ಸಮಾಜದ ಮಲಿನತೆ ತೊಳೆದವರು ಮಡಿವಾಳರು

260

Get real time updates directly on you device, subscribe now.

ತುಮಕೂರು: ಸಮಾಜದ ಮಲಿನತೆ ತೊಳೆಯುವ ಶಕ್ತಿಯನ್ನು ಮಡಿವಾಳ ಸಮುದಾಯಕ್ಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಕೆ.ಎಸ್‌.ಸಿದ್ದಲಿಂಗಪ್ಪ ಆಶಯ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ಜಿಲ್ಲಾ ಮಡಿವಾಳ ಸಂಘ ಹಾಗೂ ತಾಲ್ಲೂಕು ಮಡಿವಾಳ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಶಾಂತಿಯುತ ಸಮಾಜವೆಂದೆನಿಸಿಕೊಂಡಿರುವ ಮಡಿವಾಳ ಸಮುದಾಯದವರು ಎಲ್ಲರೊಂದಿಗೆ ಬೆರೆಯುವ ಭಾವ ಹೊಂದಿದ್ದಾರೆ ಎಂದರಲ್ಲದೆ, ಮಡಿವಾಳ ಸಮುದಾಯದವರು ಕೀಳರಿಮೆಯಿಂದ ಹೊರಬಂದು ವೃತ್ತಿಧರ್ಮದೊಂದಿಗೆ ತಮ್ಮ ಮಕ್ಕಳನ್ನು ಪ್ರತಿಭಾನ್ವಿತರಾಗಿ ತಯಾರು ಮಾಡಿ ಸಮಾಜದ ಮುಖ್ಯ ವಾಹಿನಿಗೆ ಬರುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ವಚನ ಶ್ರೇಷ್ಠಕಾರರ, ಸಮಾಜ ಸುಧಾರಕರ ಕಾಲಘಟ್ಟವಾಗಿದ್ದ 12ನೇ ಶತಮಾನದಲ್ಲಿ ತಾರತಮ್ಯದ ಭಾವನೆ ಧಿಕ್ಕರಿಸಿ ಸಾಮಾಜಿಕ ಕ್ರಾಂತಿಗೆ ಬುನಾದಿ ಹಾಕಿದ ವಚನ ಶ್ರೇಷ್ಠರಲ್ಲಿ ಮಡಿವಾಳ ಮಾಚಿದೇವರು ಕೂಡ ಒಬ್ಬರು, ಇವರು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭುಗಳಂತೆ ವಚನಗಳನ್ನು ರಚಿಸುವ ಮೂಲಕ ಸಾಮಾಜಿಕ ಅಸಮಾನತೆ ಹೋಗಲಾಡಿಸಿದ ದಾರ್ಶನಿಕರೆನಿಸಿಕೊಂಡಿದ್ದರಲ್ಲದೆ, ದುಡಿಮೆಯೇ ದೇವರು ಎಂದು ನಂಬಿದ್ದರು. ತಮ್ಮ ಬದುಕಿನಲ್ಲಿ ಕಾಯಕ ತತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಶ್ರೇಷ್ಠ ಕಾಯಕ ಯೋಗಿ ಎಂದೆನಿಸಿದ್ದರು ಎಂದರು.
ಬಸವಣ್ಣನವರ ಆಜ್ಞಾಧಾರಕರಾಗಿ ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಸಾಮಾಜಿಕ ಕ್ರಾಂತಿಗೆ ಇಂಬುಕೊಟ್ಟ ಅಲ್ಲಮಪ್ರಭು, ಅಕ್ಕಮಹಾದೇವಿಯಂತಹ ಧೀಮಂತರೊಂದಿಗೆ ಹೆಜ್ಜೆ ಹಾಕುವುದರಲ್ಲಿ ಮಾಚಿದೇವರು ಪ್ರಮುಖರಾಗಿದ್ದರು. ನುಡಿಯ ಲಿಂಗವ ಬಿಟ್ಟು ಗುಡಿಯ ಲಿಂಗವ ಪೂಜೆಯ ಮಾಡಿದರೆ ಏನು ಪ್ರಯೋಜನ? ಸಮಾಜಕ್ಕೆ ಆಡಂಬರದ ಪೂಜೆಯ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯೆ ಮಂಜುಳಾ ಆದರ್ಶ್‌ ಮಾತನಾಡಿ ಮಾಚಿದೇವ ಕುರಿತು ಕಲಾಕ್ಷೇತ್ರದಲ್ಲಿ ಎರಡು ಭಾರಿ ನಾಟಕವನ್ನು ಪ್ರದರ್ಶಿಸಲಾಗಿದ್ದು, ನಾಟಕದ ಮೂಲಕ ವಚನಕಾರ ಮಾಚಿದೇವರ ಕುರಿತು ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಯಿತು ಎಂದರು.
ಮತ್ತೋರ್ವ ಪಾಲಿಕೆ ಸದಸ್ಯ ವಿಷ್ಣುವರ್ಧನ್‌ ಮಾತನಾಡಿ ಮಾಚಿದೇವರು ಜಗಜ್ಯೋತಿ ಬಸವಣ್ಣನವರ ಅನುಯಾಯಿ ಆಗಿದ್ದು ತಾರತಮ್ಯದ ವಿರುದ್ಧ ಸಮರ ಸಾರಿದ ಶ್ರೇಷ್ಠರಾಗಿದ್ದಾರೆ. ಮಡಿವಾಳ ಸಮಾಜದ ಮಕ್ಕಳು ಶಿಕ್ಷಣ ಪಡೆದು ಉನ್ನತ ಸ್ಥಾನ ಗಳಿಸಬೇಕೆಂದರಲ್ಲದೆ, ರಾಜಕೀಯ ಪ್ರಾತಿನಿಧ್ಯ ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶ್ವಾಮಯ್ಯ, ಜಿಲ್ಲಾ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ್‌, ಉಪಾಧ್ಯಕ್ಷ ಚಿಕ್ಕಣ್ಣ, ತಾಲ್ಲೂಕು ಅಧ್ಯಕ್ಷ ಕೆಂಪನರಸಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಮ್‌ ರವಿಕುಮಾರ್‌, ಪೊಲೀಸ್‌ ಇಲಾಖೆಯ ರಾಜಣ್ಣ, ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್‌, ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಕೆ.ಹೆಚ್‌. ಮಡಿವಾಳ ಸಮಾಜದ ಮುಖಂಡರಾದ ದೇವೇಂದ್ರ, ಶಾಂತಕುಮಾರ್‌, ಹೆಚ್‌.ಎಂ.ಶ್ರೀನಿವಾಸ್‌, ಗೋವಿಂದರಾಜು, ಕೃಷ್ಣಮೂರ್ತಿ ಆರ್‌., ಕೆಂಪರಾಮಯ್ಯ, ವೆಂಕಟರಾಮಯ್ಯ, ಆನಂದ ಮೂರ್ತಿ, ಜಿ.ಆರ್‌. ಚೆನ್ನಬಸವಣ್ಣ, ಅಂಬಿಕಾ, ಮಂಜುಳಾ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!