ತುಮಕೂರು: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ನಿವೇಶನ ರಹಿತ ಬಡವರಿಗೆ ವಿವಿಧ ವಸತಿ ಯೋಜನೆಗಳಡಿ ನಿವೇಶನ ಒದಗಿಸದಿದ್ದಲ್ಲಿ ಅಂತಹ ಪಂಚಾಯತಿಗಳನ್ನು ಸೂಪರ್ ಸೀಡ್ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ, ಚಿತ್ರದುರ್ಗ ಸಂಸದ ಹಾಗೂ ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷ ಎ.ನಾರಾಯಣಸ್ವಾಮಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಸಂಬಂಧ ಜರುಗಿದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಧಾನ ಮಂತ್ರಿ ಆವಾಜ್ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ರಹಿತರ ಪಟ್ಟಿ ಮಾಡಿ ಅರ್ಹರಿಗೆ ಕೂಡಲೇ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಮಹಾನಗರಪಾಲಿಕೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ 5710 ಫಲಾನುಭವಿಗಳಿಂದ ಬೇಡಿಕೆಗಳಿದ್ದು, ಈ ಪೈಕಿ 4479 ಮನೆಗಳಿಗೆ ಅನುಮೋದನೆ ದೊರೆತಿದೆ, ಈ ಯೋಜನೆಯಡಿ ಅನುಮೋದನೆಗೊಂಡ ವಸತಿ ನಿರ್ಮಾಣ ಕಾಮಗಾರಿಗಳ ಪೈಕಿ 1544 ಮನೆಗಳು ಪೂರ್ಣಗೊಂಡಿವೆ. ಉಳಿದಂತೆ 485 ತಳಪಾಯ, 315 ಛಾವಣಿ, 476 ಮೇಲ್ಛಾವಣಿ ಹಂತದಲ್ಲಿದ್ದು, 1258 ಮನೆಗಳು ಈವರೆಗೂ ಪ್ರಾರಂಭಗೊಂಡಿಲ್ಲ. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ 2016 ರಿಂದ 2020ರವರೆಗೆ 8948 ಫಲಾನುಭವಿಗಳು ವಸತಿ ಸೌಲಭ್ಯಕ್ಕಾಗಿ ಆಯ್ಕೆಯಾಗಿದ್ದಾರೆ. ನಿಗಧಿತ ಗುರಿ 9550ರಲ್ಲಿ 5436 ವಸತಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿವೆ. ಉಳಿದಂತೆ 884 ತಳಪಾಯ, 293 ಲಿಂಟಲ್ ಮಟ್ಟ, 419 ಮೇಲ್ಛಾವಣಿ ಹಂತದಲ್ಲಿದ್ದು, 564 ನಿರ್ಮಾಣ ಕಾಮಗಾರಿ ಬಾಕಿ ಇರುತ್ತವೆ ಎಂದು ತಿಳಿಸಿದರು.
ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ವಿದ್ಯಾವಂತ ಯುವಕ ಯುವತಿಯರಿಗೆ ಒಲವು ಮೂಡಿಸುವುದರ ಜೊತೆಗೆ ಕೌಶಲ್ಯ ತರಬೇತಿ ನೀಡಿ ಸ್ವಯಂ ಉದ್ಯೋಗಿಗಳನ್ನಾಗಿಸಬೇಕು, ಈಗಾಗಲೇ ಕೃಷಿಯಲ್ಲಿ ಆಸಕ್ತಿ ಹೊಂದಿ ಸ್ವಯಂ ಉದ್ಯೋಗ ಮಾಡ ಬಯಸುವವರಿಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.
ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಯಲ್ಲಿ ತೆಂಗು ಬೆಳೆ ಆಯ್ಕೆಯಾಗಿದ್ದು, ತೆಂಗಿನ ಉತ್ಪನ್ನಗಳಿಗೆ ಸಂಬಂಧಿಸಿದ ಕಿರು ಉದ್ದಿಮೆಗಳನ್ನು ಕೈಗೊಳ್ಳಲು ಸಾಲ ಸೌಲಭ್ಯಕ್ಕಾಗಿ ಈವರೆಗೂ 36 ಅರ್ಜಿಗಳು ಸ್ವೀಕೃತವಾಗಿದ್ದು, 9 ಫಲಾನುಭವಿಗಳಿಗೆ ಬ್ಯಾಂಕಿನಿಂದ ಸಾಲ ಮಂಜೂರಾಗಿದೆ, ಉಳಿದ 6 ಅರ್ಜಿಗಳಿಗೆ ಸಾಲ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 4 ಅರ್ಜಿಗಳು ಬ್ಯಾಂಕ್‌ನಿಂದ ತಿರಸ್ಕೃತಗೊಂಡಿವೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 2021-22ನೇ ಸಾಲಿನಲ್ಲಿ 301694 ರೈತರ ಖಾತೆಗೆ 11842 ಲಕ್ಷ ರೂ.ಗಳನ್ನು ನೇರವಾಗಿ ವರ್ಗಾಯಿಸಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ರಾಜ ಸುಲೋಚನಾ ಸಭೆಗೆ ಮಾಹಿತಿ ನೀಡಿದರು.
ನಂತರ ಮಾತನಾಡಿದ ಸಚಿವರು, ಜಲ್ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಕೈಗೊಳ್ಳುವ ಮುನ್ನ ನೀರಿನ ಲಭ್ಯತೆ ಹಾಗೂ ಮೂಲ, ಕೊಳವೆ ಬಾವಿಗಳು ಇರುವ, ಇಲ್ಲದಿರುವ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ತುಮಕೂರು- ರಾಯದುರ್ಗ ಮಾರ್ಗದಲ್ಲಿ ಕೈಗೊಂಡಿರುವ ರೈಲ್ವೆ ಯೋಜನೆ ಸಾಕಾರಕ್ಕಾಗಿ ಶೇ.100ರಷ್ಟು ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಹೊಸದಾಗಿ ಹೆಚ್ಚುವರಿಯಾಗಿ ಬೇಡಿಕೆ ಇಟ್ಟಿರುವ 400 ಎಕರೆ ಜಮೀನಿನ ಭೂಸ್ವಾಧೀನಕ್ಕಾಗಿ ಅಗತ್ಯವಿರುವ 50 ಕೋಟಿ ರೂ.ಗಳ ಅನುದಾನವನ್ನು ಇನ್ನೊಂದು ತಿಂಗಳೊಳಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಹು ದಿನಗಳ ಕನಸಾದ ತುಮಕೂರು- ದಾವಣಗೆರೆ ರೈಲ್ವೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಯೋಜನೆಗೆ ಅಗತ್ಯವಿರುವ 50 ಕೋಟಿ ರೂ.ಗಳನ್ನು ಇನ್ನೊಂದು ವಾರದೊಳಗೆ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರೈಲ್ವೇ ಅಧಿಕಾರಿ ಜಗದೀಶ್ ಮಾತನಾಡಿ, 2016ರಲ್ಲಿ ಪ್ರಾರಂಭವಾಗಿರುವ ತುಮಕೂರುಅರಸೀಕೆರೆ ದ್ವಿಪಥ ರೈಲ್ವೆ ಯೋಜನೆಗಾಗಿ ತುಮಕೂರು, ಗುಬ್ಬಿ, ತುರುವೇಕೆರೆ, ತಿಪಟೂರು ಸೇರಿದಂತೆ 4 ತಾಲ್ಲೂಕುಗಳಲ್ಲಿ 29-11 ಎಕರೆ ವಿಸ್ತೀರ್ಣದಷ್ಟು ಜಮೀನನ್ನು ಹಸ್ತಾಂತರಿಸಲಾಗಿದ್ದು, ಭೂಸ್ವಾಧಿನ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ ಮಾತನಾಡಿ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 5711 ವೈಯಕ್ತಿಕ ಗೃಹ ಶೌಚಾಲಯ ನಿರ್ಮಿಸಲು ಗುರಿ ಹೊಂದಲಾಗಿತ್ತು. ಈ ಪೈಕಿ 4253 ವೈಯಕ್ತಿಕ ಗೃಹ ಶೌಚಾಲಯ ನಿರ್ಮಿಸಲಾಗಿದ್ದು 1428 ಶೌಚಾಲಯ ನಿರ್ಮಿಸಬೇಕಾಗಿದೆ. ಅಲ್ಲದೆ 241 ಅಂಗನವಾಡಿ ಶೌಚಾಲಯ ನಿರ್ಮಾಣ ಹಾಗೂ 337 ಅಂಗನವಾಡಿ ಶೌಚಾಲಯ ದುರಸ್ತಿ ಕಾಮಗಾರಿ, 49 ಶಾಲಾ ಶೌಚಾಲಯ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿವೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 3 ಹಾಗೂ ತುಮಕೂರು ತಾಲ್ಲೂಕಿನಲ್ಲಿ 4 ಸೇರಿದಂತೆ ಒಟ್ಟು 7 ಸಮುದಾಯ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದ್ದು, ಈ ಪೈಕಿ 4 ಶೌಚಾಲಯಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, 3 ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲೆಯ 330 ಗ್ರಾಮ ಪಂಚಾಯತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಮೊದಲ ಹಂತದಲ್ಲಿ 76, 2ನೇ ಹಂತದಲ್ಲಿ 254 ಘಟಕಗಳನ್ನು ನಿರ್ಮಿಸಲಾಗುವುದು, ಘಟಕ ಸ್ಥಾಪನೆಗೆ ಈಗಾಗಲೇ 19 ಗ್ರಾಮಪಂಚಾಯತಿಗಳಲ್ಲಿ ಸ್ವಂತ ಜಾಗವನ್ನು ಗುರುತಿಸಲಾಗಿದೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಿಂದ 309 ಗ್ರಾಮ ಪಂಚಾಯತಿಗಳಲ್ಲಿ ಜಾಗ ಮಂಜೂರಾಗಿದೆ. ಉಳಿದಂತೆ 2 ಗ್ರಾಮ ಪಂಚಾಯತಿಗಳಲ್ಲಿ ಜಾಗ ಮಂಜೂರಾತಿ ಆಗಬೇಕಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 519 ಹೊಸ ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದ್ದು, ಈ ಪೈಕಿ 400 ಗ್ರಾಮಗಳು ಪ್ರಾಥಮಿಕ ಹಾಗೂ 112 ಗ್ರಾಮ ಅಂತಿಮ ಅಧಿಸೂಚನೆಯಾಗಿದೆ, ಹೊಸದಾಗಿ ಗುರುತಿಸಿರುವ 519 ಕಂದಾಯ ಗ್ರಾಮಗಳ ಪೈಕಿ 2ಇ ತಿದ್ದುಪಡಿ ಅಧಿಸೂಚನೆಯನ್ವಯ ಖಾಸಗಿ ಜಮೀನಿನಲ್ಲಿರುವ ಜನವಸತಿ ಪ್ರದೇಶಗಳನ್ನು ಸರ್ಕಾರದ ವಶಕ್ಕೆ ಪಡೆದು ಈಗಾಗಲೇ ಪ್ರಾಥಮಿಕ ಅಧಿಸೂಚನೆಯಾಗಿರುವ ಕಂದಾಯ ಗ್ರಾಮಗಳನ್ನು ಮತ್ತೊಮ್ಮೆ ಸರ್ವೇ ಮಾಡಿ 128 ಗ್ರಾಮಗಳನ್ನು ಗುರುತಿಸಿ ಈ ಪೈಕಿ 18 ಗ್ರಾಮಗಳನ್ನು ಪ್ರಾಥಮಿಕ ಅಧಿಸೂಚನೆ ಹಾಗೂ 16 ಗ್ರಾಮಗಳನ್ನು ಅಂತಿಮ ಅಧಿಸೂಚನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಕೋಟಗುಡ್ಡ ಗ್ರಾಪಂ ಪಿಡಿಒ ಅಮಾನತು
ಪಾವಗಡ: ಪಾವಗಡ ತಾಲ್ಲೂಕು ಕೋಟಿಗುಡ್ಡ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರಿಂದ ಸ್ವೀಕೃತವಾದ ದೂರುಗಳ ಹಿನ್ನೆಲೆಯಲ್ಲಿ ಕೋಟಗುಡ್ಡ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಅವರನ್ನು ಜಿಪಂ ಸಿಇಒ ಅಮಾನತು ಮಾಡಿದ್ದಾರೆ.
ಪಂಚಾಯ್ತಿಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸಿ ತನಿಖಾ ವರದಿಯಲ್ಲಿ ಕಂಡು ಬಂದ ಹಣ ದುರುಪಯೋಗ ಹಾಗೂ ಕರ್ತವ್ಯ ನಿರ್ಲಕ್ಷ್ಯ ಸಂಬಂಧ ಮುಖ್ಯ ಜಿಪಂ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಕೋಟಿಗುಡ್ಡ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿಶೋರ್ ಲಾಲ್ ಸಿಂಗ್ ಅವರ ಸೇವೆಯನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಪಡಿಸಿ ಆದೇಶಿಸಿರುತ್ತಾರೆ.
Comments are closed.