ಸ್ವಚ್ಛತೆಗೆ ಆದ್ಯತೆ ನೀಡಿ ಆರೋಗ್ಯ ಕಾಪಾಡಿಕೊಳ್ಳಿ

ತುಮಕೂರು ನಾಗರಿಕರಿಗೆ ನಗರ ಶಾಸಕ ಜ್ಯೋತಿಗಣೇಶ್‌ ಮನವಿ

185

Get real time updates directly on you device, subscribe now.

ತುಮಕೂರು: ನಗರದ ಪ್ರತಿಯೊಬ್ಬ ನಾಗರಿಕರು ಎಚ್ಚೆತ್ತುಕೊಂಡು ಸ್ವಚ್ಛತೆ ಕಾಪಾಡಲು ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ಜ್ಯೋತಿಗಣೇಶ್‌ ಕರೆ ನೀಡಿದರು.

ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣ- 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆ ಕಸ ವಿಂಗಡಣೆ ಮಾಡುವುದು ಬಹಳ ಮುಖ್ಯವಾಗಿದೆ, ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಎಲ್ಲರೂ ಆದ್ಯತೆ ನೀಡಬೇಕು ಎಂದರು.
ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ದೇಶವನ್ನು ಕಸ ಮುಕ್ತವಾಗಿಸಲು ಸ್ವಚ್ಚತೆಗೆ ಹೆಚ್ಚಿನ ವಿಶೇಷ ಆದ್ಯತೆ ನೀಡಿದ್ದಾರೆ. ಮೋದಿಯವರ ಸ್ವಚ್ಛ ಭಾರತ್‌ ಕಾರ್ಯಕ್ರಮ ಇಡೀ ವಿಶ್ವಕ್ಕೆ ಬಹುದೊಡ್ಡ ಕಾರ್ಯಕ್ರಮವಾಗಿದೆ ಎಂದರು.
ನಮ್ಮ ಮನೆಗಳಿಂದ ಆಚೆ ಹೋಗುವ ಕಸದ ಎಷ್ಟು ಎಂಬ ಕುರಿತು ಸರ್ವೆ ಮಾಡುವುದು ಕೇವಲ ಸರ್ಕಾರದ ಕೆಲಸವಲ್ಲ, ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ಕಸ ವಿಲೇವಾರಿ ವೈಜ್ಞಾನಿಕವಾಗಿ ಆಗಬೇಕಾಗಿದೆ, ಹಾಗಾಗಿ ಪ್ರತಿಯೊಬ್ಬರೂ ಮನೆಗಳಲ್ಲೇ ಕಸ ವಿಂಗಡಣೆ ಮಾಡುವುದು ಬಹಳ ಮುಖ್ಯ ಎಂದರು.
ಎನ್‌ಜಿಓ ಮತ್ತು ನಾಗರಿಕ ಸಮಿತಿಗಳ ವತಿಯಿಂದ ಸ್ವಚ್ಛ ಸರ್ವೇಕ್ಷಣೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ರ್ಯಾಂಕಿಂಗ್‌ ಪಡೆದುಕೊಂಡಿದೆ, ಆದರೆ ಈ ರ್ಯಾಂಕಿಂಗ್‌ ಬಂದಿರುವುದು ನಾವು ಸ್ವಚ್ಛವಾಗಿದ್ದೇವೆ ಎಂದಲ್ಲ, ಬೇರೆ ನಗರಗಳಿಗಿಂತ ತುಮಕೂರು ಕಡಿಮೆ ಕೊಳಕು ಹೊಂದಿದೆ ಎಂದಷ್ಟೆ, ಅದನ್ನು ಬಿಟ್ಟು ನಾವು ಸಂಪೂರ್ಣವಾಗಿ ಸ್ವಚ್ಛವಾಗಿದ್ದೇವೆ ಎಂದುಕೊಳ್ಳುವುದು ಸರಿಯಲ್ಲ, ಮತ್ತಷ್ಟು ಸ್ವಚ್ಛತೆಗೆ ಆದ್ಯತೆ ನೀಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ನಗರದಲ್ಲಿ ಸ್ಮಾರ್ಟ್‌ಸಿಟಿಯವರು ಸಹ ಸ್ವಚ್ಛತೆಗಾಗಿ ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ಒತ್ತು ಕೊಟ್ಟಿದ್ದಾರೆ, ಅಜ್ಜಗೊಂಡನಹಳ್ಳಿಯ 42 ಎಕರೆ ಜಾಗದಲ್ಲಿ ಕಸ ತುಂಬಿಕೊಂಡಿದ್ದು, ಈಗ 5 ಎಕರೆ ಜಾಗವೂ ಕಣ್ಣಿಗೆ ಕಾಣುತ್ತಿಲ್ಲ, ಇಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿಯಾಗಬೇಕಾಗಿದೆ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಲ್ಲಿನ ಜನ ಕಸದ ವಾಹನಗಳಿಗೆ ಜಾಗ ಬಿಡದೆ ಅಡ್ಡಿಪಡಿಸುವ ಸಾಧ್ಯತೆಗಳಿವೆ, ಇದನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರೂ ಕಸ ವಿಂಗಡಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಮನೆಯಲ್ಲಿ ಕಸವನ್ನು ಕವರ್‌ಗೆ ಕಟ್ಚಿ ಹಾಕುವುದನ್ನು ಕಡಿಮೆ ಮಾಡದಿದ್ದರೆ ಸ್ವಚ್ಛತೆ ಕಾಪಾಡುವುದು ತುಂಬಾ ಕಷ್ಟವಾಗಲಿದೆ. ಪ್ರತಿಯೊಬ್ಬ ನಾಗರಿಕರು ಎಚ್ಚೆತ್ತುಕೊಂಡು ಸ್ವಚ್ಛತೆಗೆ ಒತ್ತು ನೀಡಬೇಕು, ಜೊತೆಗೆ ಕಸ ವಿಂಗಡಣೆ ಬಹಳ ಮುಖ್ಯವಾಗಿದೆ ಎಂದರು.
ಮೇಯರ್‌ ಬಿ.ಜಿ.ಕೃಷ್ಣಪ್ಪ ಮಾತನಾಡಿ, ನಗರದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ, ಹಾಗೆಯೇ ನಗರದ ಎಲ್ಲಾ ಬಡಾವಣೆಗಳ ನಾಗರಿಕ ಸಮಿತಿಗಳು ಪಾಲಿಕೆ ಜತೆ ಕೈಜೋಡಿಸಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಸ್ವಚ್ಛತೆ ಕಾಪಾಡಬೇಕು, ಪರಿಸರ, ನಮ್ಮ ಮನೆಗಳ ಸುತ್ತಮುತ್ತ ಪರಿಸರ ಕಾಪಾಡದಿದ್ದರೆ ಅನೇಕ ಸಮಸ್ಯೆ ಹುಟ್ಟಿಕೊಳ್ಳುತ್ತವೆ, ಹಾಗಾಗಿ ಸ್ವಚ್ಛತೆ ನಮ್ಮೆಲ್ಲರ ಬದುಕಿನ ಅವಿಭಾಜ್ಯವಾಗಬೇಕು ಎಂದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿವೆ, ನಗರದ ಅಭಿವೃದ್ಧಿಗಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ 900 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್‌ಗಳ ಅಭಿವೃದ್ಧಿ, ಕುಡಿಯುವ ನೀರು, ಕೆರೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಸಾಗಿವೆ, ತುಮಕೂರಿಗೆ ಸ್ಮಾರ್ಟ್‌ಸಿಟಿ ಯೋಜನೆ ನೀಡಿದ ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು ಎಂದರು.
ತುಮಕೂರು ನಗರ ಸ್ವಚ್ಛತೆಯಲ್ಲಿ ರ್ಯಾಂಕಿಂಗ್‌ ಪಡೆದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ದೆಹಲಿಯಲ್ಲಿ ಅವಾರ್ಡ್‌ ತೆಗೆದುಕೊಂಡು ಬಂದಿದ್ದಾರೆ, ಇದು ಸಂತಸದ ಸಂಗತಿ, ಈ ಅವಾರ್ಡ್‌ ಬರಲು ಪೌರ ಕಾರ್ಮಿಕರ ಪಾತ್ರ ಬಹಳ ಪ್ರಮುಖವಾಗಿದೆ, ಹಾಗಾಗಿ ಪೌರ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ನಯಾಜ್‌ ಅಹಮದ್‌, ಮಲ್ಲಿಕಾರ್ಜುನ್‌, ಧರಣೇಂದ್ರಕುಮಾರ್, ಸಿ.ಎನ್‌.ರಮೇಶ್‌, ತ್ಯಾಗರಾಜ್‌, ಆಯುಕ್ತೆ ರೇಣುಕಾ ಹಾಗೂ ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!