ಧರ್ಮಾಚರಣೆ ಮಂದಿರ, ಮಸೀದಿಗಳಲ್ಲಿರಲಿ: ಸ್ವಾಮೀಜಿ

147

Get real time updates directly on you device, subscribe now.

ತುರುವೇಕೆರೆ: ಧರ್ಮದ ಆಚರಣೆಗಳು ಮಸೀದಿ ಮಂದಿರಳಿಗಷ್ಟೇ ಸೀಮಿತವಾಗಿರಲಿ, ಕೇಸರಿ, ಹಿಜಾಬ್‌ ಶಾಲೆಯ ಆವರಣ ಪ್ರವೇಶಿಸುವುದು ಬೇಡ ಎಂದು ಹೊಸದುರ್ಗ ಕನಕದಾಮ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಮುನೀಶ್ವರ ನಗರದಲ್ಲಿ ನಿರ್ಮಿಸಲಾಗಿರುವ ಶಿಲಾ ದೇಗುಲಗಳ ಲೋಕಾರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಾಗುವ ಕಾಲ, ಸಮವಸ್ತ್ರ ಧರಿಸಿ ಶಾಲೆಗಳಿಗೆ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲಿ, ಭಾವೈಕ್ಯತೆ ಬದುಕುವ ಮೂಲಕ ಸಮಾನತೆ ಕಾಪಾಡಬೇಕಿದೆ, ಸಹಪಂಕ್ತಿ ಭೋಜನ ಕೆಲ ಮಠಾಧೀಶರ ಮಾತಿಗೆ ಸೀಮಿತವಾಗದೆ ಆಚರಣೆ ಬರುವಂತಾಗಬೇಕಿದೆ, ಈ ನಿಟ್ಟಿನಲ್ಲಿ ಧರ್ಮದರ್ಶಿಗಳು, ಮಠಾಧೀಶರು, ಚಿಂತಕರು ಚಿಂತಿಸಬೇಕಿದೆ, ಭಾವೈಕ್ಯತೆ ಬಿತ್ತುವ ಕಾರ್ಯದಲ್ಲಿ ಸಮಾಜದ ಎಲ್ಲರೂ ಕೈ ಜೋಡಿಸಬೇಕಿದೆ, ಸಮ ಸಮಾಜದ ಪರಿಕಲ್ಪನೆ ಸಾಕಾರಗೊಳ್ಳಬೇಕಿದೆ ಎಂದರು.
ಸಾವು ಬರುವ ಮುನ್ನ ಸತ್ಕಾರ್ಯ ಮಾಡುವ ಮೂಲಕ ಮನುಷ್ಯ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು, ಅನ್ನ ಕ್ಷಣಿಕ ತೃಪ್ತಿ ನೀಡಿದರೆ, ವಿದ್ಯೆಗೆ ಇಡೀ ಜೀವನವನ್ನೇ ಸಂತೃಪ್ತಗೊಳಿಸುವ ಶಕ್ತಿ ಇದೆ, ಶಿಕ್ಷಣವೇ ಶ್ರೇಷ್ಠ ಎಂಬುದನ್ನು ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಮತ್ತು ನಾರಾಯಣ ಗುರುಗಳು ಸೇರಿದಂತೆ ಅನೇಕ ಮಹಾತ್ಮರು ಪ್ರತಿಪಾದಿಸಿದ್ದಾರೆ, ಮುನೇಶ್ವರ ನಗರದ ಸಂಸ್ಥಾಪಕರಾದ ಶಿವಯ್ಯನವರು ಭಕ್ತಿ ಮತ್ತು ಜ್ಞಾನವನ್ನು ಒಟ್ಟಾಗಿ ಸೇರಿಸುವ ಪ್ರಯತ್ನ ನಡೆಸಿರುವುದು ಶ್ಲಾಘನೀಯ, ಭವಿಷ್ಯತ್ತಿನಲ್ಲಿ ಮುನೇಶ್ವರ ನಗರದಲ್ಲಿ ತ್ರಿವಿಧ ದಾಸೋಹ ನಡೆಯುವ ಮೂಲಕ ಪವಿತ್ರ ಕ್ಷೇತ್ರವಾಗಿ ಕಂಗೊಳಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಉಳ್ಳವರೆಲ್ಲರಲ್ಲೂ ಸಮಾಜಮುಖಿ ಚಿಂತನೆಗಳು ಬರಲು ಸಾಧ್ಯವಿಲ್ಲ, ನಿವೃತ್ತ ಅಧಿಕಾರಿ ಶಿವಯ್ಯನವರು ಸಮಾಜಕ್ಕೆ ಶಿಕ್ಷಣ ನೀಡುವ ಮಹದಾಸೆಯಿಂದ ಶಿಕ್ಷಣ ಸಂಸ್ಥೆ ತೆರೆದಿದ್ದಾರೆ, ಇದೀಗ ಮುನೇಶ್ವರ ಸ್ವಾಮಿ ಸೇರಿದಂತೆ ವಿವಿಧ ದೇವರಿಗೆ ನೂತನ ಶಿಲಾ ದೇಗುಲ ನಿರ್ಮಾಣ ಮಾಡುವ ಮೂಲಕ ಧಾರ್ಮಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿರುವುದು ಶ್ಲಾಘನೀಯ, ಶಿವಯ್ಯನವರು ಕುಟುಂಬದವರ ಸಮಾಜಮುಖಿ ಚಿಂತನೆಗಳು ಫಲಪ್ರದವಾಗಲಿ ಎಂದರು.
ಕ್ಷೇತ್ರ ಸಂಸ್ಥಾಪಕ ಸಿ.ಎ.ಶಿವಯ್ಯ ಮಾತನಾಡಿ ನಮ್ಮ ಪೂರ್ವಿಕರ ಆಶಯದಂತೆ ಶ್ರೀಮುನೀಶ್ವರ, ಶನೀಶ್ವರ, ಗಣಪತಿ ಸೇರಿದಂತೆ ವಿವಿಧ ದೇಗುಲಗಳ ಸತತ 13 ವರ್ಷಗಳ ಪರಿಶ್ರಮದ ಫಲವಾಗಿ ಲೋಕಾರ್ಪಣೆಗೊಳ್ಳುತ್ತಿವೆ, ಈ ಸತ್ಕಾರ್ಯದ ಹಿಂದೆ ಅನೇಕ ಮಠಾಧೀಶರು, ಧರ್ಮದರ್ಶಿಗಳ, ಅನೇಕ ಹಿತೈಷಿಗಳ ಆಶೀರ್ವಾದವಿದೆ, ಈಗಾಗಲೇ ಶ್ರೀಮಠದ ವತಿಯಿಂದ ನಿತ್ಯ ದಾಸೋಹ ನಡೆಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಯಾತ್ರಿ ನಿವಾಸ, ಗ್ರಂಥಾಲಯ, ವೃದ್ಧಾಶ್ರಮ, ಅನಾಥಶ್ರಮ ಸೇರಿದಂತೆ ಅನೇಕ ಕಾರ್ಯ ಕೈಗೆತ್ತುಕೊಳ್ಳಲಾಗುವುದು ಎಂದರು.
ವೇದಿಕೆಯಲ್ಲಿ ಮಾಜಿ ಜಿಪಂ ಸದಸ್ಯರಾದ ಕೆಂಚಮಾರಯ್ಯ, ಹನುಮಂತಯ್ಯ, ಕ್ಷೇತ್ರ ಗೌರವ ಸಂಸ್ಥಾಪಕ ಸಿ.ಎ.ರಂಗಯ್ಯ, ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ, ನರಸೀಯಪ್ಪ, ನಿವೃತ್ತ ಪ್ರಾಧ್ಯಾಪಕ ಹೊನ್ನೇಬಾಗಿ ಬಸವರಾಜು, ಎಪಿಎಂಸಿ ಅಧ್ಯಕ್ಷ ನರಸಿಂಹ, ಸದಸ್ಯ ವಿ.ಟಿ.ವೆಂಕಟರಾಮ್‌, ಟ್ರಸ್ಟ್ ನ ಕಾರ್ಯದರ್ಶಿ ಧನಲಕ್ಷ್ಮೀಶಿವಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!