ಗ್ರೇಡ್ ನೆಪದಲ್ಲಿ ರೈತರಿಗೆ ಕಿರುಕುಳ ಸಹಿಸಲ್ಲ

ತಾರತಮ್ಯ ಮಾಡದೆ ರಾಗಿ ಖರೀದಿಸಿ- ಅಧಿಕಾರಿಗಳಿಗೆ ಡಾ.ರಂಗನಾಥ್‌ ಸೂಚನೆ

166

Get real time updates directly on you device, subscribe now.

ಕುಣಿಗಲ್‌: ಗ್ರೇಡ್‌ ನೆಪದಲ್ಲಿ ರೈತರಿಗೆ ಕಿರುಕುಳ ನೀಡಿದರೆ ಅಧಿಕಾರಿಗಳು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಡಾ.ರಂಗನಾಥ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ರಾಗಿ ಖರೀದಿ ಕೇಂದ್ರ ಕಾರ್ಯ ನಿರ್ವಹಣೆ ಮಾಡುತ್ತಿದೆ, ಈಗಾಗಲೆ ನೋಂದಣಿ ಮಾಡಿಸಿಕೊಂಡಿರುವ ರೈತರು ಕೇಂದ್ರಕ್ಕೆ ರಾಗಿ ಹಾಕಲು ಬಂದಿದ್ದು, ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದ ಬಗ್ಗೆ ಶಾಸಕರಿಗೆ ದೂರವಾಣಿ ಕರೆ ಮೂಲಕ ದೂರಿದ್ದರು. ರೈತರ ದೂರಿನ ಮೇರೆಗೆ ಗುರುವಾರ ಖರೀದಿ ಕೇಂದ್ರಕ್ಕೆ ದಿಡೀರ್‌ ಭೇಟಿ ನೀಡಿದ ಶಾಸಕರಿಗೆ ರೈತರು ದೂರಿನ ಸರಮಾಲೆಯನ್ನೆ ಮುಂದಿಟ್ಟರು, ಖರೀದಿ ಕೇಂದ್ರಕ್ಕೆ ರಾಗಿ ತರುವ ರೈತರ ಸರದಿಯಂತೆ ಸರಿಯಾಗಿ ಖರೀದಿ ಮಾಡುವುದಿಲ್ಲ, ಗ್ರೇಡ್‌ ಸರಿ ಇಲ್ಲ ಎಂಬ ನೆಪ ಒಡ್ಡುತ್ತಾರೆ, ಮಾಮೂಲು ನೀಡಿದರೆ ಗ್ರೇಡ್‌ ಯಾವುದು ನೋಡುವುದಿಲ್ಲ, ಇದರಿಂದ ತುಂಬಾ ತೊಂದರೆಯಾಗುತ್ತಿದೆ, ರೈತರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳುವುದಿಲ್ಲ, ಸಣ್ಣ ಹಿಡುವಳಿದಾರರು ಇನ್ನು ಬಹಳಷ್ಟು ಮಂದಿ ಇದ್ದಾರೆ, ಅವರೆಲ್ಲರಿಗೂ ರಾಗಿ ಖರೀದಿ ಖರೀದಿಗೆ ನೋಂದಣಿ ಮಾಡಲು ಅವಕಾಶ ನೀಡಬೇಕೆಂದರು.
ಸ್ಥಳಕ್ಕೆ ಆಗಮಿಸಿದ ದೊಡ್ಡ ಹಿಡುವಳಿದಾರರು ನಾವು ರಾಗಿ ಬೆಳೆದಿದ್ದೇವೆ, ಈಗ ಎರಡು ಎಕರೆ ಇರುವ ಸಣ್ಣ ಹಿಡುವಳಿದಾರರ ಗುರುತಿಸಿ ಎಕರೆಗೆ ಹತ್ತು ಕ್ವಿಂಟಾಲ್‌ನಂತೆ 20 ಕ್ವಿಂಟಾಲ್‌ ಖರೀದಿ ಮಾಡಲಾಗುತ್ತಿದೆ, ದೊಡ್ಡ ಹಿಡುವಳಿದಾರರು ಏನು ಮಾಡಬೇಕು, ನಮಗೇಕೆ ಅನ್ಯಾಯ ಮಾಡುತ್ತಿದ್ದೀರಿ, ನಾವು ಬೆಳೆದ ರಾಗಿ ಖರೀದಿ ಮಾಡಿ ಎಂದು ಆಗ್ರಹಿಸಿದರು.
ರೈತರನ್ನು ಸಮಾಧಾನಗೊಳಿಸಿದ ಶಾಸಕರು, ಗ್ರೇಡ್‌ ನೆಪದಲ್ಲಿ ರೈತರಿಗೆ ಶೋಷಣೆ ಮಾಡಿದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು, ಖರೀದಿ ಕೇಂದ್ರ ಪ್ರಾರಂಭದಲ್ಲೆ ಈ ಬಗ್ಗೆ ಗ್ರೇಡರ್‌ಗಳಿಗೆ ಸೂಕ್ತ ಸೂಚನೆ ನೀಡಲಾಗಿತ್ತು, ನೀಡಿರುವ ಸೂಚನೆ ಪಾಲನೆ ಮಾಡಿ ಎಂದರು.
ದೊಡ್ಡಹಿಡುವಳಿದಾರರು ಸೇರಿದಂತೆ ಬಾಕಿ ಇರುವ ಸಣ್ಣ ಹಿಡುವಳಿದಾರರ ರಾಗಿ ಖರೀದಿ ನೋಂದಣಿ ನಿಟ್ಟಿನಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ಶೀಘ್ರದಲ್ಲೆ ಪೂರಕ ಕ್ರಮ ಕೈಗೊಳ್ಳಲು ಶ್ರಮಿಸುತ್ತೇನೆ ಎಂಬ ಭರವಸೆ ನೀಡಿ, ಖರೀದಿ ಕೇಂದ್ರದಲ್ಲಿ ರೈತರಿಗೆ ಅಗತ್ಯವಾದ ಮೂಲಭೂತ ಸೌಕರ್ಯ ಒದಗಿಸುವಂತೆ ಸೂಚನೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!