ತುಮಕೂರು: ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಹಾಗೂ ಮತ್ತಿತರ ಅನೈತಿಕ ಚಟುವಟಿಕೆಗಳಿಗೆ ಬಡ ಹೆಣ್ಣು ಮಕ್ಕಳನ್ನೇ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಬಾಲಭವನದಲ್ಲಿ ಏರ್ಪಡಿಸಿದ್ದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಕುರಿತಂತೆ ಕ್ರಮಬದ್ಧ ಕಾರ್ಯ ವಿಧಾನ ಮಾರ್ಗಸೂಚಿಗಳ ಬಗ್ಗೆ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, 21ನೇ ಶತಮಾನದ ನಾಗರಿಕ ಸಮಾಜದಲ್ಲಿಯೂ ಮಹಿಳೆಯರು ಮತ್ತು ಮಕ್ಕಳನ್ನು ಅನೈತಿಕ ಚಟುವಟಿಕೆಗಳಿಗೆ ಬಲವಂತವಾಗಿ ದೂಡುವ ಪರಿಸ್ಥಿತಿಯಲ್ಲಿ ನಾವಿರುವುದು ಶೋಚನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಮಹಿಳೆಯರು ತಮಗೆ ಅರಿವಿಲ್ಲದೆಯೇ ಇಂತಹ ಸಮಸ್ಯೆಗಳಿಗೆ ಸಿಲುಕಿ ಕೊಳ್ಳುತ್ತಾರೆ. ಬಡ ಕುಟುಂಬದ ಹೆಣ್ಣು ಮಕ್ಕಳು ಅಥವಾ ಮಹಿಳೆಯರನ್ನು ಸಣ್ಣ ಪುಟ್ಟ ಆಮಿಷಗಳಿಗೆ ಒಳಗಾಗಿಸಿ, ಉದ್ಯೋಗದ ಭರವಸೆ ಹುಟ್ಟಿಸಿ ಅವರನ್ನು ಮಾರಾಟ ಮಾಡುವುದು, ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ, ಮಹಿಳೆಯರನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ವ್ಯವಸ್ಥಿತ ಜಾಲಗಳು ಮಾಧ್ಯಮ ಮತ್ತು ಆರಕ್ಷಕರಿಗೆ ಸುಳಿವು ಸಿಕ್ಕದಂತೆ ತಮ್ಮ ಕಾರ್ಯ ಸಾಧಿಸುತ್ತಾರೆ ಎಂದರು.
ಹಲವಾರು ಪ್ರಕರಣಗಳಲ್ಲಿ ಸೂಕ್ತ ಸಾಕ್ಷಿಗಳು ದೊರೆಯದ ಕಾರಣ ಕಳ್ಳ ಸಾಗಾಣಿಕೆ ಮಾಡುವ ಮಧ್ಯವರ್ತಿಗಳು ಹಾಗೂ ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ, ಈ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಹಾಗೂ ಸಂಬಂಧಿಸಿದ ಇಲಾಖೆಗಳು ಸಾಕ್ಷ್ಯಗಳ ನಿರ್ವಹಣೆಯ ಬಗ್ಗೆ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, 2015 ರಲ್ಲಿ ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆಗೆ ಬಲಿಯಾದವರಿಗೆ ಪರಿಹಾರ ನೀಡುವ ಉದ್ದೇಶದಿಂದ ಕ್ರಮಬದ್ಧ ಕಾರ್ಯವಿಧಾನ ಮಾರ್ಗಸೂಚಿಗಳ ಯೋಜನೆ ಜಾರಿಗೆ ತರಲಾಯಿತು, ಜನರಿಗೆ ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಬಗ್ಗೆ ಮಾಹಿತಿ ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ, ಭಾರತದಲ್ಲಿ ಲಕ್ಷಾಂತರ ಮಕ್ಕಳು ಕಳ್ಳ ಸಾಗಾಣಿಕೆಗೆ ಬಲಿಯಾಗುತ್ತಿದ್ದರೂ ಕೆಲ ಪ್ರಕರಣ ಮಾತ್ರ ಬೆಳಕಿಗೆ ಬರುತ್ತವೆ ಎಂದರು.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಆರೋಗ್ಯಾಧಿಕಾರಿಗಳು ಹಾಗೂ ಸಾರ್ವಜನಿಕರು ಇಂತಹ ಸಮಸ್ಯೆಗಳತ್ತ ಗಮನ ಹರಿಸಬೇಕು, ಮಕ್ಕಳಿಗೆ ಪ್ರತಿ ಹಂತದಲ್ಲೂ ಶಿಕ್ಷಣ ನೀಡುವ ಮೂಲಕ ಬಡತನ ಕಡಿಮೆ ಮಾಡಬೇಕು, ಮಕ್ಕಳಲ್ಲಿ ಜ್ಞಾನದ ಹಣತೆ ಹಚ್ಚುವ ಮೂಲಕ ಇಂತಹ ಸಮಸ್ಯೆಗಳನ್ನು ದೂರವಿಡಬಹುದಾಗಿದೆ ಎಂದು ತಿಳಿಸಿದರು.
ರಾಜ್ಯ ಉನ್ನತ ಅಧಿಕಾರಿ ಸಮಿತಿ ಹಾಗೂ ಮಾನವ ಕಳ್ಳ ಸಾಗಾಣಿಕೆಯ ಕೋರ್ ಕಮಿಟಿಯ ಸದಸ್ಯ ವಿಲಿಯಮ್ ಕ್ರಿಸ್ಟೋಫರ್ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯಲ್ಲಿ ವಿವಿಧ ರೂಪಗಳಿವೆ, ಭಾರತ ಸಂವಿಧಾನದ 23ನೇ ವಿಧಿಯು ಮನುಷ್ಯನನ್ನು ಬಲವಂತವಾಗಿ ಸಾಗಾಣಿಕೆ, ಕಳ್ಳ ಸಾಗಾಣಿಕೆ ಮಾಡುವುದು ಅಪರಾಧ, ಭಾರತದ ದಂಡ ಸಂಹಿತೆ ಕಲಂ 370ರ ಪ್ರಕಾರ ಶೋಷಣೆ, ಭಯ, ಮೋಸ, ವಂಚನೆ ಮಾಡುವುದು ಜಾಮೀನು ರಹಿತ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ವಿಧಿಯನ್ನು ಉಲ್ಲಂಘಿಸಿದರೆ 7 ವರ್ಷ ಶಿಕ್ಷೆ ಮತ್ತು ಜುಲ್ಮಾನೆ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯವು ಮಕ್ಕಳ ಸಾಗಾಣಿಕೆಯಲ್ಲಿ 2ನೇ ಸ್ಥಾನದಲ್ಲಿರುವುದು ಆತಂಕಕಾರಿ ವಿಷಯ ಎಂದು ಬೇಸರ ವ್ಯಕ್ತ ಪಡಿಸಿದ ಅವರು, ಸುಲಭವಾಗಿ ಹಣಗಳಿಸಲು ಡ್ರಗ್ಸ್, ಅಪಹರಣ, ವೇಶ್ಯಾವಟಿಕೆಗಳಂತಹ ಮಾರ್ಗಗಳನ್ನು ಅನುಸರಿಸುತ್ತಾರೆ. ಮಕ್ಕಳ ಭಿಕ್ಷಾಟನೆ, ಮಹಿಳೆಯರ ಶೋಷಣೆ ಎಲ್ಲಾದರೂ ಕಂಡು ಬರುವ ಮೊದಲೇ ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.
ಮಕ್ಕಳು, ವಯಸ್ಸಿಗೆ ಬಾರದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಸ್ಥಿತಿ ಗತಿಗಳನ್ನು ತಿಳಿದುಕೊಂಡು ಉದ್ಯೋಗ ಮೊದಲಾದ ಆಸೆ ಆಮಿಷಗಳಿಗೆ ಒಳಪಡಿಸುವ ಮೂಲಕ ಮಧ್ಯವರ್ತಿಗಳು ನೇಮಕಾತಿ ಮಾಡಿಕೊಳ್ಳುತ್ತಾರೆ. ನಂತರ ಅವರನ್ನು ಭಯ ಪಡಿಸಿ, ಬಲತ್ಕಾರ ಮಾಡಿ, ಮೋಸ ವಂಚನೆ ಮಾಡುವ ಮೂಲಕ ಸಾಗಾಣಿಕೆ ಅಥವಾ ರವಾನೆ ಮಾಡಿ ಆಶ್ರಯ ನೀಡುವ ಮೂಲಕ ತಮ್ಮ ಸ್ವಾಧೀನಕ್ಕೆ ಪಡೆದು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಮಾನವ ಕಳ್ಳ ಸಾಗಾಣಿಕೆಯಲ್ಲಿ ಜೀತ ಕಾರ್ಮಿಕ ಪದ್ಧತಿಯಂತಹ ದೈಹಿಕ ಶೋಷಣೆ, ವೇಶ್ಯಾವಟಿಕೆಯಂತಹ ಲೈಂಗಿಕ ಶೋಷಣೆ, ಅಂಗಾಂಗಗಳನ್ನು ಮಾರಾಟ ಮಾಡುವ ಮೂಲಕ ಅನೈತಿಕ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಇಂತಹ ಹೀನ ಸ್ಥಿತಿಗಳ ವಿರುದ್ಧ ಹೋರಾಡಲು ಹಲವಾರು ಕಾಯ್ದೆ ಜಾರಿಗೆ ತರಲಾಗಿದ್ದು, ಶೋಷಣೆಗೊಳಗಾದವರು ಭಯ ಪಡದೆ ಕಾನೂನಿನ ನೆರವು ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್‌ಗಳನ್ನು ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್ ಎಂ.ಎಸ್, ಶಿವಕುಮಾರಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ಹಾಗೂ ಬಾಲ ಮಂದಿರದ ಮಕ್ಕಳು ಹಾಜರಿದ್ದರು.
Get real time updates directly on you device, subscribe now.
Prev Post
Comments are closed.