ಸರ್ಕಾರ ರೈತ ವಿರೋಧಿ ಕಾಯ್ದೆ ವಾಪಸ್‌ ಪಡೆಯಲಿ

ಫೆ.14ಕ್ಕೆ ರೈತ ಸಂಘದಿಂದ ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ

269

Get real time updates directly on you device, subscribe now.

ತುಮಕೂರು: ಕರ್ನಾಟಕ ಸರಕಾರ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ರೈತ ವಿರೋಧಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಫೆಬ್ರವರಿ 14 ರ ಸೋಮವಾರ ಬೆಳಗ್ಗೆ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಅವರ ನೇತೃತ್ವದಲ್ಲಿ ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದಪಟೇಲ್‌ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರಕಾರ ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ರೈತರ 11 ತಿಂಗಳ ನಿರಂತರ ಹೋರಾಟಕ್ಕೆ ಮಣಿದು ವಾಪಸ್‌ ಪಡೆದಿದೆ, ಆದರೆ ರಾಜ್ಯ ಸರಕಾರ ಮಾತ್ರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಮೀನಾಮೇಷ ಎಣಿಸುತ್ತಿದೆ, ಸರಕಾರದ ಧೋರಣೆ ವಿರುದ್ಧ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರೈತ ವಿರೋಧಿ ಕಾಯ್ದೆಗಳ ವಾಪಸ್‌ ಪಡೆಯುವ ನಿಟ್ಟಿನಲ್ಲಿ ಕಾನೂನು ಸಚಿವರು ಉದ್ಧಟತನ ಹೇಳಿಕೆ ನೀಡುತ್ತಿದ್ದಾರೆ, ಇದು ಸರಿಯಾದ ನಡವಳಿಕೆಯಲ್ಲ, ಇದನ್ನು ನೋಡಿದರೆ ಕೇಂದ್ರ ಸರಕಾರ ಮತ್ತೊಮ್ಮೆ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಹುನ್ನಾರ ನಡೆಸುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ, ಬೆಳಗಾಂ ಅಧಿವೇಶನದಲ್ಲಿ ಮುಖ್ಯಮಂತ್ರಿಯವರ ಫೆಬ್ರವರಿಯಲ್ಲಿ ನಡೆಯುವ ಅಧಿವೇಶನದಲ್ಲಿ ವಾಪಸ್‌ ಪಡೆಯುವ ಭರಸವೆ ನೀಡಿದ್ದರು, ಆದರೆ ಅಧಿವೇಶನದ ಅಜೆಂಡಾದಲ್ಲಿ ಕೃಷಿ ಕಾಯ್ದೆಗಳ ಬಗ್ಗೆ ಪ್ರಾಸ್ತಾಪಿಸಿಲ್ಲ, ಹಾಗಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಸರಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸಿದ್ದರೂ ಹಲವು ಗೊಂದಲ ಮುಂದುವರೆದಿವೆ, ಕೇವಲ 15 ಕ್ವಿಂಟಾಲ್‌ ರಾಗಿ ಖರೀದಿಗೆ ಮಾತ್ರ ಸಿಮೀತಗೊಳಿಸಲಾಗಿದೆ, ಮೂರು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರ ರಾಗಿ ಖರೀದಿ ಮಾಡುತ್ತಿಲ್ಲ, ಹೀಗೆ ರೈತರನ್ನು ವಿಂಗಡಿಸುವುದು ಸರಿಯಲ್ಲ, ಇದು ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರವಾಗಿದೆ, ಹಾಗಾಗಿ ರೈತರು ಬೆಳೆದ ಅಷ್ಟು ರಾಗಿ ಕೊಳ್ಳಬೇಕೆಂಬುದು ರೈತ ಸಂಘದ ಆಗ್ರಹವಾಗಿದೆ ಎಂದು ಆನಂದ್‌ ಪಟೇಲ್‌ ತಿಳಿಸಿದರು.
ಹೈನುಗಾರರು ಹೆಚ್ಚು ಸಂಕಷ್ಟದಲ್ಲಿದ್ದಾರೆ, ಗ್ರಾಹಕರಿಗೆ ಪ್ರತಿ ಲೀಟರ್‌ಗೆ 45 ರೂ. ಪಡೆಯುತ್ತಿದ್ದಾರೆ, ಆದರೆ ಹೈನುಗಾರರಿಗೆ ಒಂದು ಲೀಟರ್‌ಗೆ 25 ರೂ. ನೀಡಲಾಗುತ್ತಿದೆ, ಕನಿಷ್ಠ 35 ರೂ. ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ, ಹಾಗೆಯೇ ರಾಸುಗಳಿಗೆ ನೀಡುವ ಹಿಂಡಿ, ಬೂಸಾ ಬೆಲೆ ಕಡಿತಗೊಳಿಸಬೇಕೆಂಬುದು ರೈತ ಸಂಘದ ಆಗ್ರಹವಾಗಿದೆ ಎಂದು ಆನಂದ್‌ ಪಟೇಲ್‌ ತಿಳಿಸಿದರು.
ತುಮಕೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಮತ್ತು ಭದ್ರ ಮೇಲ್ದಂಡೆ ಯೋಜನೆಯ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ, ಎತ್ತಿನಹೊಳೆ ನಾಲಾ ಕಾಮಗಾರಿ ಪೂರ್ಣಗೊಂಡಿದೆ, ಆದರೆ ನೀರು ಸಂಗ್ರಹ ಮಾಡುವ ಜಲ ಸಂಗ್ರಹಾಗಾರವೇ ನಿರ್ಮಾಣವಾಗಿಲ್ಲ, ಆದರೆ ಎಸ್ಸಿಪಿ ಮತ್ತು ಟಿಎಸ್ಸಿಪಿ ಹಣದಲ್ಲಿ ಕಾಂಕ್ರಿಟ್‌ ರಸ್ತೆ ಮಾಡುವ ಮೂಲಕ ಗುತ್ತಿಗೆದಾರರು ಹಣ ಲಪಟಾಯಿಸುತಿದ್ದಾರೆ, ಈ ಎಲ್ಲಾ ಸಮಸ್ಯೆ ಮುಂದಿಟ್ಟುಕೊಂಡು ಫೆಬ್ರವರಿ 14 ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಾಕಲಾಗಿದೆ, ಅಂದು ತುಮಕೂರಿನಿಂದ 1000 ಜನ ಭಾಗವಹಿಸಲಿದ್ದೇವೆ ಎಂದು ತಿಳಿಸಿದರು.
ಹಸಿರು ಸೇನೆ ಮತ್ತು ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಧನಂಜಯ್‌ ಆರಾಧ್ಯ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಆನಾವೃಷ್ಟಿಯಿಂದ ಸಾಕಷ್ಟು ಬೆಲೆ ಹಾನಿಯಾಗಿದೆ, ಆದರೆ ಇದುವರೆಗೂ ಪರಿಹಾರ ನೀಡಿಲ್ಲ, ಬದಲಾಗಿ ಕೇಸರಿ ಶಾಲು, ಹಿಜಾಬ್‌ ಹೆಸರಿನಲ್ಲಿ ಜನರನ್ನು ಬೇರೆಡೆಗೆ ಸೆಳೆಯುತ್ತಿದೆ, ಈ ಎಲ್ಲಾ ವಿಷಯಗಳನ್ನಿಟ್ಟುಕೊಂಡು ಹೋರಾಟ ರೂಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಘಟಕಗಳ ಅಧ್ಯಕ್ಷ ಕೋಡಿಹಳ್ಳಿ ಸಿದ್ದರಾಜು, ಅನಿಲ್‌ಕುಮಾರ್‌, ಲಕ್ಕಣ್ಣ, ರುದ್ರೇಶಗೌಡ, ಪುಟ್ಟರಾಜು, ವೆಂಕಟೇಶಗೌಡ, ಶಿವಕುಮಾರ್‌, ಕಾಂತರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!