ಅಂಬೇಡ್ಕರ್ ಗೆ ಅಪಮಾನ- ನ್ಯಾಯಾಧೀಶರ ವಿರುದ್ಧ ಕಿಡಿ

ತುಮಕೂರಿನಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ- ಕ್ರಮಕ್ಕೆ ಆಗ್ರಹ

134

Get real time updates directly on you device, subscribe now.

ತುಮಕೂರು: ರಾಯಚೂರು ಜಿಲ್ಲಾ ಸತ್ರ ನ್ಯಾಯಾಧೀಶರ ನಡವಳಿಕೆಯ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಸರಕಾರದ ದಲಿತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಸಮಾಜ ಸೇವಕ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯ ಇಕ್ಬಾಲ್‌ ಅಹಮದ್‌ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂವಿಧಾನ ಸಂರಕ್ಷಣಾ ಸಮಿತಿ, ತುಮಕೂರು ವತಿಯಿಂದ ಆಯೋಜಿಸಿದ್ದ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿ, ಸರಕಾರದ ಒಂದು ಅಂಗವಾಗಿರುವ ನ್ಯಾಯಾಂಗ ಇಲಾಖೆಯಲ್ಲಿದ್ದುಕೊಂಡು ಗಣರಾಜೋತ್ಸವ ದಿನದಂದು ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋ ತೆಗೆಸಿ ಅಸಂವಿಧಾನಿಕವಾಗಿ ನಡೆದುಕೊಂಡಿರುವ ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸರಕಾರ ದಲಿತರು, ಶೋಷಿತರ ಪರ ಎಂಬುದನ್ನು ಸಾಬೀತು ಪಡಿಸಬೇಕಾಗಿದೆ ಎಂದರು.
ಸಂವಿಧಾನ ಸಂರಕ್ಷಣಾ ಸಮಿತಿಯ ಭಾನುಪ್ರಕಾಶ್‌ ಮಾತನಾಡಿ, ಹಲವು ಭಾಷೆ, ಆಚಾರ, ವಿಚಾರ, ಜಾತಿ, ಧರ್ಮಗಳನ್ನು ಹೊಂದಿರುವ ಭಾರತದಂತಹ ವಿವಿಧತೆಯಲ್ಲಿ ಏಕತೆ ಎಂಬ ಸಂದೇಶ ಸಾರುವ ರಾಷ್ಟ್ರದ ಎಲ್ಲಾ ಜನರ ಅನುಕೂಲಕ್ಕಾಗಿ ಬಾಬಾ ಸಾಹೇಬರು ಹಗಲಿರುಳೆನ್ನದೆ ಹಲವು ರಾಷ್ಟ್ರಗಳ ಸಂವಿಧಾನ ಅಧ್ಯಯನ ನಡೆಸಿ ಒಂದು ಉತ್ತಮ ಸಂವಿಧಾನ ನೀಡಿದ್ದಾರೆ, ಇದನ್ನೇ ಓದಿ ವಕೀಲರಾಗಿ, ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಮಾಡಿದ ಅಪಮಾನವನ್ನು ಸರಕಾರ ನಿರ್ಲಕ್ಷಿಸುವುದು ಸರಿಯಲ್ಲ, ಈ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯಗಳು ಒಗ್ಗೂಡಿ ಬೀದಿಗಿಳಿಯಬೇಕಾಗುತ್ತದೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿಯ ಕೇಬಲ್‌ ರಘು ಮಾತನಾಡಿ, ರಾಯಚೂರು ಜಿಲ್ಲಾ ನ್ಯಾಯಾಧೀಶರ ನಡೆ ಖಂಡಿಸಿ ಇಡೀ ರಾಜ್ಯದಲ್ಲಿಯೇ ಪ್ರತಿಭಟನೆ ನಡೆಯುತ್ತಿದ್ದರೂ ಸರಕಾರ ತುಟಿ ಬಿಚ್ಚುತ್ತಿಲ್ಲ, ಹಿಜಾಬ್‌, ಮತಾಂತರ ನಿಷೇಧದಂತಹ ವಿಚಾರಗಳಿಗೆ ತಕ್ಷಣವೇ ಸ್ಪಂದಿಸುವ ಸರಕಾರ ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡಿದ ಪ್ರಕರಣದ ಬಗ್ಗೆ ಮೌನ ತಾಳಿರುವುದು ಹಲವು ಅನುಮಾನ ಹುಟ್ಟು ಹಾಕಿದೆ, ಸರಕಾರದ ಧೋರಣೆ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ದಲಿತರು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.
ಉಪನ್ಯಾಸಕ ಹಾಗೂ ಹೋರಾಟಗಾರ ಕೊಟ್ಟ ಶಂಕರ್‌ ಮಾತನಾಡಿ, ಇಡೀ ಮನುಕುಲವನ್ನೇ ಅಪಮಾನಿಸಿರುವ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ಅಮಾನತು ಮಾಡುವುದಲ್ಲದೆ, ಇಲ್ಲಿಯವರಗೆ ಅವರು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಕ್ಷಿದಾರರಾಗಿ ಪ್ರಕರಣಗಳ ತೀರ್ಪನ್ನು ಪುನರ್‌ ಪರಿಶೀಲನೆಗೆ ಒಳಪಡಿಸಬೇಕು, ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಮಧ್ಯ ಪ್ರವೇಶಿಸಿ ಶಿಸ್ತು ಕ್ರಮ ಜರುಗಿಸಬೇಕೆಂಬುದು ಸಂವಿಧಾನ ಸಂರಕ್ಷಣಾ ಸಮಿತಿಯ ಒಕ್ಕೋರಲ ಒತ್ತಾಯವಾಗಿದೆ ಎಂದರು.
ಈ ಸಂಬಂಧ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಾ.ರಫೀಕ್‌ ಅಹಮದ್‌, ಮುಖಂಡ ಮುರುಳೀಧರ ಹಾಲಪ್ಪ, ಹಿಂದುಳಿದ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್‌, ದಲಿತ ಮುಖಂಡರಾದ ಜೆ.ಸಿ.ಬಿ.ವೆಂಕಟೇಶ್‌, ಟಿ.ಸಿ.ರಾಮಯ್ಯ, ವಾಲೆಚಂದ್ರಯ್ಯ, ಸಮಾಜ ಸೇವಕ ತಾಜುದ್ದೀನ್‌ ಷರೀಫ್‌, ಮಾದಿಗ ದಂಡೋರ ಎಂ.ವಿ.ರಾಘವೇಂದ್ರ ಸ್ವಾಮಿ, ಬೆಳ್ಳಿ ಲೋಕೇಶ್‌, ಸಿದ್ದರಾಜು, ಮೆಳೇಕಲ್ಲಹಳ್ಳಿ ಯೋಗೀಶ್‌, ಜಿ.ಆರ್‌.ಸುರೇಶ್‌, ನಿಕೇತ್‌ರಾಜ್‌ ಮೌರ್ಯ, ಝಕೀರ್‌, ಗೋಪಿ ಮಸರುಪಡಿ, ಆಟೋ ಶಿವರಾಜು, ರಂಗಸ್ವಾಮಿ, ಮಾರುತಿ, ಹೆಗ್ಗರೆ ಕೃಷ್ಣಪ್ಪ, ಕೋರರಾಜು, ಗೂಳೂರು ರಾಜಣ್ಣ, ಇತರೆ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!