ಹಾಲು ಒಕ್ಕೂಟ ಆರ್ಥಿಕವಾಗಿ ಸದೃಢ: ಮಹಲಿಂಗಯ್ಯ

151

Get real time updates directly on you device, subscribe now.

ತುಮಕೂರು: ಕೋವಿಡ್‌ ಸಂಕಷ್ಟದ ಸಂದರ್ಭವನ್ನು ಸಮರ್ಥವಾಗಿ ಎದುರಿಸಿ ತುಮಕೂರು ಹಾಲು ಒಕ್ಕೂಟ ಆರ್ಥಿಕವಾಗಿ ಸದೃಢವಾಗಿದೆ ಎಂದು ತುಮುಲ್‌ ಅಧ್ಯಕ್ಷ ಮಹಲಿಂಗಯ್ಯ ತಿಳಿಸಿದರು.
ನಗರದ ಬಡ್ಡಿಹಳ್ಳಿ 60 ಅಡಿ ರಸ್ತೆಯಲ್ಲಿರುವ ಗೋಕುಲ ಬಡಾವಣೆಯ 2ನೇ ಹಂತದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಜೂರಾಗಿರುವ ನೂತನ ನಂದಿನಿ ಹಾಲಿನ ಮಳಿಗೆ ಉದ್ಘಾಟಿಸಿ ಮಾತನಾಡಿ, ಕೋವಿಡ್‌ ಸಂಕಷ್ಟದ ಸಮಯದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಡಿಮೆಯಾಗಿ ಹಾಲಿನ ಪೌಡರ್‌ ಮತ್ತು ಬೆಣ್ಣೆ ದಾಸ್ತಾನು ಉಳಿದಿದೆ, ಆದರೂ ಒಕ್ಕೂಟ ಹಾಲು ಉತ್ಪಾದಕರಿಗೆ ಅತಿ ಹೆಚ್ಚಿನ ಹಾಲಿನ ದರ ನೀಡುತ್ತಿದೆ ಎಂದರು.
ಹಾಲು ಉತ್ಪಾದಕ ರೈತರಿಗೆ ಒಕ್ಕೂಟದಿಂದ ಎಲ್ಲಾ ರೀತಿಯ ಸಹಕಾರ, ಸೌಕರ್ಯ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ರೈತರ ಬಟವಾಡೆಯನ್ನು ಬಾಕಿ ಉಳಿಸಿಕೊಳ್ಳುವುದಿಲ್ಲ, ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರಣ ಒಕ್ಕೂಟ ಸದೃಢವಾಗಿದ್ದು, ಈಗಾಗಲೇ ಒಕ್ಕೂಟದ ಸಾಲವನ್ನು ತೀರುವಳಿ ಮಾಡಿ ಆರ್ಥಿಕವಾಗಿ ಸದೃಢವಾಗಿದ್ದೇವೆ ಎಂದು ಪುನರುಚ್ಚರಿಸಿದರು.
ಮುಂಬರುವ ದಿನಗಳಲ್ಲಿ ಕೋವಿಡ್‌ ಸೋಂಕು ಗಣನೀಯವಾಗಿ ಇಳಿಕೆಯಾಗಿ ಒಕ್ಕೂಟಕ್ಕೆ ಆರ್ಥಿಕವಾಗಿ ಹೆಚ್ಚಿನ ಸಹಾಯವಾದರೆ ರೈತರಿಗೆ ಮತ್ತಷ್ಟು ಸೌಲಭ್ಯ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಪರಿಶಿಷ್ಟ ಪಂಗಡ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ನಗರದಲ್ಲಿ ಈಗಾಗಲೇ 11 ನಂದಿನಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ, ಸರ್ಕಾರದ ಸಹಯೋಗದೊಂದಿಗೆ 7 ಲಕ್ಷ ರೂ. ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ನೀಡಲಾಗಿದೆ ಎಂದರು.
ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳಲಿ ಎಂದು ಒಕ್ಕೂಟ ಮತ್ತು ಕೆಎಂಎಫ್‌ ವತಿಯಿಂದ ಮಳಿಗೆ ಉದ್ಘಾಟಿಸಲಾಗಿದೆ, ಫಲಾನುಭವಿಗಳು ಆರ್ಥಿಕಾಭಿವೃದ್ಧಿ ಹೊಂದಲಿ ಎಂಬುದು ನಮ್ಮ ಆಶಯ, ಇನ್ನು ಹೆಚ್ಚಿನ ರೀತಿಯಲ್ಲಿ ಮಾರುಕಟ್ಟೆ ಅಭಿವೃದ್ಧಿಯಾಗಲಿ ಎಂದರು.
ವಾಲ್ಮೀಕಿ ಸಮುದಾಯದ ಮುಖಂಡ ವಿ. ಪ್ರತಾಪ್‌ ಮಾತನಾಡಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಪಂಗಡಗಳ ಯುವಕರ ಆರ್ಥಿಕ ಸದೃಢತೆಗಾಗಿ ಸರ್ಕಾರ 10 ಲಕ್ಷ ರೂ. ಮಂಜೂರು ಮಾಡುತ್ತಿದೆ. ಈಗ ಸರ್ಕಾರ ಮತ್ತು ಕೆಎಂಎಫ್‌ ವತಿಯಿಂದ 7 ಲಕ್ಷ ರೂ. ಅನುದಾನ ನೀಡಿ ಸಮುದಾಯದ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುಬ್ರಾಯ್ ಭಟ್‌, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ತ್ಯಾಗರಾಜು, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ಜಿಲ್ಲಾ ಅಧಿಕಾರಿ ಶ್ರೀನಿವಾಸ್‌, ತುಮುಲ್ ಮಾರುಕಟ್ಟೆ ವ್ಯವಸ್ಥಾಪಕ ಅಶೋಕ್‌ ಎನ್‌.ಸಿ., ಮಾರುಕಟ್ಟೆ ಅಧಿಕಾರಿ ನರಸೇಗೌಡ, ಮಾರುಕಟ್ಟೆ ಮೇಲ್ವಿಚಾರಕ ಶ್ರೀನಿವಾಸ್‌, ಸಮುದಾಯದ ಮುಖಂಡ ವಿ.ಪ್ರತಾಪ್‌, ವಿಶ್ವನಾಥ್‌, ನಿತೀಶ್‌, ಭರತ್‌, ಫಲಾನುಭವಿಗಳಾದ ಉಮೇಶ್‌, ಮೇಘನಾ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!