ಹೆಣ್ಣು ಮಕ್ಕಳು ಸರ್ಕಾರದ ಸೌಲಭ್ಯ ಬಳಸಿಕೊಳ್ಳಲಿ

134

Get real time updates directly on you device, subscribe now.

ಕುಣಿಗಲ್‌: ಹೆಣ್ಣು ಮಕ್ಕಳಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಹಲವಾರು ಸವಲತ್ತು ಲಭ್ಯವಿದ್ದು ಇವುಗಳ ಬಗ್ಗೆ ಸೂಕ್ತ ಅರಿವು ಪಡೆದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸದೃಡರಾಗಬೇಕೆಂದು ತಾಪಂ ಇಒ ಜೋಸೆಫ್‌ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಹಮ್ಮಿಕೊಳ್ಳಲಾದ ಹೆಣ್ಣುಮಕ್ಕಳಿಗೆ ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತು ಹಾಗೂ ಕಾನೂನಾತ್ಮಕ ಅವಕಾಶಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಉದ್ಯೋಗ, ಹೈನುಗಾರಿಕೆ, ತೋಟಗಾರಿಕೆ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳಡಿಯಲ್ಲಿ ಹಲವಾರು ಸವಲತ್ತುಗಳಿವೆ, ಇವುಗಳ ಬಗ್ಗೆ ಅರಿವು ಪಡೆದು ವಿವಿಧ ಕೌಶಲ್ಯಾಧರಿತ ತರಬೇತಿ ಪಡೆದು ಸ್ವಾವಲಂಬಿಗಳಾಗುವ ಜೊತೆಯಲ್ಲಿ ಇತರರಲ್ಲು ಅರಿವು ಮೂಡಿಸಬೇಕೆಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುಶಾ ಮಾತನಾಡಿ, ಮಹಿಳೆಯರ ಆರೋಗ್ಯರಕ್ಷಣೆ ನಿಟ್ಟಿನಲ್ಲಿ ಪ್ರಸವಪೂರ್ವ, ನಂತರದ ದಿನಗಳಲ್ಲಿ ಮಾತೃತ್ವ ಯೋಜನೆ ಮೂಲಕ ಇಲಾಖೆ ಕಾಲಕಾಲಕ್ಕೆ ಗಮನ ಹರಿಸಿ ಪೂರಕ ಕ್ರಮ ಕೈಗೊಳ್ಳುವುದು, ಕಿಶೋರಿಯರ ಆರೋಗ್ಯ ವೃದ್ಧಿಗೆ ಮತ್ತು ಪುಟ್ಟಮಕ್ಕಳ ಆರೋಗ್ಯ ವೃದ್ಧಿ ನಿಟ್ಟಿನಲ್ಲಿ ಪೂರಕ ಪೌಷ್ಟಿಕ ಆಹಾರ ವಿತರಣೆ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಇತರೆ ರೀತಿಯಲ್ಲಿ ಮಹಿಳೆಯರ ಶೋಷಣೆ ನಿಯಂತ್ರಣಕ್ಕೆ ಹಲವು ರೀತಿಯಲ್ಲಿ ಇಲಾಖೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯಶ್ರೀ, ಕೃಷಿ ಇಲಾಖೆಯಿಂದ ಮಹಿಳೆಯ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಲು ಆತ್ಮ ನಿರ್ಭರ್‌ ಭಾರತ ಯೋಜನೆಯಡಿ ಹಲವು ಸವಲತ್ತುಗಳಿವೆ. ರೈತರ ಮಕ್ಕಳಿಗೆ ವಿದ್ಯಾನಿಧಿಯಡಿ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಧನ ನೀಡಲಾಗುವುದು. ಕೃಷಿ ಚಟುವಟಿಕೆ ಸೇರಿದಂತೆ ಕೃಷಿಗೆ ಪೂರಕ ಚಟುವಟಿಕೆ ಕೈಗೊಳ್ಳಲು ಕೌಶಲ್ಯ ತರಬೇತಿ ಯೋಜನೆ ಇದೆ ಎಂದರು.
ಪಶುಸಂಗೋಪನೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಇಲಾಖೆ ಸಹಾಯಕ ನಿರ್ದೇಶಕ ವಸಂತ, ಆರಕ್ಷಕ ಇಲಾಖೆಯ ಮಾಹಿತಿ ಬಗ್ಗೆ ಪಿಎಸೈ ಲಕ್ಷ್ಮಣ, ಮಹಿಳೆಯರಿಗೆ ಇರುವ ಕಾನೂನುಗಳ ಬಗ್ಗೆ ವಕೀಲರಾದ ಧನಲಕ್ಷ್ಮೀ, ಜಯಲಕ್ಷ್ಮೀ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಸಹಕಾರ ಸಂಘದ ಸದಸ್ಯರು ಇತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!