ಡೀಸಿ ಭೇಟಿಯಾದ ರೈತ- ಖಾತೆಗೆ ಬಂತು ಪರಿಹಾರ ಹಣ

1,070

Get real time updates directly on you device, subscribe now.

ಕುಣಿಗಲ್‌: ನಾಲ್ಕು ವರ್ಷಗಳಿಂದ ಬೆಳೆ ಪರಿಹಾರ ಪಡೆಯಲು ಪರದಾಡುತ್ತಿದ್ದ ರೈತನಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಒಂದು ಗಂಟೆಯೊಳಗೆ ಪರಿಹಾರ ಧನ ಆತನ ಖಾತೆಗೆ ಜಮೆಯಾದ ಘಟನೆ ನಡೆದಿದ್ದು, ರೈತ ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾನೆ.

ತಾಲೂಕಿನ ಕೊತ್ತಗೆರೆ ಹೋಬಳಿಯ ಮಾವಿನಕಟ್ಟೆಪಾಳ್ಯ ಗ್ರಾಮದ ರೈತ ಅಶ್ವಥಗೌಡ, 2017ರಲ್ಲಿ ಮೂರು ಎಕರೆ ಪ್ರದೇಶದಲ್ಲಿ ಹುರುಳಿಬೆಳೆ ಇಟ್ಟಿದ್ದು, ಬೆಳೆ ಹಾನಿಯಾದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ 19 ಸಾವಿರಕ್ಕೆ ವಿಮೆ ಮಾಡಿಸಿ 288 ರೂ. ವಿಮೆ ಪಾವತಿ ಮಾಡಿದ್ದರು, ಬರ ಬಂದ ಕಾರಣ ಬೆಳೆ ಕೈಕಚ್ಚದೆ ತೀವ್ರ ನಷ್ಟ ಅನುಭವಿಸಿದ ಪರಿಣಾಮ, ಬೆಳೆ ವಿಮೆಗೆ ಕೃಷಿ ಸಹಾಯಕ ನಿರ್ದೇಶಕರ ಕಚೇರಿಗೆ ಮನವಿ ಸಲ್ಲಿಸಿದ್ದರು, ತಾಂತ್ರಿಕ ಕಾರಣದಿಂದ ಬೆಳೆವಿಮೆ ಪರಿಹಾರದ ಮೊತ್ತ ಬಿಡುಗಡೆಯಾಗದೆ ಪರದಾಡುವಂತಾಯಿತು. 2018 ರಿಂದಲೂ ಕೃಷಿ ಸಹಾಯಕ ನಿರ್ದೇಶಕರ ಕಚೇರಿಗೆ ಅಲೆದು ಅಲೆದು ಸಿಬ್ಬಂದಿ ಉತ್ತರದಿಂದ ಬಸವಳಿದರು, ಕೊನೆಗೆ ಸಹಾಯಕ ಕೃಷಿ ನಿರ್ದೇಶಕರನ್ನೆ ಸಂಪರ್ಕಿಸಿ ತೀವ್ರ ಒತ್ತಡ ಹೇರಿದ್ದರ ಪರಿಣಾಮ, ಜಿಲ್ಲಾ ಮಟ್ಟದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ವಿಚಾರಿಸುವಂತೆ ಸೂಚಿಸಿ ಪತ್ರನೀಡಿದ್ದರು. ಗುರುವಾರ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಕೊತ್ತಗೆರೆ ನಾಡ ಕಚೇರಿಯಲ್ಲಿ ಇರುವ ಮಾಹಿತಿ ತಿಳಿದ ರೈತ ಹನ್ನೆರಡು ಗಂಟೆ ವೇಳೆಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ತನ್ನ ಸಮಸ್ಯೆ ತೋಡಿಕೊಂಡರು. ರೈತನ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಒಂದು ಗಂಟೆಯೊಳಗೆ ರೈತನ ಬ್ಯಾಂಕ್ ಖಾತೆಗೆ 12,607 ರೂ. ಬೆಳೆವಿಮೆ ಪರಿಹಾರದ ಮೊತ್ತ ಜಮೆಯಾಗಿರುವ ಸಂದೇಶ ಬಂದಿತು. ಕಳೆದ ನಾಲ್ಕು ವರ್ಷಗಳಿಂದ ಕೃಷಿ ಇಲಾಖೆ ಕಚೇರಿಗೆ ಅಲೆ ಅಲೆದು ಬಸವಳಿದಿದ್ದ ರೈತನ ಸಮಸ್ಯೆ ಜಿಲ್ಲಾಧಿಕಾರಿ ಭೇಟಿ ಮಾಡಿದ ಒಂದು ಗಂಟೆಯೊಳಗೆ ಬಗೆಹರಿದಿದ್ದಕ್ಕೆ ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾನೆ.

Get real time updates directly on you device, subscribe now.

Comments are closed.

error: Content is protected !!