ಕಾಂಗ್ರೆಸ್‌, ಬಿಜೆಪಿ ನಾಯಕರ ನಡೆಗೆ ಜಗದೀಶ್‌ ಕಿಡಿ

ರಂಗನಾಥ್‌ಗೆ ಪ್ರಚಾರ ಫಲ ಕೊಡಲ್ಲ- ಕೃಷ್ಣಕುಮಾರ್‌ಗೆ ಅನುಕಂಪ ಗಿಟ್ಟಲ್ಲ

416

Get real time updates directly on you device, subscribe now.

ಕುಣಿಗಲ್‌: ಬರೀ ಪ್ರಚಾರದಲ್ಲೆ ಕಾಲ ಕಳೆಯುವ ಕಾಂಗ್ರೆಸ್‌ ಶಾಸಕರು, ಅನುಕಂಪದ ಆಧಾರದ ಮೇಲೆ ರಾಜಕಾರಣ ಮಾಡಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಬಿಜೆಪಿ ಮುಖಂಡರ ಬದ್ಧತೆಯ ಕೊರತೆಯಿಂದ ತಾಲೂಕಿನ ರೈತರು ಪರದಾಡುವಂತಾಗಿದೆ ಎಂದು ತಾಲೂಕು ಜೆಡಿಎಸ್‌ ಅಧ್ಯಕ್ಷ ಬಿ.ಎನ್‌.ಜಗದೀಶ್‌ ಹೇಳಿದರು.

ಮಂಗಳವಾರ ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ರೈತರು 36 ಸಾವಿರ ಹೆಕ್ಟೇರ್‌ನಿಂದ ಒಟ್ಟಾರೆ 4.20 ಲಕ್ಷ ಕ್ವಿಂಟಾಲ್‌ ರಾಗಿ ಬೆಳೆದಿದ್ದು, ಕೇವಲ 1.16 ಲಕ್ಷ ಕ್ವಿಂಟಾಲ್‌ ಖರೀದಿ ಮಾಡಿದ ಸರ್ಕಾರ ರಾಗಿ ಖರೀದಿ ನಿಲ್ಲಿಸಿದೆ. ಶಾಸಕರು ನೋಡಿದರೆ ಹಾವು, ಚೇಳು, ಹಲ್ಲಿ ಹಿಡಿದು ಫೋಟೋ, ವೀಡಿಯೋ ಹಾಕಿಕೊಂಡು ಪ್ರಚಾರದಲ್ಲಿ ಕಾಲ ಕಳೆಯುತ್ತಿದ್ದಾರೆ ಹೊರತು ರೈತರ ಸಮಸ್ಯೆ ಏನೆಂದು ಕೇಳುತ್ತಿಲ್ಲ, ಚುನಾವಣೆಗೆ ಇನ್ನು ಒಂದುವರೆ ವರ್ಷ ಇದೆ, ತಮ್ಮ ಶಟ್ಕನನ್ನು ಸಿಎಂ ಮಾಡಬೇಕು, ನನಗೆ ಮತ ನೀಡಿ ಎಂದು ಈಗಲೆ ಚುನಾವಣೆಗೆ ಸಿದ್ಧತೆ ನಡೆಸುತ್ತಾ ಜನರ ಸಮಸ್ಯೆಗೆ ಸ್ಪಂದಿಸದೆ ಬರಿ ಪ್ರಚಾರದಲ್ಲೆ ಕಾಲ ಕಳೆಯುತ್ತಾ ಪ್ರಚಾರ ಪ್ರಿಯ ಶಾಸಕರೆಂಬ ಖ್ಯಾತಿಗೆ ಒಳಗಾಗಿದ್ದಾರೆ. ತಾಲೂಕನ್ನು ಇದುವರೆಗೂ ಪ್ರತಿನಿಧಿಸಿದ ಯಾವುದೇ ಶಾಸಕರು ಈ ರೀತಿ ಪ್ರಚಾರದ ಗೀಳಿಗೆ ಒಳಗಾಗಿರಲಿಲ್ಲ, ಕಾಂಗ್ರೆಸ್‌ನಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡರು ಪ್ರಚಾರ ಆರಂಭಿಸಿದ್ದರಿಂದ ಮತ್ತಷ್ಟು ಆತಂಕ್ಕೆ ಒಳಗಾದ ಶಾಸಕರು ಜನಸಮಸ್ಯೆಗೆ ಸ್ಪಂದಿಸುವುದು ಮರೆತು ತಮ್ಮ ಶಟ್ಕನನ್ನು ಸಿಎಂ ಮಾಡಿದರೆ ತಾವು ಸಚಿವರಾಗುತ್ತೇವೆ ಎಂದು ಹುಸಿ ಭರವಸೆ ನೀಡುತ್ತಾ, ಸಮಸ್ಯೆ ಬಗೆಹರಿಸಲಾಗದೆ ನಮ್ಮದು ವಿರೋಧ ಪಕ್ಷ ಎಂಬ ಕುಂಟು ನೆಪ ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಮೂರು ಬಾರಿ ಸೋತಿದ್ದೇನೆ, ಈ ಬಾರಿ ಮತ ಹಾಕದೆ ಇದ್ದಲ್ಲಿ ಒಂದು ಹಿಡಿ ಮಣ್ಣು ತನ್ನಿ ಎಂದು ಅನುಕಂಪ ಗಿಟ್ಟಿಸಲು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್‌ ಈಗಾಲೆ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ, ಆಡಳಿತ ರೂಢ ಬಿಜೆಪಿ ಸರ್ಕಾರ ಇದ್ದರೂ ಜನರ ಸಮಸ್ಯೆ ಸ್ಪಂದಿಸಲಾಗದೆ ಅನುಕಂಪದ ಆಧಾರದ ಮೇಲೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಾ ಜನತೆಗೆ ಒಂದು ಹಿಡಿ ಮಣ್ಣು ತನ್ನಿ, ಇಲ್ಲ ಮತಹಾಕಿ ಎಂದು ಭಾವನಾತ್ಮಕವಾಗಿ ಹೇಳಿಕೆ ಕೊಡುವ ಮೂಲಕ ಹೊಸ ಹೆಸರನ್ನು ಸಂಪಾದಿಸಿದ್ದು ಅವರ ಹೆಸರು ಅನುಕಂಪದ ಕುಮಾರ್‌ ಎಂದು ಬದಲಾಯಿಸಬೇಕಿದೆ, ಶಾಸಕರು ಹಾಗೂ ಬಿಜೆಪಿ ಮುಖಂಡರು ಜಿದ್ದಿಗೆ ಬಿದ್ದವರ ಹಾಗೆ ಜನ ಸಂಪರ್ಕ ಸಭೆ ಮಾಡುತ್ತಿದ್ದಾರೆ, ಆದರೆ ಜನರ ಸಮಸ್ಯೆಗೆ ಮಾತ್ರ ಬಗೆಹರಿಯುತ್ತಿಲ್ಲ, ಪ್ರಚಾರದ ಗೀಳಿಗೆ ಬಿದ್ದು ಈಗಾಲೆ ಅನುಕಂಪದ ಆಧಾರದ ಮೇಲೆ ಅಧಿಕಾರ ಹಿಡಿಯುವ ಕನಸು ಕಾಣುತ್ತಿರುವ ಬಿಜೆಪಿ ಮುಖಂಡರ ನಡೆ ಖಂಡನೀಯ ಎಂದರು.
ಎರಡು ರಾಷ್ಟ್ರೀಯ ಪಕ್ಷಗಳು ತಾಲೂಕಿನ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ರೈತರು ಪರದಾಡುವಂತಾಗಿದೆ, ಕಳೆದೊಂದು ವರ್ಷದಿಂದ ಒಂದುವರೆ ಸಾವಿರ ಬಿಪಿಎಲ್‌ ಕಾರ್ಡ್‌ದಾರರು ಅರ್ಜಿ ಹಾಕಿ ಕಾಯುತ್ತಿದ್ದಾರೆ, ಗ್ರಾಮಾಂತರ ಪ್ರದೇಶದಲ್ಲಿ ಬಿಪಿಎಲ್‌ ಕಾರ್ಡ್‌ ವಜಾ ಮಾಡಲಾಗುತ್ತಿದೆ, ಶಾಸಕರಾಗಲಿ, ಆಡಳಿತ ಇರುವ ಸರ್ಕಾರದ ಬಿಜೆಪಿ ಮುಖಂಡರಾಗಲಿ ಚಕಾರ ಎತ್ತುತ್ತಿಲ್ಲ, ಮೂರು ಮುಕ್ಕಾಲು ವರ್ಷ ಕಳೆಯುತ್ತಾ ಬಂದಿದ್ದರೂ ಶಾಸಕರು ಜನಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಜನಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿರುವ ಕಾರಣ ಎರಡೂ ಪಕ್ಷದ ವಿರುದ್ಧ ಶೀಘ್ರದಲ್ಲೆ ಹೋರಾಟ ನಡೆಸಲಾಗುವುದು, ಶಾಸಕರು ಇನ್ನಾದರೂ ಎಚ್ಚೆತ್ತು ಸರ್ಕಾರದ ಮೇಲೆ ಒತ್ತಡ ತಂದು ರಾಗಿ ಖರೀದಿಗೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.
ಮೂರು ಮುಕ್ಕಾಲು ವರ್ಷ ಕಳೆದೂ ನೂರು ಮೀಟರ್‌ ರಸ್ತೆ ಮಾಡಿಸಲಾಗಲಿಲ್ಲ, ಶಾಸಕರಿಗೆ ಪಟ್ಟಣದ ರಸ್ತೆ ಧೂಳು ಹಿಡಿಯುತ್ತಿದ್ದರೂ ನೂರು ಮೀಟರ್‌ ರಸ್ತೆ ಮಾಡಿಸಲು ಶಾಸಕರಿಗೆ ಆಗಲಿಲ್ಲ, ದಿನಾಲೂ ಇದೆ ರಸ್ತೆಯಲ್ಲಿ ಸಂಚರಿಸುವ ಶಾಸಕರು ನೂರು ಮೀಟರ್‌ ರಸ್ತೆ ಮಾಡಿಸಲು ಆಗಿಲ್ಲ, ದಿನಾಲೂ ಪಟ್ಟಣದ ಅಂಗಡಿಯವರು, ಫುಟ್‌ಪಾತ್‌ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳು ಧೂಳಿನಿಂದ ಪರದಾಡುತ್ತಿದ್ದಾರೆ, ಸ್ವಯಂ ಘೋಷಿತ ವಿದ್ಯಾವಂತ ಶಾಸಕರು, ವೈದ್ಯ ಶಾಸಕರು ಎಂದು ಹೇಳಿಕೊಳ್ಳುವ ಶಾಸಕರಿಗೆ ಧೂಳಿನಿಂದ ಜನರ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದುರ ಅರಿವಿಲ್ಲವೆ, ಸಂಜೆ ಒಂದು ಗಂಟೆ ಶಾಸಕರು ಸರ್ಕಲ್‌ನಲ್ಲಿ ಧೂಳಿನಲ್ಲಿ ನಿಂತುಕೊಳ್ಳಲಿ ಆವಾಗ ಜನರ ಕಷ್ಟ ಏನೆಂದು ತಿಳಿಯುತ್ತೆ, ಪುರಸಭೆಯಲ್ಲಿ ಅವರದೆ ಅಧಿಕಾರ ಇದೆ, ರಸ್ತೆ ನಿರ್ಮಾಣಕ್ಕೆ ಬೇಕಾದ ಅನುದಾನವೂ ಮಂಜೂರಾಗಿ ತಿಂಗಳಾಗಿದೆ, ಆದರೂ ಶಾಸಕರು ನೂರು ಮೀಟರ್‌ ರಸ್ತೆ ಮಾಡಿಸದೆ ಇರುವುದು ಅವರ ಅಸಮರ್ಥತೆ ತೋರಿಸುತ್ತದೆ, ಬರೀ ಪ್ರಚಾರದಲ್ಲೆ ಕಾಲ ಕಳೆಯುವ ಶಾಸಕರು ಪ್ರಚಾರದ ಗೀಳು ಬಿಟ್ಟು ಹಿರಿಯ ಶಾಸಕರ ಮಾರ್ಗದರ್ಶನ ಪಡೆದು ಜನರ ಅಭಿವೃದ್ಧಿ ಕೆಲಸ ಮಾಡಲಿ, ಇಲ್ಲವಾದಲ್ಲಿ ಜೆಡಿಎಸ್‌ ನಿಂದ ಪ್ರತಿಭಟನೆ ಎದುರಿಸಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಮುಖಂಡರಾದ ಕೆ.ಎಲ್‌.ಹರೀಶ್‌, ಎಡೆಯೂರು ದೀಪು, ನಾಗರಾಜು, ಸತೀಶ್‌, ತರೀಕೆರೆ ಪ್ರಕಾಶ, ರಮೇಶ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!