ಗುಬ್ಬಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸಂವಿಧಾನ ರಚನೆ ಮಾಡಿರುವುದು ಕೇವಲ ಒಂದು ಸಮುದಾಯಕ್ಕೆ ಮಾತ್ರವಲ್ಲ, ದೇಶದ ಪ್ರತಿಯೊಬ್ಬ ಪ್ರಜೆಗೂ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ತಿಳಿಸಿದರು.
ಪಟ್ಟಣದ ಶ್ರೀಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಜಾಥಾದ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿದ ದಲಿತ ಸಂಘರ್ಷ ಸಮಿತಿವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ದೇಶದ ಘನತೆ ಎತ್ತಿ ಹಿಡಿಯಬೇಕಾಗಿರುವ ನ್ಯಾಯಾಧೀಶರು ಸಂವಿಧಾನಕ್ಕೆ ಅಪಚಾರ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ, ಅಂಬೇಡ್ಕರ್‌ರವರ ಆಶಯಗಳಿಗೆ ಚ್ಯುತಿ ತರುವಂತೆ ನಡೆದುಕೊಂಡಿರುವ ನ್ಯಾಯಾಧೀಶರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಗಣ ರಾಜ್ಯೋತ್ಸವ ದಿನದಂದು ಕೆಲವು ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸದೆ ಇರುವುದು ಗಮನಕ್ಕೆ ಬಂದಿದೆ, ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ತಾಲ್ಲೂಕಿನಿಂದ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ್ ಮಾತನಾಡಿ, ಪ್ರಪಂಚವೇ ಅಂಬೇಡ್ಕರ್ ಅವರನ್ನು ಒಪ್ಪಿಕೊಂಡು ಅವರ ಆದರ್ಶ ಪಾಲನೆ ಮಾಡುತ್ತದೆ, ಅಂತರದಲ್ಲಿ ನಮ್ಮ ರಾಜ್ಯದಲ್ಲಿ ಇಂತಹ ಘಟನೆ ನಡೆದಿರುವುದು ನೋಡಿದಾಗ ಇಂದಿಗೂ ಸಹ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಬೇಸರ ತರಿಸುತ್ತದೆ, ಮೀಸಲಾತಿ ಯಾರ ಭಿಕ್ಷೆಯೂ ಅಲ್ಲ, ಸಂವಿಧಾನ ನೀಡಿರುವ ಹಕ್ಕು, ಅದನ್ನು ಪಡೆಯಲು ಹೋರಾಟ ಮಾಡಿಯೇ ತೀರುತ್ತೇವೆ ಎಂದು ಹೇಳಿದರು.
ಮುಖಂಡ ಮಾರನಹಳ್ಳಿ ಶಿವಯ್ಯ ಮಾತನಾಡಿ, ಈ ದೇಶದ ಕಾನೂನಿಗೆ ಎಲ್ಲರೂ ತಲೆಬಾಗಲೇ ಬೇಕಿದೆ, ನ್ಯಾಯಾಧೀಶರೂ ಇದರಿಂದ ಹೊರತಾಗಿಲ್ಲ, ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ನೀಡಿ ಈ ನ್ಯಾಯಾಧೀಶರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ತಾಲ್ಲೂಕು ಸಂಚಾಲಕ ಚೇಳೂರು ಶಿವನಂಜಯ್ಯ, ಮುಖಂಡರಾದ ರತ್ನಕುಮಾರ್, ಕೊಡಿಯಾಲ ಮಹಾದೇವ, ನರಸೀಯಪ್ಪ, ನಟರಾಜು, ಶಂಕರ್, ಚಿರಂಜೀವಿ, ಮಂಜುನಾಥ್, ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್ ಇತರರು ಇದ್ದರು.
ಅಂಬೇಡ್ಕರ್‌ಗೆ ಅಪಮಾನ- ನ್ಯಾಯಾಧೀಶರಿಗೆ ಶಿಕ್ಷೆ ನೀಡಿ
Get real time updates directly on you device, subscribe now.
Prev Post
Comments are closed.