ಪಂಚಾಯತಿಗಳಲ್ಲಿ ಗ್ರಾಮ ಒನ್‌ ಕೇಂದ್ರ ಸ್ಥಾಪನೆ: ಡೀಸಿ

246

Get real time updates directly on you device, subscribe now.

ತುಮಕೂರು: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಶೀಘ್ರವಾಗಿ ಗ್ರಾಮ ಒನ್‌ ಕೇಂದ್ರಗಳನ್ನು ಸ್ಥಾಪಿಸಿ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್‌ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರನ್ಸ್ ನಡೆಸಿ ಮಾತನಾಡಿ, ಮುಖ್ಯಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್‌ ಕಾರ್ಯಕ್ರಮದಡಿ ಹಲವಾರು ಸರ್ಕಾರಿ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ತೆರೆದಿರುವ ಗ್ರಾಮ ಒನ್‌ ಕೇಂದ್ರಗಳಲ್ಲಿ 100 ಕ್ಕೂ ಹೆಚ್ಚು ಸರ್ಕಾರಿ ಸೇವೆ ಒದಗಿಸಲಾಗುತ್ತಿದ್ದು, ಗ್ರಾಮ ಒನ್‌ ಕೇಂದ್ರ ತೆರೆಯದಿರುವ ಗ್ರಾಮ ಪಂಚಾಯಿತಿಗಳಲ್ಲಿ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಕೇಂದ್ರ ಪ್ರಾರಂಭಿಸಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಒಂದಕ್ಕಿಂತ ಹೆಚ್ಚು ಅರ್ಜಿದಾರರಿದ್ದಲ್ಲಿ ಸರ್ಕಾರಿ ನಿಯಮದನ್ವಯ ಅರ್ಹತೆ ಹೊಂದಿರುವವರಿಗೆ ಕೇಂದ್ರ ಪ್ರಾರಂಭಿಸಲು ಅನುಮತಿಸಲಾಗುವುದೆಂದರು.
ಗ್ರಾಮ ಒನ್‌ ಕೇಂದ್ರಗಳನ್ನು ತೆರೆಯದ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಿ ಕೇಂದ್ರಗಳನ್ನು ತೆರೆಯಲು ಗಮನ ನೀಡುವಂತೆ ಸಂಬಂಧಿಸಿದ ತಹಶೀಲ್ದಾರ್‌ ಮತ್ತು ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ನಿಯಂತ್ರಣಕ್ಕೆ ಬರುತ್ತಿದ್ದು, ಲಭ್ಯವಿರುವ ಮೊದಲ ಡೋಸ್‌ ಮತ್ತು ಎರಡನೇ ಡೋಸ್‌ ಲಸಿಕಾಕರಣ ಪೂರ್ಣಗೊಳಿಸಬೇಕು, ಈಗಾಗಲೇ ಎರಡು ಲಸಿಕೆ ಪಡೆದು ಬೂಸ್ಟರ್‌ ಡೋಸ್‌ಗೆ ಅರ್ಹರಿರುವ ಫಲಾನುಭವಿಗಳಿಗೆ ಶೀಘ್ರವೇ ಲಸಿಕೆ ನೀಡಿ ಆರೋಗ್ಯ ಸ್ಥಿತಿ ಕಾಪಾಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ತಾಲ್ಲೂಕುಗಳಿಗೆ ನಿಗದಿಪಡಿಸಿರುವ ಲಸಿಕೆಗಳು ಹೆಚ್ಚಾಗಿದ್ದಲ್ಲಿ ಕೊರತೆ ಇರುವ ತಾಲ್ಲೂಕುಗಳಿಗೆ ನೀಡಿ ಲಸಿಕಾಕರಣ ಸರಿದೂಗಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಗಂಟಲು ದ್ರವ ಮಾದರಿ ಸಂಗ್ರಹಿಸಲು ತುಮಕೂರಿಗೆ 700 ಹಾಗೂ ತಾಲ್ಲೂಕು ಕೇಂದ್ರಗಳಿಗೆ 350 ಟೆಸ್‌್ಟ ನಡೆಸಲು ನಿಗದಿಪಡಿಸಲಾಗಿದೆ ಎಂದರಲ್ಲದೆ, ಪೈಕಿ- ಪಹಣಿ ಒಟ್ಟುಗೂಡಿಸುವಿಕೆ, ಪಹಣಿ ಕಾಲಂ 3/9 ಮಿಸ್‌ ಮ್ಯಾಚ್‌, ಭೂಮಿ ಪೆಂಡೆನ್ಸಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಂದಾಯ ಗ್ರಾಮಗಳ ರಚನೆ ಸಂಬಂಧ ಅಧಿಕಾರಿಗಳು ಹೆಚ್ಚು ಕಾರ್ಯ ಪ್ರವೃತ್ತರಾಗಬೇಕೆಂದು ತಿಳಿಸಿದರು.
ಸಭೆಯಲ್ಲಿ ಸ್ಮಶಾನ ಹಾಗೂ ವಿವಿಧ ಉದ್ದೇಶಗಳಿಗೆ ಸರ್ಕಾರಿ ಜಮೀನು ಕಾಯ್ದಿರಿಸುವ, ಎತ್ತಿನಹೊಳೆ, ಸಾಮಾಜಿಕ ಭದ್ರತಾ ಯೋಜನೆ, ಸಕಾಲ, ನಾಡ ಕಚೇರಿ ಪ್ರಗತಿ ಪರಿಶೀಲನೆ ಕುರಿತಂತೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ವಿ.ಅಜಯ್‌, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮೋಹನ್‌ ದಾಸ್‌, ತಹಶೀಲ್ದಾರ್‌ ಮೋಹನ್‌ ಕುಮಾರ್‌ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!