ಗುಬ್ಬಿ ಪಪಂ ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ

ಅಧಿಕಾರಿ ನಡೆಗೆ ಸದಸ್ಯರ ಕಿಡಿ- ಮಂಜುನಾಥ್‌ ಎತ್ತಂಗಡಿಗೆ ಒತ್ತಾಯ

184

Get real time updates directly on you device, subscribe now.

ಗುಬ್ಬಿ: ಗುಬ್ಬಿ ಪಟ್ಟಣ ಪಂಚಾಯಿತಿಯ ದಾಖಲಾತಿಗಳನ್ನು ಮುಖ್ಯಾಧಿಕಾರಿ ಮಂಜುನಾಥ್ ತಾವಿರುವ ಹುಳಿಯಾರು ಪಂಚಾಯಿತಿಗೆ ಕರೆಸಿಕೊಂಡಿದ್ದಲ್ಲದೆ ಅಧಿಕಾರಿ ವರ್ಗವನ್ನು ಕರೆಸಿಕೊಂಡಿರುವುದರ ಹಾಸ್ಯಾಸ್ಪದವಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಪ್ರತಿಭಟಿಸಿದರು.

ಪಟ್ಟಣ ಪಂಚಾಯತಿ ಸದಸ್ಯರು ತಹಸೀಲ್ದಾರ್‌ ಬಿ.ಆರತಿ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟಿಸಿದ ಅವರು ಗುಬ್ಬಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕರ್ತವ್ಯಕ್ಕೆ ಬಾರದೆ ಸಾರ್ವಜನಿಕರಿಗೆ ಯಾವುದೇ ರೀತಿಯ ಕೆಲಸ ಮಾಡುತ್ತಿಲ್ಲ, ಸಾರ್ವಜನಿಕರು ಪ್ರತಿನಿತ್ಯ ಬಂದು ಅಲೆಯುವಂಥ ಸ್ಥಿತಿ ನಿರ್ಮಾಣವಾಗಿದೆ, ಹುಳಿಯಾರು ಹಾಗೂ ಗುಬ್ಬಿಗೆ 3 ದಿನ ಕೆಲಸ ಮಾಡಬೇಕೆಂದು ಸರಕಾರ ಇವರನ್ನು ಆದೇಶಿಸಿದೆ, ಆದರೆ ಈ ಅಧಿಕಾರಿ ಗುಬ್ಬಿ ಯತ್ತ ತಲೆಯನ್ನೇ ಹಾಕುತ್ತಿಲ್ಲ, ಇದರಿಂದ ಪಟ್ಟಣ ಪಂಚಾಯಿತಿಯ ಈ ಖಾತಾ ನಕಲು, ಖಾತಾ ಬದಲಾವಣೆ, ಮತ್ತಿತರ ಸೇವೆಗಳನ್ನು ಸಕಾಲ ಸಾರ್ವಜನಿಕರಿಗೆ ಸರಿಯಾಗಿ ನೀಡುತ್ತಿಲ್ಲ, ಹೀಗಾಗಿ ಪ್ರತಿನಿತ್ಯ ಸಾರ್ವಜನಿಕರು ಪಟ್ಟಣ ಪಂಚಾಯಿತಿಗೆ ಆಗಮಿಸಿ ಅಧಿಕಾರಿ ಇಲ್ಲದೇ ಇರುವುದರಿಂದ ಬೇಸರದಿಂದ ನಡೆಯುತ್ತಿದ್ದಾರೆ.
ಈ ನಡುವೆ ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ಗಲಾಟೆ ನಡೆದಾಗ ಮುಖ್ಯಾಧಿಕಾರಿ ಮಂಜುನಾಥ್‌.ಎಲ್‌.ವಿ. ಗುಬ್ಬಿ ಪಟ್ಟಣ ಪಂಚಾಯಿತಿಯ ಕಡತಗಳನ್ನು ಕಚೇರಿಯ ವಾಹನದಲ್ಲಿ ಹುಳಿಯಾರು ಪಟ್ಟಣ ಪಂಚಾಯಿತಿಗೆ ತರಿಸಿಕೊಂಡು ಅಧಿಕಾರಿಗಳನ್ನು ಬರುವಂತೆ ಹೇಳಿದ್ದಾರೆ, ಇಲ್ಲಿನ ಅಧಿಕಾರಿಗಳಾದ ಮಹಮ್ಮದ್‌ ಹುಸೇನ್‌, ಶಾಂತಕುಮಾರ, ಅಂತರಾಜ್‌, ಹಾಗೂ ಜಯಣ್ಣ ಕಂದಾಯ ನಿರೀಕ್ಷಕರು ಕಡತಗಳನ್ನು ಹುಳಿಯಾರು ಪಟ್ಟಣ ಪಂಚಾಯ್ತಿಗೆ ತೆಗೆದುಕೊಂಡು ಹೋಗಿದ್ದಾರೆ, ಗುಬ್ಬಿ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಕಡತಗಳನ್ನು ಕೇಂದ್ರ ಸ್ಥಾನದಲ್ಲಿಲ್ಲದೆ ಹುಳಿಯಾರು ಪಟ್ಟಣ ಪಂಚಾಯಿತಿಗೆ ತೆಗೆದುಕೊಂಡು ಹೋಗುವುದು ಎಷ್ಟು ಸರಿ ಎಂಬುದನ್ನು ತಿಳಿಸಬೇಕು ಎಂದರು.
ಇಲ್ಲಿಗೆ ಬರದೇ ಹೋದರೆ ಇಲ್ಲಿರುವಂತಹ ಅಧಿಕಾರಿಗೆ ಪ್ರಭಾರ ವಹಿಸಿಕೊಡಲಿ, ಆಗಾದರೂ ಸಾರ್ವಜನಿಕರ ಕೆಲಸ ಮಾಡಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಮಾತನಾಡಿ, ತಹಸೀಲ್ದಾರ್‌, ಡೀಸಿ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕರಿಗೆ ಕೂಡ ವಿಷಯ ಮುಟ್ಟಿಸಿದ್ದು, ಇಂತಹ ಬೇಜವಾಬ್ದಾರಿತನದ ಕೆಲಸ ನಿರ್ವಹಣೆ ಮಾಡುತ್ತಿರುವ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಮೋಹನ್‌ ಮಾತನಾಡಿ, ಗುಬ್ಬಿ ಪಟ್ಟಣ ಪಂಚಾಯಿತಿಗೆ ಖಾಯಂ ಆಗಿ ಅಧಿಕಾರಿಗಳೇ ಸರಿಯಾಗಿ ಬರುತ್ತಿಲ್ಲ, 2 ವರ್ಷದ ಅವಧಿಯಲ್ಲಿ 4 ಮುಖ್ಯಾಧಿಕಾರಿಗಳು ಬದಲಾವಣೆಯಾದರೆ ಪಟ್ಟಣದ ಕೆಲಸ ಕಾರ್ಯ ಮಾಡುವುದಾದರೂ ಹೇಗೆ, ಈಗ ಬಂದಿರುವ ಅಧಿಕಾರಿ ನೋಡಿದರೆ ಇಲ್ಲಿನ ಎಲ್ಲಾ ದಾಖಲಾತಿಗಳನ್ನು ಅಧಿಕಾರಿಗಳನ್ನು ಹುಳಿಯಾರಿಗೆ ತೆಗೆದುಕೊಂಡು ಹೋಗುತ್ತಾರೆ ಎಂದರೆ ಇಲ್ಲಿಗೆ ಪಟ್ಟಣ ಪಂಚಾಯಿತಿ ಅವಶ್ಯಕತೆ ಇಲ್ಲ, ಕೂಡಲೇ ಈ ಅಧಿಕಾರಿಯ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಕುಮಾರ್‌ ಮಾತನಾಡಿ, ಈ ಅಧಿಕಾರಿಯ ಮೇಲೆ ತಹಶೀಲ್ದಾರ್‌, ಜಿಲ್ಲಾಧಿಕಾರಿ ಹಾಗೂ ಪಿಡಿ ಅವರಿಗೂ ಮಾಹಿತಿ ನೀಡಲಾಗಿದೆ, ಕೂಡಲೇ ಇವರನ್ನು ಬದಲಾವಣೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಮಹಾಲಕ್ಷ್ಮಿ ಲೋಕೇಶ್‌ ಬಾಬು, ಸದಸ್ಯರಾದ ಶಿವಕುಮಾರ್‌, ಮಹಮದ್‌ ಸಾದಿಕ್‌, ಶೌಕತ್‌ಅಲಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!