ಡಾ.ಕುಮಾರ ನಾಯ್ಕ್ ಸಮಿತಿ ವರದಿ ಮಾರಕ!

ಸರ್ಕಾರ ಅತಿಥಿ ಉಪನ್ಯಾಸಕರ ಶೋಷಣೆ ನಿಲ್ಲಿಸಲಿ: ವರಲಕ್ಷ್ಮಿ

122

Get real time updates directly on you device, subscribe now.

ತುಮಕೂರು: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಆನ್‌ಲೈನ್‌ ಅಪ್ಲಿಕೇಷನ್‌ ಐಡಿ ಮೂಲಕ ಆಯ್ಕೆಯಾಗಿರುವ 14106 ಜನ ಅತಿಥಿ ಉಪನ್ಯಾಸಕರ ಜೊತೆಗೆ ಸರಕಾರ ಸುತ್ತೋಲೆ ಮೂಲಕ ಆಯ್ಕೆಯಾಗಿರುವ 3000 ಜನರನ್ನು ಸೇವೆಯಲ್ಲಿ ಮುಂದುವರೆಸಬೇಕೆಂಬ ಅತಿಥಿ ಉಪನ್ಯಾಸಕ ಬೇಡಿಕೆಗೆ ಸರಕಾರ ಸ್ಪಂದಿಸದಿದ್ದಲ್ಲಿ ಫೆ.14 ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಅನಿರ್ಧಿಷ್ಠಾವಧಿ ಧರಣಿ ಕೈಗೊಳ್ಳಲಾಗುವುದು ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರ ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ಮಣಿದು ರಚಿಸಿದ ಡಾ.ಕುಮಾರ ನಾಯ್ಕ್ ಸಮಿತಿಯಲ್ಲಿ ಯಾವುದೇ ಶಿಕ್ಷಣ ತಜ್ಞರಾಗಲಿ, ಪ್ಲಾನಿಂಗ್‌ ಕಮಿಟಿಯ ಸದಸ್ಯರಾಗಲಿ ಇಲ್ಲ, ಅತಿಥಿ ಉಪನ್ಯಾಸಕರನ್ನು ಶೋಷಣೆ ಮಾಡುವ ಆಡಳಿತ ಮಂಡಳಿಯ ಸದಸ್ಯರನ್ನೇ ಮುಂದಿಟ್ಟುಕೊಂಡು ರಚಿಸಿರುವ ವರದಿ, ಉಪನ್ಯಾಸಕರಿಗೆ ಪೂರಕವಾಗುವ ಬದಲು ಮಾರಕವಾಗಿದೆ, ಹಾಗಾಗಿ ಸದರಿ ವರದಿಯಲ್ಲಿ ಹಲವಾರು ಮಾರ್ಪಾಡುಗಳನ್ನು ತರುವ ಮೂಲಕ ಹಾಲಿ ಗೆಸ್ಟ್ ಲೆಚ್ಚರರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ಕೆಲಸ ದೊರೆಯುವಂತೆ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಸರಕಾರ ಅತಿಥಿ ಉಪನ್ಯಾಸಕರ ವೇತನವನ್ನು ಮೂರು ಪಟ್ಟು ಹೆಚ್ಚಳ ಮಾಡಿದೆ ಎಂಬ ಹೇಳಿಕೆ ಶುದ್ಧ ಸುಳ್ಳು, ಈ ಮೊದಲು ಓರ್ವ ಅತಿಥಿ ಉಪನ್ಯಾಸಕ ಒಂದು ಗಂಟೆ ಕೆಲಸ ಮಾಡಿದರೆ 406 ನೀಡಲಾಗುತಿದ್ದು, ವರ್ಕ್‌ ಲೋಡ್‌ ಹೆಚ್ಚಿಸುವ ಮೂಲಕ ಈಗ ಅದನ್ನು 533 ರೂ. ಗಳಿಗೆ ಹೆಚ್ಚಿಸಲಾಗಿದೆ, ಯುಜಿಸಿ, ನಾನ್‌ ಯುಜಿಸಿ ಹೀಗೆ ಹಲವು ಕ್ಯಾಟಗರಿಗಳಲ್ಲಿಯೂ ಕೇವಲ 123 ರೂ. ಗಳನ್ನು ಮಾತ್ರ ಹೆಚ್ಚಳ ಮಾಡಲಾಗಿದೆ, ಇಬ್ಬರನ್ನು ಮನೆಗೆ ಕಳುಹಿಸಿ ಅವರ ವೇತನವನ್ನು ಒಬ್ಬರಿಗೆ ನೀಡುವ ಮೂಲಕ ವಿದ್ಯಾವಂತರು ಕೆಲಸವಿಲ್ಲದ ನಿರುದ್ಯೋಗಿಗಳಾಗುವಂತಹ ಪರಿಸ್ಥಿತಿಗೆ ಸರಕಾರ ದೂಡಿದೆ ಎಂದು ವರಲಕ್ಷ್ಮಿ ದೂರಿದರು.
ಸರಕಾರ ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸುವುದಿರಲಿ, ಅವರಿಗೆ ಸೇವಾ ಭದ್ರತೆ ನೀಡಿಲ್ಲ, ನೆರೆಯ ಆಂಧ್ರ, ತೆಲಂಗಾಣ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಒಮ್ಮೆ ಒಂದು ಹುದ್ದೆಗೆ ಅತಿಥಿ ಉಪನ್ಯಾಸಕ ನೇಮಕಗೊಂಡರೆ ಆ ಹುದ್ದೆಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡದಂತಹ ಕಾನೂನು ತಂದಿದೆ, ಕರ್ನಾಟಕದಲ್ಲಿಯೂ ಇದೇ ರೀತಿಯ ಕಾನೂನು ಬಂದರೆ ಸೇವಾ ಭದ್ರತೆ ದೊರೆಯಲಿದೆ ಎಂಬುದು ಸಿಐಟಿಯುನ ಒತ್ತಾಯವಾಗಿದೆ ಎಂದರು.
ಈ ಎಲ್ಲಾ ಅಂಶಗಳ ಬಗ್ಗೆ ಮುಖ್ಯಮಂತ್ರಿಗಳು, ಎಸಿಎಸ್‌ ಮನವಿ ಮಾಡಿದ್ದು, ಮುಖ್ಯಮಂತ್ರಿಗಳು ಅನ್ಯಾಯ ಸರಿಪಡಿಸುವ ಭರವಸೆ ನೀಡಿದ್ದಾರೆ, ಒಂದು ವೇಳೆ ಫೆಬ್ರವರಿ 14ರ ಒಳಗೆ ಬಗೆಹರಿಸದಿದ್ದಲ್ಲಿ ಅಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಈ ವೇಳೆ ಅತಿಥಿ ಉಪನ್ಯಾಸಕರ ಸಂಘದ ಜಿ.ಕೆ.ನಾಗಣ್ಣ, ಡಾ.ಸುನಿಲ್‌ಕುಮಾರ್‌, ಗಂಗಾಂಬಿಕೆ ಹಾಗೂ ಸಿಐಟಿಯುನ ಗುಲ್ಜಾರ್‌ಭಾನು ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!