ಕೆರೆ ಒತ್ತುವರಿ ತೆರವುಗೊಳಿಸಲು ಗ್ರಾಮಸ್ಥರ ಒತ್ತಾಯ

216

Get real time updates directly on you device, subscribe now.

ಕುಣಿಗಲ್: ಗ್ರಾಮದ ಕೆರೆಯನ್ನು ಪಕ್ಕದ ಗ್ರಾಮದ ಕೆಲವರು ಅತಿಕ್ರಮಿಸಿ ಕೆರೆ ಹೂಳು ತೆಗೆದು ಅಭಿವೃದ್ಧಿ ಮಾಡಲು ಅಡ್ಡಪಡಿಸುತ್ತಿದ್ದಾರೆ ಎಂದು ಆರೋಪಿಸಿ ಸೊಂದಲಗೆರೆ ಗ್ರಾಮಸ್ಥರು ಕೆರೆ ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿ ತಾಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಮುಂದೆ ಜಮಾವಣೆಗೊಂಡ ಗ್ರಾಮಸ್ಥರು ಕೆರೆ ಒತ್ತುವರಿ ನಿಯಂತ್ರಿಸುವಲ್ಲಿ ವಿಫಲರಾದ ಗ್ರಾಮ ಲೆಕ್ಕಿಗ, ರಾಜಸ್ವ ನಿರೀಕ್ಷಕರ ವಿರುದ್ಧ ಘೋಷಣೆ ಕೂಗಿದರು. ಗ್ರಾಮದ ಮುಖಂಡ ರಮೇಶ್‌ ಮಾತನಾಡಿ, 1978 ರಲ್ಲಿ ಸೋಂದಲಗೆರೆ ಗ್ರಾಮದಲ್ಲಿ ಕಾವೇಮ್ಮನಕಟ್ಟೆ ಕೆರೆ ಅಭಿವೃದ್ಧಿಗಾಗಿ ಕೆಲ ಸರ್ವೇ ನಂಬರ್‌ಗಳಲ್ಲಿ ಭೂ ಸ್ವಾಧೀನ ಪಡಿಸಿಕೊಂಡು, ಪರಿಹಾರ ನೀಡಿ ಕೆರೆ ನಿರ್ಮಾಣ ಮಾಡಲಾಗಿದೆ, ಸದರಿ ಕೆರೆಯು 148 ಎಕರೆ ವಿಸ್ತೀರ್ಣ ಇದೆ, ಕೆರೆಯನ್ನು ಸರಿಯಾಗಿ ಅಭಿವೃದ್ಧಿ ಪಡಿಸದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಕೆರೆಯು ಪಕ್ಕದ ಸಿದ್ದೇಮಣ್ಣಿಪಾಳ್ಯ ಸೇರಿದಂತೆ ಇತರೆ ಗ್ರಾಮದವರಿಂದ ಸುಮಾರು 80 ಎಕರೆಗೂ ವ್ಯಾಪಕ ಒತ್ತುವರಿಯಾಗಿದೆ.
ಈಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆಯ ನೆರವಿನಿಂದ ಕೆರೆಯ ಹೂಳು ತೆಗೆದು ಕೆರೆಯ ಸಮಗ್ರ ಅಭಿವೃದ್ಧಿ ಪಡಿಸಲು ಕಾಮಗಾರಿ ಕೈಗೊಂಡಾಗ ಕೆರೆ ಜಮೀನು ಒತ್ತುವರಿ ಮಾಡಿಕೊಂಡಿರುವವರು ವಿನಾಕಾರಣ ಹೂಳು ತೆಗೆಯಲು ಹಾಗೂ ಕೆರೆ ಅಭಿವೃದ್ಧಿ ಕಾಮಗಾರಿಗೆ ಅಡ್ಡಪಡಿಸಿ ತೊಂದರೆ ಮಾಡುತ್ತಿದ್ದಾರೆ. ದಾಖಲೆಗಳ ಪ್ರಕಾರ ಕಾವೇರಮ್ಮನಕಟ್ಟೆ ಕೆರೆಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಆಗಿರುವ ಒತ್ತುವರಿ ತೆರವುಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು. ಗ್ರೇಡ್‌-2 ತಹಶೀಲ್ದಾರ್‌ ಗೋವಿಂದರಾಜು ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಹೊನ್ನಚಾರ್‌, ವಿನಯ್‌, ದಯಾನಂದ, ರಘು, ವೆಂಕಟೇಶ, ಸುರೇಶ, ಗಂಗಾಧರ, ಸುರೇಶ, ವೆಂಕಟೇಶ, ಶ್ರೀನಿವಾಸ, ದಿನೇಶ, ನಿತಿನ್‌, ನರಸಿಂಹಯ್ಯ, ದೇವರಾಜು, ರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!