ತುಮಕೂರು: ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಹಿಂದುಳಿದ ವರ್ಗಗಳ ಯುವ ನಾಯಕ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಈಗಾಗಲೇ ಗ್ರಾಮ ಮಟ್ಟದಲ್ಲಿ ಸಂಘಟನೆಗೆ ತೊಡಗಿರುವುದು ಕಾಂಗ್ರೆಸ್ ನೆಲೆಯೂರುವ ಎಲ್ಲಾ ಲಕ್ಷಣ ಗೋಚರಿಸುತ್ತಿವೆ!
ಚಿಕ್ಕನಾಯಕನಹಳ್ಳಿ ಮುಖಂಡ ಸಾಸಲು ಸತೀಶ್ ಶಿರಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾಗಿದೆ, ಸಕ್ರಿಯವಾಗಿ ಕ್ಷೇತ್ರ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ, ಒಂದಷ್ಟು ಕಾರ್ಯಕರ್ತರನ್ನೂ ತನ್ನೆಡೆಗೆ ಸೆಳೆದು ಈ ಪರಿ ಹೋರಾಟ ಮಾಡುತ್ತಿದ್ದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಲಿ, ಮಾಜಿ ಸಿಎಂ ಸಿದ್ಧರಾಮಯ್ಯ ಅವರಾಗಲಿ ಏನು ಹೇಳದೆ ಏಕೆ ಸುಮ್ಮನಿದ್ದಾರೆ ಎಂಬ ಪ್ರಶ್ನೆ ಎದುರಾಗುವುದಂತು ಸತ್ಯ.
ಹಿಂದುಳಿದ ಸಮುದಾಯದ ಕಿರಿಯ ನಾಯಕ ಸಾಸಲು ಸತೀಶ್ 2023ರ ವಿಧಾನಸಭಾ ಚುನಾವಣೆಗೆ ಸಾಕಷ್ಟು ಮುಂಚಿತವಾಗಿ ಶಿರಾದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಜ್ಜಾಗುತ್ತಿರುವುದು ಗೊತ್ತಿರುವ ವಿಚಾರ, ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಮಾಜಿ ಸಚಿವ ಟಿ.ಬಿ.ಜಯಚಂದ್ರಗೆ ಸಾಸಲು ನಡೆ ಕೊಂಚ ಆತಂಕ ಮೂಡಿಸಿದೆ.
ಗೊಲ್ಲ ಸಮುದಾಯದ ಆರಾಧ್ಯ ದೈವ ಜುಂಜಪ್ಪನ ಆಶೀರ್ವಾದದೊಂದಿಗೆ ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳ ಆರಾಧನಾ ಸ್ಥಳವಾದ ಗಂಡಿಹಳ್ಳಿ ಮಠದ ಆಶೀರ್ವಾದ ಪಡೆದು ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಆದರೆ ಉಪ ಚುನಾವಣೆಯಲ್ಲಿ ಜಯಚಂದ್ರ ಸೋಲನುಭವಿಸಿರುವ ಹಿನ್ನೆಲೆಯಲ್ಲಿ 2023ರ ವಿಧಾನಸಭೆ ಚುನಾವಣೆಗೆ ಮತ್ತೆ ಟಿಕೆಟ್ ನೀಡುವುದು ಅನುಮಾನ ಎಂದು ತಿಳಿದ ಸಾಸಲು ಸತೀಶ್ ಜಯಚಂದ್ರ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಜೊತೆಗೆ ಸಿದ್ದರಾಮಯ್ಯ ಅವರ ಬೆಂಬಲ ಕೂಡ ತಮಗೆ ದೊರೆತಿದೆ ಎಂದು ಸತೀಶ್ ಹೇಳಿಕೊಂಡಿದ್ದಾರೆ. 2023ರ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಲವಾರು ಅವಧಿಗಳಿಂದ ತಮ್ಮ ಪ್ರತಿನಿಧಿಗಳ ಹಿಡಿತದಲ್ಲಿರುವ ಶಿರಾ ಸ್ಥಾನವನ್ನು ಬೇರೆ ಯಾವುದೇ ಸಮುದಾಯದವರು ಗೆಲ್ಲುವುದು ಕಷ್ಟ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು, ವಿಶೇಷವಾಗಿ ಕುಂಚಿಟಿಗ ಸಮುದಾಯದವರು ಹೇಳುತ್ತಿರುವುದರ ಮಧ್ಯೆ ಸತೀಶ್ ಎಂಟ್ರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಎಲ್ಲರ ವಿಶ್ವಾಸ ಪಡೆಯುವೆ
ನಾನು ಏಕಾಏಕಿ ಕ್ಷೇತ್ರಕ್ಕೆ ಬಂದು ಸಂಘಟನೆ ಮಾಡುತ್ತಿಲ್ಲ, ಹಲವಾರು ಕಾರ್ಯಕರ್ತರು, ಸಮುದಾಯದ ಮುಖಂಡರು ನನ್ನ ಬೆಂಬಲಕ್ಕೆ ನಿಂತಿದ್ದಾರೆ, ಅಷ್ಟೇ ಅಲ್ಲ, ಇಲ್ಲಿ ಸಂಘಟನೆ ಮಾಡುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಅವರೇ ಹೇಳಿದ್ದಾರೆ, ನಾನು ತಪ್ಪು ಹಾದಿಯಲ್ಲಿ ಸಾಗುತ್ತಿದ್ದರೆ ಈ ವೇಳೆಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಪ್ರಚಾರ ಕಾರ್ಯ ನಿಲ್ಲಿಸುವಂತೆ ಹೇಳುತ್ತಿದ್ದರು, ಮಾಜಿ ಸಿಎಂ ಸಿದ್ದರಾಮಯ್ಯ ಅವರಾದರೂ ತಡೆಯುತ್ತಿದ್ದರು, ಇಲ್ಲಿನ ಬೆಳವಣಿಗೆ ಮತ್ತು ರಾಷ್ಟ್ರ ನಾಯಕರ ಅನುಮತಿ ಮೇರೆಗೆ ನಾನಿಲ್ಲಿ ಸಂಘಟನೆ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಟಿ.ಬಿ.ಜಯಚಂದ್ರ ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುತ್ತೇನೆ, ನನ್ನ ಈ ಸಂಘಟನೆ ಮತ್ತು ಸ್ಪರ್ಧೆಗೆ ಸಹಕಾರ ನೀಡಿ.
ಸಾಸಲು ಸತೀಶ್
ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ
Comments are closed.