ಲಂಚ ತಿಂದು ಸಿಕ್ಕಿ ಬಿದ್ದವ ಈಗ ಗುಬ್ಬಿ ತಹಶೀಲ್ದಾರ್!

189

Get real time updates directly on you device, subscribe now.

ಪ್ರಾಮಾಣಿಕ ಅಧಿಕಾರಿ ಮಮತಾ ಜಾಗಕ್ಕೆ ಪ್ರದೀಪ್‌ಕುಮಾರ್ ನೇಮಕ

 

ತುಮಕೂರು: ದಕ್ಷರಿಗೆ ಬೆಲೆ ಇಲ್ಲ, ಪ್ರಾಮಾಣಿಕರಿಗೆ ಉಳಿಗಾಲವಿಲ್ಲ ಎಂಬ ಮಾತು ಗುಬ್ಬಿ ತಹಶೀಲ್ದಾರ್ ಆಗಿದ್ದ ಮಮತಾ ವಿಚಾರದಲ್ಲಿ ಸಾಬೀತಾಗಿದೆ, ದಕ್ಷ, ಪ್ರಾಮಾಣಿಕರು ಎನಿಸಿದ್ದ ತಹಶೀಲ್ದಾರ್ ಮಮತಾ ಅವರನ್ನು ಕುತಂತ್ರದ ಬಲೆ ಎಣೆದು ಎತ್ತಂಗಡಿ ಮಾಡಿಸಿದ್ದು ಎಲ್ಲರಿಗೂ ಗೊತ್ತಿದೆ, ವಿಪರ್ಯಾಸ ಎಂದರೆ ಲಂಚ ಪಡೆದ ಆರೋಪದ ಮೇಲೆ ಎಸಿಬಿ ಬಲೆಗೆ ಬಿದ್ದು ಜೈಲು ಸೇರಿ ಬಂದಿದ್ದ ಗ್ರೇಡ್-2 ತಹಶೀಲ್ದಾರ್ ಅವರನ್ನು ಈಗ ಗುಬ್ಬಿ ತಹಶೀಲ್ದಾರ್ ಆಗಿ ಸರ್ಕಾರ ನೇಮಿಸಿರುವುದು ನೋಡಿದರೆ ಭ್ರಷ್ಟರಿಗೆ, ಮೋಸಗಾರರಿಗೆ ಈ ಸಮಾಜದಲ್ಲಿ ಹೆಚ್ಚು ಬೆಲೆ ಎಂಬುದು ಈಗ ಸಾಬೀತಾಗಿದೆ.

ಹೌದು, ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗ್ರೇಡ್-2 ತಹಶೀಲ್ದಾರ್ ಪ್ರದೀಪ್‌ಕುಮಾರ್ ಈಗ ಗುಬ್ಬಿ ಗ್ರೇಡ್-1 ತಹಶೀಲ್ದಾರ್ ಆಗಿ ಭಡ್ತಿ ಪಡೆದು ಅಧಿಕಾರ ವಹಿಸಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ.

ಕೆಲ ದಿನಗಳಿಂದ ಗುಬ್ಬಿ ತಹಶೀಲ್ದಾರ್ ಹುದ್ದೆ ತೆರವಾಗಿದ್ದ ಕಾರಣ ಆ ಜಾಗಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಗ್ರೇಡ್-2 ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಅವರನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಡಾ.ಗೀತಾ ಎಲ್. ಅವರು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಸ್ಥಳ ನಿಯೋಕ್ತಿಗೊಳಿಸಿ ಆದೇಶಿಸಿದ್ದಾರೆ.

2019 ರಲ್ಲಿ ಲೋಕಸಭಾ ಚುನಾವಣೆಯ ವೇಳೆ ಅಧಿಕಾರಿಗಳಿಗೆ ಊಟ, ಉಪಹಾರ ಸರಬರಾಜು ಮಾಡಿದ ಕೆಟರಿಂಗ್ ಮಾಲೀಕ ದಿನೇಶ್ ಪೈ ಅವರಿಗೆ 9 ಲಕ್ಷ 30 ಸಾವಿರ ರೂ. ಬಿಲ್ ಪಾವತಿಸಲು ಲಂಚಕ್ಕೆ ಬೇಡಿಕೆ ಇಟ್ಟು, ಬಿಲ್ ಪಾವತಿಸಬೇಕಾದರೆ ತನಗೆ 1 ಲಕ್ಷ 25 ಸಾವಿರ ರೂಪಾಯಿ ಲಂಚ ನೀಡಬೇಕು ಎಂದು ಪ್ರದೀಪ್‌ಕುಮಾರ್ ಕೇಳಿದ್ದರು, ಈ ಬಗ್ಗೆ ಪೈ ಕೆಟರಿಂಗ್ ಮಾಲೀಕ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಎಸಿಬಿ ಅಧಿಕಾರಿಗಳೇ ಹಣ ಹೊಂದಿಸಿ ತಹಶೀಲ್ದಾರ್ ಕಚೇರಿಯ ಒಳಗೇ ಹಣ ನೀಡುವುದು ಎಂದು ಮುಹೂರ್ತ ಫಿಕ್ಸ್ ಮಾಡಿದ್ದರು, ಪುತ್ತೂರಿನ ಪೈ ಕೇಟರರ್ಸ್‌ನ ದಿನೇಶ್ ಪೈ ಅವರಿಂದ 1.25 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಎಸ್‌ಪಿ ಉಮಾ ಪ್ರಶಾಂತ್ ಮತ್ತು ಇನ್‌ಸ್‌‌ಪೆಕ್ಟರ್ ಯೋಗೀಶ್ ಕುಮಾರ್ ತಂಡ ದಾಳಿ ನಡೆಸಿ ತಹಶೀಲ್ದಾರ್ ಪ್ರದೀಪ್ ಕುಮಾರ್ ಅವರನ್ನು ಬಂಧಿಸಿತ್ತು.

ಡಾ.ಪ್ರದೀಪ್ ಕುಮಾರ್ ಅವರನ್ನು ಟ್ರ್ಯಾಪ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ, 48 ತಾಸಿಗೂ ಹೆಚ್ಚು ಅವಧಿಗೆ ನ್ಯಾಯಾಂಗ ಬಂಧನದಲ್ಲಿರಿಸಿದ್ದರು. ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 1957 ರ ಕಲಂ 10(1)(ಎ) ಮತ್ತು 10(2)(ಎ) ರನ್ವಯ ಸರ್ಕಾರದ ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ಲಂಚ ಪಡೆದ ಪ್ರಕರಣದಲ್ಲಿ ಆರೋಪಿಯಾಗಿದ್ದ ಪುತ್ತೂರು ಗ್ರೇಡ್-2 ತಹಶೀಲ್ದಾರ್ ಪ್ರದೀಪ್ ಕುಮಾರ್ ಅವರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾ ಗೊಳಿಸಿತ್ತು. ಹೀಗಿರುವಾಗ ಸರ್ಕಾರ ಪ್ರಕರಣವನ್ನು ಏಕಾಏಕಿ ವಜಾಗೊಳಿಸಿ ದಿಢೀರ್ ಸ್ಥಳ ನಿಯೋಕ್ತಿ ಮಾಡುವ ಜರೂರತ್ತಾದರೂ ಏನಿತ್ತು ಎಂಬುದು ತಿಳಿದು ಬಂದಿಲ್ಲ.

ಮತ್ತೊಂದು ವಿಪರ್ಯಾಸ ಎಂದರೆ ಸರ್ಕಾರ ಹೊರಡಿಸಿರುವ ಆದೇಶದಲ್ಲೇ ಪ್ರದೀಪ್‌ಕುಮಾರ್ ಎಸಿಬಿ ಬಲೆಗೆ ಬಿದ್ದಿದ್ದ ವಿಚಾರವನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ, ಈ ಎಲ್ಲಾ ಸತ್ಯ ಗೊತ್ತಿದ್ದರೂ ಅವರನ್ನು ಗುಬ್ಬಿ ತಹಶೀಲ್ದಾರ್ ಆಗಿ ನೇಮಿಸಿರುವುದರ ಹಿಂದಿನ ಮರ್ಮ ಏನು ಎಂಬುದು ಮಾತ್ರ ತಿಳಿಯುತ್ತಿಲ್ಲ.

ಹಿಂದೆ ಇದ್ದ ತಹಶೀಲ್ದಾರ್ ಮಮತಾ ಅವರು ದಕ್ಷ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು, ಇಂಥವರ ವಿರುದ್ಧ ಜನಪ್ರತಿನಿಧಿಗಳೇ ಕುತಂತ್ರ ಮಾಡಿ ವರ್ಗಾವಣೆಗೆ ಸಂಚು ರೂಪಿಸಿದ್ದರು, ಇದೇ ಮಂದಿಯೇ ಈಗ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಆರೋಪಕ್ಕೆ ಗುರಿಯಾಗಿರುವ ಪ್ರದೀಪ್‌ಕುಮಾರ್ ಅವರನ್ನು ಗುಬ್ಬಿಗೆ ತರುವ ಕಾರ್ಯ ಮಾಡಿದರಾ ಎಂಬ ಪ್ರಶ್ನೆಗಳು ಮೂಡಿವೆ.

ಮಮತಾ ಅವರನ್ನೇ ಮರು ನಿಯೋಜನೆ ಮಾಡುವಂತೆ ಸಂಘಟನೆಗಳು ಹೋರಾಟ ಮಾಡಿದ್ದವು, ಆದರೆ ಇದಕ್ಕೆ ಸರ್ಕಾರ ಕಿಮ್ಮತ್ತು ನೀಡಿರಲಿಲ್ಲ, ಆದರೆ ಈಗ ಲಂಚಾವತಾರದ ಹಣೆಪಟ್ಟಿ ಕಟ್ಟಿಕೊಂಡಿರುವ ವ್ಯಕ್ತಿಯನ್ನು ಗುಬ್ಬಿ ತಹಶೀಲ್ದಾರ್ ಆಗಿ ನೇಮಕ ಮಾಡಿರುವುದು ನೋಡಿದರೆ ಆಡಳಿತ ಎತ್ತ ಸಾಗುತ್ತಿದೆ ಎಂಬ ಅನುಮಾನ ಮೂಡಿದೆ, ಆರೋಪ ಹೊತ್ತಿರುವ ಅಧಿಕಾರಿ ಇನ್ಯಾವ ಮಟ್ಟಕ್ಕೆ ಕೆಲಸ ಮಾಡಿಯಾರು, ಲಂಚದ ರುಚಿ ಕಂಡಿರುವ ವ್ಯಕ್ತಿ ಮತ್ತೆ ಅದೇ ಕಸುಬು ಮುಂದುವರೆಸಲ್ಲಾ ಎಂಬ ಗ್ಯಾರೆಂಟಿ ಏನಿದೆ, ಜನರು ಈ ಅಧಿಕಾರಿಯಿಂದ ನಿರೀಕ್ಷಿಸುವುದಾದರೂ ಏನು ಎಂಬ ಜಿಜ್ಞಾಸೆ ಮೂಡಿಸಿದೆ.

ಒಳ್ಳೆ ಕೆಲಸ ಮಾಡಿ ಉತ್ತಮರೆನಿಸಿದವರಿಗೆ ಇಲ್ಲಿ ಉಳಿಗಾಲವಿಲ್ಲ, ಎಲ್ಲವನ್ನು ಬಾಚಿ ತಿನ್ನುವ, ಬಡವರನ್ನು ದೋಚುವ, ತನ್ನ ಕಾರ್ಯ ವ್ಯಾಪ್ತಿಯನ್ನೇ ಮರೆತು ನುಂಗಾಟಕ್ಕೆ ಇಳಿಯುವ ಅಧಿಕಾರಿಗಳಿಗೇ ಇಲ್ಲಿ ಮನ್ನಣೆ ಹೆಚ್ಚು, ಇದು ನಮ್ಮ ಆಡಳಿತ, ಇದು ಇಂದಿನ ವ್ಯವಸ್ಥೆ, ಮುಂದೆ ಗುಬ್ಬಿ ತಾಲ್ಲೂಕಿನ ಜನರಿಗೆ ಏನು ಕಾದಿದೆಯೋ ಕಾದು ನೋಡಬೇಕಿದೆ.

Get real time updates directly on you device, subscribe now.

Comments are closed.

error: Content is protected !!