ವಿದ್ಯಾರ್ಥಿಗಳು ಉತ್ತಮ ಮಾರ್ಗದಲ್ಲಿ ಸಾಗಲಿ: ಜಿಲ್ಲಾಧಿಕಾರಿ

139

Get real time updates directly on you device, subscribe now.

ಮಧುಗಿರಿ: ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಸಾಧಿಸಲು ಸರಿಯಾದ ಮಾರ್ಗ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌ ಪಾಟೀಲ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್‌ ಲ್ಯಾಬ್‌ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳ ಬಳಕೆಗಾಗಿ ಟ್ಯಾಬ್‌, ಮೊಬೈಲ್‌ ಪೊಜೆಕ್ಟರ್‌, ಯುಪಿಎಸ್‌, ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮಾಹಿತಿ ತಂತ್ರಜ್ಞಾನ ಬೆಳೆಯುತ್ತಿರುವಂತೆ ವಿದ್ಯಾರ್ಥಿಗಳು ಕೂಡ ಸ್ಮಾರ್ಟ್‌ ಆಗಬೇಕಿದ್ದು ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳದೆ ಸದುಪಯೋಗಪಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ದಾಸರ ನುಡಿಯಂತೆ ತಾವು ಓದಿದ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳ ಭೌದ್ಧಿಕ ಬೆಳವಣಿಗೆಗಾಗಿ ಕಾರ್ಮಿಕ ಕಲ್ಯಾಣ ಆಯುಕ್ತ ಅಕ್ರಂ ಪಾಷ ಅವರು ಕಂಪ್ಯೂಟರ್‌ ಲ್ಯಾಬ್ ಗೆ ಅಗತ್ಯವಿರುವ ಪೀಠೋಪಕರಣಗಳು ಟ್ಯಾಬ್‌, ಮೊಬೈಲ್‌ ಪೊಜೆಕ್ಟರ್‌, ಯುಪಿಎಸ್‌, ಕ್ರೀಡಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಮಧುಗಿರಿ ತಾಲ್ಲೂಕು ಸಿಂಗರಾವುತ್ತನಹಳ್ಳಿ ಗ್ರಾಮದ ಅಕ್ರಂ ಪಾಷ ಅವರು ತಮ್ಮ ಶಾಲೆಯ ಮೇಲೆ ಇಟ್ಟಿರುವ ಅಭಿಮಾನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕು. ಮರವು ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಬೇರು ನೆಲದಲ್ಲಿಯೇ ಬೇರೂರಿರುತ್ತದೆ. ಹಾಗೆಯೇ ವಿದ್ಯಾರ್ಥಿಯು ಉನ್ನತ ಸಾಧನೆ ಸಾಧಿಸಿದಾಗ ಗುರು ಹಿರಿಯರು, ತಂದೆ ತಾಯಿ ಮತ್ತು ಸಮಾಜದ ಬಗ್ಗೆ ಗೌರವವನ್ನು ಹೊಂದಿರಬೇಕು. ಜೊತೆಗೆ ಸಾಧಕರಿಂದ ಪ್ರೇರಣೆಗೊಂಡು ಗುರಿ ಸಾಧಿಸಲು ನಿರಂತರ ಶ್ರಮ ಪಡಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ನಿರ್ಧಿಷ್ಟ ಗುರಿ ಹೊಂದಿ ನಿರಂತರ ಕಲಿಕೆಯಲ್ಲಿ ನಿರತರಾಗಬೇಕು. ಗುರಿ ತಲುಪಿದ ಮೇಲೆ ತಾನು ಕಲಿತ ಶಾಲೆಗೆ ತನ್ನದೇ ಆದ ಕೊಡುಗೆಯನ್ನು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಮಿಕ ಇಲಾಖೆಯ ಆಯುಕ್ತ ಅಕ್ರಂ ಪಾಷ ಮಾತನಾಡಿ ನಾನು ಈ ಶಾಲೆಯಲ್ಲಿ ಮೂರು ವರ್ಷಗಳ ಕಾಲ ಯಾವುದೇ ಸೌಲಭ್ಯಗಳಿಲ್ಲದ ವಾತಾವರಣದಲ್ಲಿ ಕಲಿತು ಉನ್ನತ ಅಧಿಕಾರಿಯಾಗಿದ್ದೇನೆ. ನಾನು ಕಲಿತ ಶಾಲೆಗೆ ಕೊಡುಗೆಯಾಗಿ ಕಂಪ್ಯೂಟರ್‌ ಲ್ಯಾಬ್‌ ಪೀಠೋಪಕರಣ, ಟ್ಯಾಬ್‌, ಕ್ರೀಡಾ ಸಾಮಗ್ರಿಗಳನ್ನು ನೀಡಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಮುಂದುವರಿಯಬೇಕುಎಂದು ಆಶಿಸಿದರಲ್ಲದೆ, ನಗರ ಪ್ರದೇಶದ ಮಕ್ಕಳಂತೆ ಗ್ರಾಮೀಣ ವಿದ್ಯಾರ್ಥಿಗಳಿಗೂ ತಂತ್ರಜ್ಞಾನದ ಸಹಾಯದೊಂದಿಗೆ ಕಲಿಕೆಗೆ ಪೂರಕ ವಾತಾವರಣವನ್ನು ಕಲ್ಪಿಸುವುದು ಕೊಡುಗೆಯ ಮೂಲ ಉದ್ದೇಶವಾಗಿದೆ ಎಂದರಲ್ಲದೆ, ವಿಶೇಷವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನೀಡಿರುವ ಟ್ಯಾಬ್‌ ತರಗತಿಗೆ ಸಂಬಂಧಿಸಿದ ಅಧ್ಯಾಯಗಳನ್ನು ಅಭ್ಯಾಸ ಮಾಡಲು ನೆರವಾಗುತ್ತದೆ ಎಂದು ತಿಳಿಸಿದರು.
ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಕಾರ್ಯನಿರ್ವಾಹಣಾಧಿಕಾರಿ ವೈ.ಎಸ್‌.ರಾಮಕೃಷ್ಣಯ್ಯ, ಕಾಲೇಜಿನ ಪ್ರಾಂಶುಪಾಲ ಅಶ್ವಥ್‌ ನಾರಾಯಣ್‌, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಬಿ.ಜಿ. ಹನುಮಂತರಾಯಪ್ಪ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ನಂತರ ಮಧುಗಿರಿ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಬಾಲಕರ ಮತ್ತು ಬಾಲಕಿಯರ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್‌ ಮತ್ತು ಟೀ ಷರ್ಟ್ ಗಳನ್ನು ವಿತರಿಸಲಾಯಿತು.
ಬಳಿಕ ಅಕ್ರಂ ಪಾಷ ಅವರು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಸಿಂಗರಾವುತ್ತನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಕಾರ್ಪೇನಹಳ್ಳಿಯ ಸರ್ಕಾರಿ ಮಾಧ್ಯಮಿಕ ಶಾಲೆಗಳಿಗೆ ಸ್ಮಾರ್ಟ್‌ ಕ್ಲಾಸ್‌ ಪೀಠೋಪಕರಣಗಳು, ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಸಿಂಗರಾವುತ್ತನಹಳ್ಳಿ ಗ್ರಾಮದಲ್ಲಿ 6 ವರ್ಷಗಳ ಹಿಂದೆ ಅಗತ್ಯ ಮೂಲಭೂತ ಸೌಕರ್ಯದೊಂದಿಗೆ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ, ಶೌಚಾಲಯ ನಿರ್ಮಾಣಕ್ಕಾಗಿ 50ಲಕ್ಷ ರೂ. ವೆಚ್ಚ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!