಅವರ ಜೀವ ಉಳಿಸಿದ ಪುಣ್ಯ ನಿಮಗೆ ಬರುತ್ತದೆ ಎಂದರು.
ಹುಟ್ಟು ಹಬ್ಬಗಳು, ರಾಜ್ಯೋತ್ಸವದಂತಹ ಕಾರ್ಯಕ್ರಮಗಳು ಇಂತಹ ಹಲವು ಕಾರ್ಯಕ್ರಮಗಳಲ್ಲಿ ಸಾಮಾಜಿಕವಾಗಿ ಒಟ್ಟುಗೂಡಿ ಸಮಾಜಕ್ಕೆ ಒಂದಿಷ್ಟು ಸಹಕಾರ ಮಾಡುವ ಮನೋಭಾವನೆ ಬೆಳೆಸಿಕೊಳ್ಳಿ ಎಂದು ತಿಳಿಸಿದರು.
ಚಾಲುಕ್ಯ ಆಸ್ಪತ್ರೆಯ ವ್ಯವಸ್ಥಾಪಕ ಹರೀಶ್ ಮಾತನಾಡಿ ನಮ್ಮ ಆಸ್ಪತ್ರೆ ವತಿಯಿಂದ ತಿಂಗಳಿಗೆ ಒಮ್ಮೆ ಹಲವು ರೀತಿಯ ಆರೋಗ್ಯ ಶಿಬಿರ ಮಾಡುತ್ತಿದ್ದು ಇದರಿಂದ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಇಡೀ ಆಸ್ಪತ್ರೆ ಕೆಲಸ ಮಾಡುತ್ತಿದೆ, ನಾಗಭೂಷಣ್ ಅವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ಸ್ವತಃ ಅವರು ಹಾಗೂ ಅವರ ಕುಟುಂಬದವರು ರಕ್ತದಾನ ಮಾಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ, ಇನ್ನೂ ಆಸ್ಪತ್ರೆಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಕಲ್ಪವೃಕ್ಷ ವಾರ್ಡ್ ಮಾಡುವ ಮೂಲಕ ಉಚಿತ ಆರೋಗ್ಯ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ರಶ್ಮಿ, ಡಾ.ಈಶ್ವರ್, ಫಾರ್ಮಸಿಸ್ಟ್ ಶಿವಕುಮಾರ್ ಹಾಗೂ ಸಿಬ್ಬಂದಿ, ರಕ್ತದಾನಿಗಳು ಹಾಜರಿದ್ದರು.
ಪುನೀತ್ ರಾಜ್ ಯುವ ಸಮೂಹಕ್ಕೆ ಮಾದರಿ
Get real time updates directly on you device, subscribe now.
Comments are closed.