ಕೋವಿಡ್ ನಿಂದ ಮೃತಪಟ್ಟವರ ಕುಟುಂಬಕ್ಕೆ ಚೆಕ್‌ ವಿತರಣೆ

321

Get real time updates directly on you device, subscribe now.

ತುಮಕೂರು: ನಗರದ ಎಂ.ಜಿ.ರಸ್ತೆಯಲ್ಲಿರುವ ಭಾರತೀಯ ಸ್ಟೇಟ್‌ ಬ್ಯಾಂಕ್ ನಲ್ಲಿ ಮನೆ ನಿರ್ಮಾಣಕ್ಕೆ ಗೃಹ ಸಾಲ ಪಡೆದು ಕೋವಿಡ್‌ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದ ಗ್ರಾಹಕನಿಗೆ ಎಸ್‌ಬಿಐ ಜೀವ ವಿಮೆಯ 27 ಲಕ್ಷ ರೂ. ಮೊತ್ತದ ಚೆಕ್‌ನ್ನು ಮೃತನ ಕುಟುಂಬಕ್ಕೆ ಬ್ಯಾಂಕ್‌ ಅಧಿಕಾರಿಗಳು ಹಸ್ತಾಂತರಿಸಿದರು.

ಎಂ.ಜಿ.ರಸ್ತೆಯ ಭಾರತೀಯ ಸ್ಟೇಟ್‌ ಬ್ಯಾಂಕ್ ನಲ್ಲಿ ಗೃಹ ಸಾಲ ಪಡೆದಿದ್ದ ರವಿಕುಮಾರ್‌ ಎಂಬ ಗ್ರಾಹಕ ಕೋವಿಡ್‌ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇವರು ಬ್ಯಾಂಕ್ ನಿಂದ 25 ಲಕ್ಷ ರೂ. ಗೃಹ ಸಾಲ ಪಡೆದಿದ್ದರು. ಸಾಲ ಪಡೆಯುವ ಸಂದರ್ಭದಲ್ಲಿ 2 ಲಕ್ಷ ರೂ. ಮೊತ್ತ ಪಾವತಿಸಿ ಎಸ್‌ಬಿಐ ಜೀವ ವಿಮೆ ಮಾಡಿಸಿದ್ದರು.
ಅಂದು ಎಸ್‌ಬಿಐ ಜೀವ ವಿಮೆ ಮಾಡಿಸಿದ್ದರಿಂದ ಗ್ರಾಹಕ ರವಿಕುಮಾರ್‌ ಸಾವನ್ನಪ್ಪಿದರೂ ಸಹ ಎಸ್‌ಬಿಐ ಬ್ಯಾಂಕ್‌ 27 ಲಕ್ಷ ರೂ. ವಿಮಾ ಹಣವನ್ನು ಮೃತನ ಪತ್ನಿಗೆ ಹಸ್ತಾಂತರ ಮಾಡುವ ಮೂಲಕ ಸಂಕಷ್ಟದಲ್ಲಿದ್ದ ಕುಟುಂಬದ ನೆರವಿಗೆ ಧಾವಿಸಿದೆ.
ಮೃತ ಗ್ರಾಹಕನ ಕುಟುಂಬಕ್ಕೆ ವಿಮಾ ಚೆಕ್‌ ವಿತರಿಸಿ ಮಾತನಾಡಿದ ಎಸ್‌ಬಿಐ ಪ್ರಾದೇಶಿಕ ವ್ಯವಹಾರ ಕಚೇರಿ-6ಕ ಪ್ರಾದೇಶಿಕ ವ್ಯವಸ್ಥಾಪಕರಾದ ಅನಿಲ್‌ ಬಿಹಾರಿ ಅವರು, 2020 ರಲ್ಲಿ ಗ್ರಾಹಕ ರವಿಕುಮಾರ್‌ ಎಂಬುವರು ನಮ್ಮ ಎಸ್‌ಬಿಐ ಬ್ಯಾಂಕ್‌ನಿಂದ 25 ಲಕ್ಷ ರೂ. ಗೃಹ ಸಾಲ ಪಡೆದಿದ್ದರು. ದುರಾದೃಷ್ಟವಶಾತ್‌ 2021 ರಲ್ಲಿ ರವಿಕುಮಾರ್‌ ಅವರು ಕೋವಿಡ್‌ ಸೋಂಕಿಗೆ ತುತ್ತಾಗಿ ಮರಣ ಹೊಂದಿದರು. ಬಳಿಕ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು, ಆದರೆ ಬ್ಯಾಂಕ್‌ ವತಿಯಿಂದ ಮಾಡಿಸಲಾಗಿದ್ದ ಎಸ್‌ಬಿಐ ಜೀವ ವಿಮೆಯಿಂದ 27 ಲಕ್ಷ ರೂ. ಮೊತ್ತ ಚೆಕ್‌ನ್ನು ಇಂದು ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದರು.
ಎಸ್‌ಬಿಐ ಜೀವ ವಿಮೆಯಿಂದ ಬಂದಿರುವ 27 ಲಕ್ಷ ರೂ. ಹಣದಲ್ಲಿ ಅವರು ಮಾಡಿದ್ದ ಗೃಹ ಸಾಲಕ್ಕೆ 25 ಲಕ್ಷ ರೂ. ಜಮೆ ಮಾಡಲಾಗುವುದು. ಮನೆ ಅವರಿಗೆ ಉಚಿತವಾಗಿ ಉಳಿಯಲಿದೆ ಎಂದರು.
ಎಂ.ಜಿ.ರಸ್ತೆ ಎಸ್‌ಬಿಐ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಶಂಕರಪ್ಪ ಮಾತನಾಡಿ, ಎಂ.ಜಿ.ರಸ್ತೆಯಲ್ಲಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ರವಿಕುಮಾರ್‌ ಎಂಬ ಗ್ರಾಹಕರು 2020ರಲ್ಲಿ ಮನೆ ನಿರ್ಮಾಣ ಮಾಡಲೆಂದು 25 ಲಕ್ಷ ರೂ. ಸಾಲ ಪಡೆದಿದ್ದರು. ಆ ಸಂದರ್ಭದಲ್ಲಿ ಎಸ್‌ಬಿಐ ಜೀವ ವಿಮೆ ಮಾಡಿಸಲಾಗಿತ್ತು, ಕೋವಿಡ್‌ನಿಂದಾಗಿ ಅವರು ಮೃತಪಟ್ಟಿದ್ದರು, ಅವರು ಮಾಡಿದ್ದ ಸಾಲವನ್ನು ವಿಮೆಯ ಹಣದಿಂದ ಭರಿಸಲಾಗಿದೆ, ಆದ್ದರಿಂದ ಗ್ರಾಹಕರು ಎಸ್‌ಬಿಐ ಜೀವ ವಿಮೆ ಮಾಡಿಸಿದರೆ ಸಂಕಷ್ಟದ ಸಂದರ್ಭದಲ್ಲಿ ನೆರವಾಗಲಿದೆ, ಹಾಗಾಗಿ ಪ್ರತಿಯೊಬ್ಬ ಗ್ರಾಹಕರು ಜೀವ ವಿಮೆಯನ್ನು ಮಾಡಿಸಬೇಕು ಎಂದು ಮನವಿ ಮಾಡಿದರು.
ಎಸ್‌ಬಿಐ ಪ್ರಾದೇಶಿಕ ಕಚೇರಿಯ ಡೆಪ್ಯೂಟಿ ಮ್ಯಾನೇಜರ್‌ ವಾದಿರಾಜು ಮಾತನಾಡಿ, ಎಸ್‌ಬಿಐ ಬ್ಯಾಂಕ್ ವತಿಯಿಂದ ಗೃಹ ಸಾಲ ನೀಡಲಾಗುತ್ತಿದೆ. ಪಡೆಯುವ ಸಾಲಕ್ಕೆ ಎಸ್‌ಬಿಐ ಜೀವ ವಿಮೆ ಮಾಡಿಸುವುದರಿಂದ ಆಕಸ್ಮಿಕವಾಗಿ ಮರಣ ಹೊಂದಿದರೆ ಕುಟುಂಬ ಬೀದಿಗೆ ಬರುವುದನ್ನು ತಪ್ಪಿಸಿದಂತಾಗುತ್ತದೆ ಎಂದರು.
ಪ್ರತಿಯೊಬ್ಬರೂ ನಮಗಾಗಿ ದುಡಿಯುವುದಕ್ಕಿಂತ ನಮ್ಮನ್ನು ನಂಬಿ ಇರುವ ಕುಟುಂಬಕ್ಕಾಗಿ ದುಡಿಯುವುದು ಮುಖ್ಯವಾಗಿದೆ ಎಂದ ಅವರು, ಯಾರ ಭವಿಷ್ಯ ಯಾರ ಕೈಯಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಸಾವು ಅನಿರೀಕ್ಷಿತವಾಗಿರುವುದರಿಂದ ನಮ್ಮ ಕುಟುಂಬದ ಭದ್ರತೆಗಾಗಿ ಎಸ್‌ಬಿಐ ವತಿಯಿಂದ ಜೀವ ವಿಮೆ ಮಾಡಿಸುವುದು ಅನುಕೂಲವಾಗುತ್ತದೆ ಎಂದರು.
ರವಿಕುಮಾರ್‌ ಅವರು ನಮ್ಮ ಬ್ಯಾಂಕ್‌ನಿಂದ 25 ಲಕ್ಷ ರೂ. ಗೃಹ ಸಾಲ ಪಡೆದಿದ್ದರು. ಆ ಸಂದರ್ಭದಲ್ಲಿ 2 ಲಕ್ಷ ರೂ. ಎಸ್‌ಬಿಐ ಜೀವ ವಿಮೆ ಮಾಡಿಸಿದ್ದರು. ಇಂದು ಅವರು ಪಡೆದ ಸಾಲವನ್ನು ಬ್ಯಾಂಕ್‌ ವಿಮೆಯಿಂದ ಭರಿಸಿಕೊಳ್ಳುತ್ತಿದ್ದು, ಮನೆಯನ್ನು ಕೊಡುಗೆಯಾಗಿ ಬ್ಯಾಂಕ್‌ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿಯ ಮುಖ್ಯ ವ್ಯವಸ್ಥಾಪಕರಾದ ರಾಘವೇಂದ್ರ, ಎಂ.ಜಿ. ರಸ್ತೆಯ ಆರ್‌ಎಸ್‌ಸಿಪಿಸಿ ಮುಖ್ಯ ವ್ಯವಸ್ಥಾಪಕ ಉದಯಕುಮಾರ್‌, ಎಸ್‌ಐಬಿ ಬ್ಯಾಂಕ್‌ ಅಧಿಕಾರಿಗಳಾದ ಹೇಮಾವತಿ, ಸಂದೀಪ್‌, ಜೋಶಿಪಾಲ್‌ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!