ನ್ಯಾಯಾಧೀಶರನ್ನು ಸೇವೆಯಿಂದ ವಜಾ ಮಾಡಿ

322

Get real time updates directly on you device, subscribe now.

ತುಮಕೂರು: ಜನವರಿ 26ರ ಗಣರಾಜೋತ್ಸವ ದಿನದಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಭಾವಚಿತ್ರ ತೆಗೆಸಿ ಅವಮಾನ ಮಾಡಿದ ರಾಯುಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಮಾದಿಗ ದಂಡೋರ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಾದಿಗ ದಂಡೋರ ರಾಜ್ಯ ವಕ್ತಾರ ಎಂ.ವಿ.ರಾಘವೇಂದ್ರಸ್ವಾಮಿ ನೇತೃತ್ವದಲ್ಲಿ ನೂರಾರು ಜನರು ಟೌನ್‌ಹಾಲ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾದಿಗ ದಂಡೋರ ರಾಜ್ಯ ವಕ್ತಾರ ಎಂ.ವಿ.ರಾಘವೇಂದ್ರಸ್ವಾಮಿ, ಭಾರತದ ಸಂವಿಧಾನವನ್ನು ಓದಿ ನ್ಯಾಯಾಧೀಶರಾದ ವ್ಯಕ್ತಿಯೊಬ್ಬರು ಸಂವಿಧಾನವನ್ನು ದೇಶಕ್ಕೆ ನೀಡಿದ ವ್ಯಕ್ತಿಯ ಭಾವಚಿತ್ರ ತೆಗೆಸುವ ಮೂಲಕ ಮಾಡಿರುವ ಅಪಮಾನ ಖಂಡನೀಯ, ಸರಕಾರ ಘಟನೆ ನಡೆದು 10 ದಿನ ಕಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಹಾಗಾಗಿ ಕೂಡಲೇ ಸರಕಾರ ಅವರನ್ನು ಸೇವೆಯಿಂದ ವಜಾಗೊಳಿಸಿ, ಗಡಿಪಾರು ಮಾಡಬೇಕೆಂಬುದು ಮಾದಿಗ ದಂಡೋರದ ಒತ್ತಾಯವಾಗಿದೆ, ಸರಕಾರ ಒಂದು ವೇಳೆ ತಪ್ಪು ಮಾಡಿರುವ ನ್ಯಾಯಾಧೀಶರ ಪರ ಇದೇ ರೀತಿ ಮೃದು ಧೋರಣೆ ಮುಂದುವರೆಸಿದರೆ ರಾಜ್ಯದಾದ್ಯಂತೆ ಮಾದಿಗ ದಂಡೋರ ಉಗ್ರ ಹೋರಾಟ ನಡೆಸಲಿದೆ ಎಂದರು.
ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಡಿ.ಸಿ.ರಾಜಣ್ಣ ಮಾತನಾಡಿ, ನ್ಯಾಯಧೀಶರೊಬ್ಬರ ನಡವಳಿಕೆ ಅತ್ಯಂತ ಅಪಾಯಕಾರಿ ಸಂದೇಶವನ್ನು ರಾಜ್ಯದ ಜನರಿಗೆ ನೀಡಿದೆ, ಹಾಗಾಗಿ ಸರಕಾರ ಇವರನ್ನು ಸೇವೆಯಿಂದ ಅಮಾನತು ಪಡಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಹಿಸದಂತೆ ಎಚ್ಚರಿಕೆ ವಹಿಸಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಮಾದಿಗ ದಂಡೋರ ಮುಖಂಡರಾದ ಗೂಳರಿವೆ ನಾಗರಾಜು, ಡಾ.ಸಿದ್ದಾಪುರ ರಂಗಶಾಮಣ್ಣ, ಶಿವಕುಮಾರ್‌ ಟಿ.ಎಸ್‌., ಕೆ.ಎಂ.ರಂಗನಾಥಪ್ಪ, ಮಾದಿಗ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೋಡಿಯಾಲ ಮಹದೇವ್‌, ಕಾಡುಗೊಲ್ಲರ ಯುವ ಬ್ರಿಗೇಡ್‌ ಅಧ್ಯಕ್ಷ ವಿ.ಟಿ.ನಾಗರಾಜು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!