ತುಮಕೂರು: ಪರಿಶಿಷ್ಟ ಜಾತಿ, ಪಂಗಡದವರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2021- 22ನೇ ಸಾಲಿನ ರಾಜ್ಯ ವಲಯ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ ಕಾರ್ಯಕ್ರಮಗಳಡಿ ಜನವರಿ 2022ರ ಅಂತ್ಯಕ್ಕೆ ಸಾಧಿಸಲಾದ ಪ್ರಗತಿಗೆ ಸಂಬಂಧಿಸಿದಂತೆ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಸರ್ಕಾರ ಪರಿಶಿಷ್ಟರ ಅಭಿವೃದ್ಧಿಗಾಗಿ ವಿವಿಧ ಯೋಜನೆ ಜಾರಿಗೆ ತಂದು ಅನುಷ್ಠಾನಕ್ಕಾಗಿ ಇಲಾಖೆಗಳಿಗೆ ಅನುದಾನ ಒದಗಿಸುತ್ತಿದೆ, ಅರ್ಹರಿಗೆ ಸವಲತ್ತು ಒದಗಿಸಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕೆಂದು ಸೂಚಿಸಿದರು.
ಬರುವ ಮಾರ್ಚ್ ಅಂತ್ಯಕ್ಕೆ ಆರ್ಥಿಕ ವರ್ಷ ಅಂತ್ಯವಾಗುತ್ತಿದ್ದು, ಇಲಾಖೆಗಳಿಗೆ ಒದಗಿಸಿರುವ ಅನುದಾನವನ್ನು ಸಮರ್ಪಕವಾಗಿ ಖರ್ಚು ಮಾಡಿ ನಿಗದಿತ ಗುರಿ ಸಾಧಿಸಬೇಕು, ಆ ಮೂಲಕ ಅರ್ಹ ಫಲಾನುಭವಿಗಳಿಗೆ ಸವಲತ್ತು ತಲುಪಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪರಿಶಿಷ್ಟ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಪೆಂಡಿಂಗ್ ಕೆಲಸಗಳು ಬಾಕಿ ಇದ್ದಲ್ಲಿ ಇತ್ಯರ್ಥಗೊಳಿಸಿ ವಿದ್ಯಾರ್ಥಿ ವೇತನ ನೀಡಿ ಸುಗಮ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದರಲ್ಲದೆ, ಪರಿಶಿಷ್ಟರ ಸಭೆಗಳಿಗೆ ಗೈರಾಗುವ ಅಧಿಕಾರಿಗಳಿಗೆ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.
ಪರಿಶಿಷ್ಟ ಜಾತಿಯ ಉಪಯೋಜನೆ, ಗಿರಿಜನ ಉಪಯೋಜನೆಯಡಿ ವಿವಿಧ ಇಲಾಖೆಗಳು ಕೈಗೊಂಡಿರುವ ಕಾರ್ಯಕ್ರಮ, ಅದಕ್ಕೆ ಕಲ್ಪಿಸಿರುವ ಅನುದಾನ ಮತ್ತು ಸಾಧಿಸಿರುವ ಪ್ರಗತಿ ಬಗ್ಗೆ ಇಲಾಖಾವಾರು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಸಭೆಗೆ ಮಾಹಿತಿ ನೀಡುತ್ತಾ ಪರಿಶಿಷ್ಟ ಜಾತಿ ಉಪಯೋಜನೆಯಡಿ ವಿವಿಧ ಇಲಾಖೆಗಳಿಗಾಗಿ 30767.55 ಲಕ್ಷ ರೂ. ಮೀಸಲಿಟ್ಟು, 19374.11 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ, ಇದರಲ್ಲಿ 14970.88 ಲಕ್ಷ ರೂ. ವಿವಿಧ ಕಾರ್ಯಕ್ರಮಗಳಡಿ ವ್ಯಯಿಸಲಾಗಿ ಶೇ. 77 ರಷ್ಟು ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರಲ್ಲದೇ
ಗಿರಿಜನ ಉಪಯೋಜನೆಯಡಿ 10336.21 ಲಕ್ಷ ರೂ. ಮೀಸಲಿಟ್ಟು 6858.83 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಇದರಲ್ಲಿ 5048.77 ಲಕ್ಷ ರೂ. ಇಲಾಖೆಗಳು ವಿವಿಧ ಕಾರ್ಯಕ್ರಮ ರೂಪಿಸಿ ವ್ಯಯಿಸಲಾಗಿ ಶೇ.74ರಷ್ಟು ಗುರಿ ಸಾಧಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Get real time updates directly on you device, subscribe now.
Prev Post
Comments are closed.