ಕುಣಿಗಲ್: ತಾಲೂಕಿನ ರಾಜಕಾರಣದ ಬೆಳವಣಿಗೆ ಆತಂಕಕಾರಿಯಾಗಿದೆ, ಅಧಿಕಾರ ಪಡೆಯಲು ಅಹಿಂದ ಸಂಘಟನೆಯಂತಹ ಸಂಘಟನೆ ಹುಟ್ಟಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.
ಬುಧವಾರ ಪಟ್ಟಣದಲ್ಲಿ ಅಹಿಂದ ವರ್ಗಗಳ ಒಕ್ಕೂಟ ಹಮ್ಮಿಕೊಂಡಿದ್ದ ಪುರಸಭಾಧ್ಯಕ್ಷ ರಂಗಸ್ವಾಮಿಯವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಈ ಹಿಂದಿನ ದಿನಗಳಲ್ಲಿ ತಾಲೂಕಿನಲ್ಲಿ ಇಂತಹ ಸಂಘಟನೆಗಳು ನಿರ್ಮಾಣವಾಗುವ ಅಗತ್ಯತೆ ಇರಲಿಲ್ಲ, ಅಂದು ಎಲ್ಲರನ್ನು ಗುರುತಿಸಿ ಅಧಿಕಾರ ನೀಡಲಾಗುತ್ತಿತ್ತು, ಆದರೆ ಈಗಿನ ವಿಚಿತ್ರ ರಾಜಕಾರಣದ ಸನ್ನಿವೇಶದಿಂದ ಅಹಿಂದ ವರ್ಗದವರು ಸಂಘಟನೆ ಕಟ್ಟಿಕೊಂಡು ಅಧಿಕಾರ ಪಡೆಯುವ ಮಟ್ಟಕ್ಕೆ ರಾಜಕಾರಣ ಸ್ಥಿತಿ ನಿರ್ಮಾಣವಾಗಿದೆ, ಈ ನಿಟ್ಟಿನಲ್ಲಿ ಪ್ರಜ್ಞಾವಂತ ಮತದಾರರು ಜಾಗೃತರಾಗಿ ತಾಲೂಕಿನ ರಾಜಕಾರಣ ಸರಿದಾರಿಗೆ ತರುವತ್ತ ಶ್ರಮಿಸಬೇಕೆಂದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಸತತ ಹೋರಾಟದಿಂದಲೆ ಅಧಿಕಾರ ಪಡೆದ ರಂಗಸ್ವಾಮಿಯವರನ್ನು ನಾಮಿನಿ ಸದಸ್ಯನಾಗಿ ಮಾಡುವ ಮೂಲಕ ರಾಜಕಾರಣಕ್ಕೆ ಕರೆ ತಂದಿದ್ದು ಇಂದು ಪುರಸಭೆ ಅಧ್ಯಕ್ಷರಾಗಿದ್ದಾರೆ, ಅಧ್ಯಕ್ಷ ಸ್ಥಾನಕ್ಕೆ ತಕ್ಕಂತೆ ಎಲ್ಲಾ ವರ್ಗದ ಜನರ ಹಿತ ಕಾಪಾಡಿ ಕಾಯಿದೆ ಬದ್ಧವಾಗಿ ಕೆಲಸ ಮಾಡಬೇಕು, ಅಧ್ಯಕ್ಷ ಗಾದಿಯನ್ನು ಕೆಲವೆ ತಿಂಗಳಿಗೆ ನಿಯಮಿತಗೊಳಿಸಿ ಅಧಿಕಾರ ನೀಡಿರುವುದು ಸರಿಯಲ್ಲ, ಈ ನಿಟ್ಟಿನಲ್ಲಿ ಶಾಸಕರು ಕ್ರಮಕೈಗೊಂಡು ಪೂರ್ಣಾವಧಿ ಅಧಿಕಾರ ನೀಡಬೇಕು ಎಂದರು.
ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಡಾ.ರಾಜ್‌ಕುಮಾರ್ ಅಭಿಮಾನಿ ಸಂಘಟನೆಯ ಮೂಲಕ ಸಕ್ರಿಯ ಹೋರಾಟದಲ್ಲಿ ತೊಡಗಿಕೊಂಡು ಹೋರಾಟಗಾರನಾದ ರಂಗಸ್ವಾಮಿ, ಡಾ.ರಾಜ್‌ರವರ ಆದರ್ಶಗಳ ಪರಿಪಾಲನೆ ಮಾಡಿಕೊಂಡು ಹಣದ ಹಿಂದೆ ಹೋಗದೆ ಜನರ ಸಮಸ್ಯೆಗೆ ಸ್ಪಂದಿಸಿ ಜನಪರ ಸೇವೆ ಮಾಡಬೇಕು ಎಂದರು.
ದೊಂಬರಹಟ್ಟಿ ಕ್ಷೇತ್ರದ ಡಾ.ಆನಂದ ಗುರೂಜಿ, ಬಸವೇಶ್ವರ ಪುಣ್ಯಭೂಮಿ ಕ್ಷೇತ್ರದ ಡಾ.ಧನಂಜಯ ಗುರೂಜಿ, ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್, ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ತಾಪಂ ಮಾಜಿ ಅಧ್ಯಕ್ಷ ಹರೀಶ್‌ನಾಯಕ್, ಎಸ್.ಆರ್.ಚಿಕ್ಕಣ್ಣ, ಪುರಸಭೆ ಮಾಜಿ ಅಧ್ಯಕ್ಷ ರೆಹಮಾನ್ ಶರೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಪ್ರಮುಖರಾದ ವರದರಾಜು, ಕೆಂಪೀರೆಗೌಡ, ಪುರಸಭೆ ಸದಸ್ಯರು, ಅಹಿಂದ ವರ್ಗದ ವಿವಿಧ ಮುಖಂಡರು, ಕಾರ್ಯಕರ್ತರು ಹಾಜರಿದ್ದರು. ಪುರಸಭೆ ಅಧ್ಯಕ್ಷರೂ, ಅಹಿಂದ ವರ್ಗದ ಅಧ್ಯಕ್ಷರೂ ಆದ ರಂಗಸ್ವಾಮಿ ಅವರಿಗೆ ಸ್ಮರಣ ಕಾಣಿಕೆ ನೀಡಿ ಬಾದಾಮಿ, ಒಣ ದ್ರಾಕ್ಷಿ, ಖರ್ಜೂರದ ಹಾರ ಹಾಕುವ ಮೂಲಕ ನಾಗರಿಕ ಸನ್ಮಾನ ನೀಡಲಾಯಿತು. ಪುರಸಭಾಧ್ಯಕ್ಷ ರಂಗಸ್ವಾಮಿ ಜನತೆ ಇಟ್ಟಿರುವ ನಂಬಿಕೆಗೆ ಚ್ಯುತಿ ಬಾರದ ಹಾಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕೆಟ್ಟ ರಾಜಕಾರಣಕ್ಕೆ ಮತದಾರರೇ ಉತ್ತರ ನೀಡಲಿ: ಎಸ್‌ಪಿಎಂ
Get real time updates directly on you device, subscribe now.
Next Post
Comments are closed.