ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಮೀನು ಕಾಯ್ದಿರಿಸಿ

ಎಲ್ಲಾ ತಹಶೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಸೂಚನೆ

312

Get real time updates directly on you device, subscribe now.

ತುಮಕೂರು: ಸರ್ಕಾರವು ಜಿಲ್ಲೆಯ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸಲು ಉದ್ದೇಶಿಸಿರುವುದರಿಂದ ಸರ್ಕಾರಿ ಜಮೀನು ಲಭ್ಯವಿರುವ ಕಡೆ ಸ್ಮಶಾನದ ಉದ್ದೇಶಕ್ಕಾಗಿ 2 ಎಕರೆ ವಿಸ್ತೀರ್ಣದ ಜಮೀನು ಕಾಯ್ದಿರಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅವರು ಎಲ್ಲಾ ತಹಶೀಲ್ದಾರರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕೆಸ್ವಾನ್‌ ಸಭಾಂಗಣದಲ್ಲಿ ತಾಲ್ಲೂಕು ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ 2 ಎಕರೆ ವಿಸ್ತೀರ್ಣದ ಸ್ಮಶಾನ ಭೂಮಿ ಕಲ್ಪಿಸಲು ಸರ್ಕಾರ ನಿರ್ದೇಶನ ನೀಡಿರುವುದರಿಂದ ಸರ್ಕಾರಿ ಜಮೀನು, ಕೆರೆ, ಕುಂಟೆ, ಹಳ್ಳ, ಸರೋವರ ಮತ್ತು ಇನ್ನಿತರೆ ಜಲಕಾಯ, ಜಲಮೂಲಗಳೆಂದು ವರ್ಗೀಕೃತವಾದ ಜಮೀನು ಹಾಗೂ ಗ್ರಾಮ ನಕಾಶೆಯಲ್ಲಿ ರಸ್ತೆ, ಬೀದಿ, ಬಂಡಿದಾರಿ, ಓಣಿ ಅಥವಾ ಹಾದಿ ಎಂದು ನಮೂದಾಗಿರುವ ಇತರೆ ಎಲ್ಲಾ ಸರ್ಕಾರಿ ಜಮೀನುಗಳು ಒತ್ತುವರಿಯಾಗಿದ್ದಲ್ಲಿ ಸಾರ್ವಜನಿಕರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಅಥವಾ ತಹಶೀಲ್ದಾರಿಗೆ ದೂರು ನೀಡಲು ಅವಕಾಶವಿದೆ ಎಂದು ತಿಳಿಸಿದರು.
ಉಚ್ಛ ನ್ಯಾಯಾಲಯದ ಆದೇಶದನ್ವಯ 6 ತಿಂಗಳೊಳಗಾಗಿ ಗ್ರಾಮ ಮತ್ತು ನಗರಗಳಿಗೆ ಸ್ಮಶಾನ ಭೂಮಿ ಸೌಲಭ್ಯ ಒದಗಿಸಲು ಅಗತ್ಯವಿರುವ ಭೂಮಿಯನ್ನು ಕಾಯ್ದಿರಿಸಲು ಸಾಧ್ಯವಾದ ಎಲ್ಲಾ ಕ್ರಮ ಕೈಗೊಳ್ಳುವುದರ ಜೊತೆಗೆ ಒತ್ತುವರಿಯಾಗಿ ತೆರವುಗೊಳಿಸಲು ಬಾಕಿ ಇರುವ ಸರ್ಕಾರಿ ಭೂಮಿ ತೆರವುಗೊಳಿಸಬೇಕು ಎಂದು ನಿರ್ದೇಶಿಸಿದರಲ್ಲದೆ, ಸ್ಮಶಾನದ ಉದ್ದೇಶವು ಸಾರ್ವಜನಿಕ ಉದ್ದೇಶವಾಗಿರುವುದರಿಂದ `ಬ’ ಖರಾಬು ಎಂದು ವರ್ಗೀಕೃತವಾದ ಸರ್ಕಾರಿ ಜಮೀನುಗಳನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 71 ರನ್ವಯ ಕಾಯ್ದಿರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಆಯಾ ತಹಶೀಲ್ದಾರ್ ಗಳು ಸ್ಮಶಾನ ಭೂಮಿ ಒದಗಿಸುವ ಬಗ್ಗೆ ಹಾಗೂ ಸರ್ಕಾರಿ ಜಮೀನುಗಳ ಒತ್ತುವರಿಯ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರಬೇಕು, ಗೋಮಾಳ ಜಮೀನು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದ್ದರೂ ಸ್ಮಶಾನಕ್ಕಾಗಿ ಮೀಸಲಿಡಲು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4) ರಲ್ಲಿ ಅವಕಾಶ ನೀಡಲಾಗಿದೆ ಎಂದರಲ್ಲದೆ, ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದರೆ ಸಕ್ರಮೀಕರಣಕ್ಕಾಗಿ ಅರ್ಜಿ ಸಲ್ಲಿಸುವ ಅರ್ಜಿಗಳ ಪೈಕಿ ಅನರ್ಹ ಅರ್ಜಿಗಳು ಇದ್ದಲ್ಲಿ ಅವುಗಳನ್ನು ವಜಾಗೊಳಿಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಸ್ಮಶಾನಕ್ಕಾಗಿ ಕಾಯ್ದಿರಿಸಬೇಕು ಎಂದರು.
ಒಂದು ವೇಳೆ ಯಾವುದೇ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಕಾಯ್ದಿರಿಸಲು ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಅಂತಹ ಗ್ರಾಮಗಳಲ್ಲಿ ಮಾರ್ಗಸೂಚಿ ಮೌಲ್ಯದ ಮೂರು ಪಟ್ಟು ದರದಲ್ಲಿ ಖಾಸಗಿಯವರಿಂದ ಜಮೀನು ಖರೀದಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ವಿ.ಅಜಯ್‌, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮೋಹನ್‌ ದಾಸ್‌, ತಹಶೀಲ್ದಾರ್‌ ಮೋಹನ್‌ ಕುಮಾರ್‌ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!