ಕೊರಟಗೆರೆ: ನೂರಕ್ಕೂ ಅಧಿಕ ಕುಟುಂಬ ವಾಸವಿರುವ ಭೈರೇನಹಳ್ಳಿ ದಲಿತರಿಗೆ ಶವ ಸಂಸ್ಕಾರಕ್ಕೆ ಜಾಗವಿಲ್ಲದೇ ಕೆರೆ-ಕಟ್ಟೆ, ರಸ್ತೆ ಬದಿ, ಸರಕಾರಿ ಹಳ್ಳದಲ್ಲಿ ಶವಸಂಸ್ಕಾರ ಮಾಡಬೇಕಿದೆ ಎಂದು ಆರೋಪಿಸಿ ತಡರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದ ಪರಿಶಿಷ್ಟ ಜಾತಿಯ ಸಮುದಾಯದ ಹನುಮಂತರಾಯಪ್ಪ ಶವವನ್ನು ರಸ್ತೆಯಲ್ಲಿಟ್ಟು ಸ್ಮಶಾನಕ್ಕಾಗಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಭೈರೇನಹಳ್ಳಿ ಗ್ರಾಮದ ಲೇ.ತಿಮ್ಮಯ್ಯನ ಮಗನಾದ ಹನುಮಂತರಾಯಪ್ಪ (55) ಅನಾರೋಗ್ಯ ಹಿನ್ನಲೆ ಬುಧವಾರ ತಡರಾತ್ರಿ ಮೃತಪಟ್ಟಿದ್ದಾನೆ. ಮೃತಪಟ್ಟ ದಲಿತ ವ್ಯಕ್ತಿಗೆ ಶವ ಸಂಸ್ಕಾರ ನಡೆಸಲು ಸ್ಮಶಾನವೇ ಇಲ್ಲದಿರುವ ಪರಿಣಾಮ ಬುಧವಾರ ರಾತ್ರಿಯಿಂದ ರಸ್ತೆಯಲ್ಲಿಯೇ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೈರೇನಹಳ್ಳಿ-ಮಧುಗಿರಿ ಸಂಪರ್ಕದ ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿ ಈಗಾಗಲೇ ನೂರಾರು ದಲಿತ ಸಮುದಾಯದ ಜನರ ಶವ ಸಂಸ್ಕಾರ ನಡೆಸಲಾಗಿದೆ. ಈಗ ಅಲ್ಲಿ ಗುಂಡಿತೋಡಿದರೇ ಶವಗಳ ಅಸ್ತಿ ಸಿಗುತ್ತವೆ. ಕೊರಟಗೆರೆ ತಹಶೀಲ್ದಾರ್, ಶಾಸಕರು ಮತ್ತು ಅಧಿಕಾರಿಗಳಿಗೆ 50ಕ್ಕೂ ಅಧಿಕ ಅರ್ಜಿಗಳು ನೀಡಿದ್ದರೂ ಪ್ರಯೋಜನ ಆಗಿಲ್ಲ ಎಂದು ಭೈರೇನಹಳ್ಳಿಯ ದಲಿತ ಮುಖಂಡರು ಆರೋಪ ಮಾಡಿದ್ದಾರೆ.
ಕೊರಟಗೆರೆ ತಹಶೀಲ್ದಾರ್ ನಾಹೀದಾ ಭೈರೇನಹಳ್ಳಿಯ ದಲಿತ ಕುಟುಂಬಗಳ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. ಆದರೇ ಇನ್ನೂಳಿದ 55 ಗ್ರಾಮಗಳಲ್ಲಿ ಇದೇ ರೀತಿಯ ಸ್ಮಶಾನದ ಸಮಸ್ಯೆಗಳಿದ್ದು ತಕ್ಷಣ ಕಾರ್ಯಪ್ರವೃತ್ತರಾಗಿ ದಲಿತ ಕುಟುಂಬಗಳಿಗೆ ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೆ ಜಾಗವನ್ನು ಹಸ್ತಾಂತರ ಮಾಡಿ ಸ್ಮಶಾನದ ಜಾಗವನ್ನುಅಭಿವೃದ್ದಿ ಪಡಿಸಬೇಕಿದೆ ಎಂದು ದಲಿತ ಮುಖಂಡರು ಆಗ್ರಹ ಮಾಡಿದ್ದಾರೆ.
ಕಳೆದ 40ವರ್ಷದಿಂದ ಕೆರೆ-ಕಟ್ಟೆ ಮತ್ತು ರಸ್ತೆ ಬದಿಯ ಚರಂಡಿಯೇ ಭೈರೇನಹಳ್ಳಿ ದಲಿತರಿಗೆ ಶವಸಂಸ್ಕಾರದ ಸ್ಥಳವಾಗಿದೆ. ಭೈರೇನಹಳ್ಳಿಯ 100ಕ್ಕೂ ಅಧಿಕ ದಲಿತ ಕುಟುಂಬಗಳಿಗೆ ಸ್ಮಶಾನವೇ ಮರೀಚಿಕೆ ಆಗಿದೆ. ಬಲಿಷ್ಠರಿಗೆ ಕ್ಷಣಾರ್ಧದಲ್ಲಿ ಕೆಲಸ ಆಗುತ್ತಿವೆ ಆದರೇ ದಲಿತರಿಗೆ ಸತ್ತ ಮೇಲೆ ಶವ ಸಂಸ್ಕಾರಕ್ಕೂ ಅಡ್ಡಿ! ನಮ್ಮ ನೋವು ಯಾರಿಗೇ ಹೇಳಬೇಕು ಎಂಬುದೇ ಯಕ್ಷ ಪ್ರಶ್ನೆ.
ಲಕ್ಷ್ಮೀಕಾಂತ್, ಸ್ಥಳೀಯ ಮುಖಂಡ, ಭೈರೇನಹಳ್ಳಿ
ಭೈರೇನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಕುಟುಂಬಕ್ಕೆ ಸರ್ವೇ ನಂ.261ರಲ್ಲಿ 20 ಗುಂಟೆ ಜಮೀನು ಸ್ಮಶಾನಕ್ಕಾಗಿ ಗುರುತಿಸಿ ಗ್ರಾಪಂಗೆ ಹಸ್ತಾಂತರ ಮಾಡಲಾಗಿದೆ. ಸ್ಮಶಾನ ಅಭಿವೃದ್ದಿಗಾಗಿ ಈಗಾಗಲೇ ಅರಸಾಪುರ ಗ್ರಾಪಂಗೆ ಸೂಚಿಸಿದ್ದೇನೆ. ಕೊರಟಗೆರೆಯಲ್ಲಿ ಒಟ್ಟಾರೇ ಈಗಾಗಲೇ 55 ಕಡೆ ಸ್ಮಶಾನಕ್ಕೆ ಜಮೀನು ಗುರುತಿಸಿ 43 ಸ್ಮಶಾನದ ಸ್ಥಳವನ್ನು ಹಸ್ತಾಂತರ ಮಾಡಲಾಗಿದೆ
ನಾಹೀದಾ, ತಹಶೀಲ್ದಾರ್. ಕೊರಟಗೆರೆ
Comments are closed.