ತುಮಕೂರು ಜಿಲ್ಲೆ ಅಭಿವೃದ್ಧಿಗೆ ಶ್ರಮಿಸಿರುವೆ

ಬಡವರ ಮುಖದಲ್ಲಿ ಸಂತೋಷ ಕಾಣುವುದು ಮುಖ್ಯ: ಮೋಹನ್ ರಾಜ್

218

Get real time updates directly on you device, subscribe now.

ತುಮಕೂರು: ನಿರಂತರ ಜನರ ಹೋರಾಟ ಜಿಲ್ಲೆಯ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಸಹಕಾರದಿಂದ ನಾನು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಹಲವಾರು ಗುರುತರವಾದ ಕೆಲಸ ಮಾಡಿದ್ದು ಏಷ್ಯಾದಲ್ಲೇ ದೊಡ್ಡ ಫುಡ್‌ಪಾರ್ಕ್‌, ಗುಬ್ಬಿಯ ಹತ್ತಿರ ಹೆಚ್‌ಎಎಲ್‌ ಘಟಕ ನಿರ್ಮಾಣ, ಪಾವಗಡದಲ್ಲಿ ಸೋಲಾರ್‌ ಪಾರ್ಕ್‌, ತುಮಕೂರು ದಾವಣಗೆರೆ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಮಾಡುವುದರೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಪೂರಕ ಕೆಲಸ ಮಾಡಲಾಯಿತು ಎಂದು ಐಎಎಸ್‌ ಅಧಿಕಾರಿ ಕೆ.ಪಿ.ಮೋಹನ್‌ರಾಜ್‌ ಎಂದರು.

ನಗರದ ಮಾರಿಯಮ್ಮ ನಗರ ವಸತಿ ಸಮುಚ್ಛಯಗಳ ಸಾಮೂಹಿಕ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅಲೆಮಾರಿ,ಅರೆಅಲೆಮಾರಿ, ತಳ ಸಮುದಾಯಗಳಿಗೆ ನನ್ನ ಅವಧಿಯಲ್ಲಿ 250ಕ್ಕೂ ಹೆಚ್ಚು ಎಕರೆ ಭೂಮಿ ನೀಡಲಾಯಿತು ಹಾಗೂ ಆ ಜನರಿಗೆ ಆಧಾರ್‌ ಕಾರ್ಡ್‌ ರೇಷನ್‌ ಕಾರ್ಡ್‌ ದೊರಕಿಸಿಕೊಡಲಾಯಿತು, ಇನ್ನು ಕೊಳಚೆ ಪ್ರದೇಶಗಳ ವಿಚಾರದಲ್ಲಿ ದಿಬ್ಬೂರಿನ 1200 ಮನೆಗಳ ಹಂಚಿಕೆಗೆ ಚಾಲನೆ ನೀಡಲಾಯಿತು, ಹಾಗೆ ಬಹಳ ಕ್ಲಿಷ್ಟಕರವಾದ ಮಾರಿಯಮ್ಮ ನಗರ ಪುನರ್‌ ವಸತಿಯನ್ನು ಕಾನೂನಿನ ಸಹಕಾರದೊಂದಿಗೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಪುನರ್‌ ವಸತಿ ಕಲ್ಪಿಸಲು ಸಾಧ್ಯವಾಯಿತು, ಹಾಗಾಗಿ ಇಲ್ಲಿನ ಜನರ ನಿರಂತರ ಚಳವಳಿಯಿಂದ ಮಾರಿಯಮ್ಮ ನಗರ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದರು.
ತುಮಕೂರು ಕೊಳಗೇರಿ ಸಮಿತಿ ನಿರಂತರ ಹೋರಾಟದಿಂದ ಸ್ಲಂ ಜನರ ಹಲವಾರು ಸಮಸ್ಯೆಗಳನ್ನು ಖುದ್ದು ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ದೊರಕಿಸಲಾಯಿತು, ಪ್ರಾಮಾಣಿಕತೆಯಿಂದ ಸಂಘಟನೆ ನಮ್ಮ ಗಮನ ಸೆಳೆದಿದಕ್ಕೆ ಜನರಿಗೆ ಭೂಮಿ ವಸತಿ ಮತ್ತು ಸರ್ಕಾರಿ ಸೌಲಭ್ಯ ದೊರಕಿಸಿಕೊಡಲು ಸಾಧ್ಯವಾಯಿತು, ಈ ಪ್ರಯತ್ನದಲ್ಲಿ ಮಾರಿಯಮ್ಮ ನಗರ ಯುವಕರ ಸಂಘ ಹಾಗೂ ಹಿರಿಯರ ತ್ಯಾಗ ಮುಂದಿನ ಯುವ ಪೀಳಿಗೆಗೆ ಅನುಕೂಲ ಕಲ್ಪಿಸಿದೆ, ನಗರದ ಮಧ್ಯದಲ್ಲಿರುವ ಈ ಪ್ರದೇಶವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವ ಜೊತೆಗೆ ನಿರ್ವಹಣೆ ಮಾಡಬೇಕು, ನಮ್ಮ ಕೂಲಿ ಕೆಲಸಗಳನ್ನು ಮೇಲ್ದರ್ಜೆಗೇರಿಸಿಕೊಂಡು ನಾವು ಆರ್ಥಿಕವಾಗಿ ಬದಲಾವಣೆಗೊಳ್ಳಬೇಕು, ಬಡವರ ಮುಖದಲ್ಲಿ ಸಂತೋಷ ಕಾಣುವುದು ಬಹಳ ಮುಖ್ಯ, ನನಗೆ ಈ ಕೆಲಸ ತೃಪ್ತಿ ತಂದಿದೆ ಎಂದರು.
ಶಾಸಕ ಜ್ಯೋತಿಗಣೇಶ್‌ ಮಾತನಾಡಿ ಮಾರಿಯಮ್ಮ ನಗರ ಸ್ಮಾರ್ಟ್‌ಸಿಟಿಯಲ್ಲಿ ಅಭಿವೃದ್ಧಿ ಹೊಂದಲು ಮೋಹನ್‌ರಾಜ್‌ ಕಾರಣಕರ್ತರು, ಇದಕ್ಕೆ ಸಂಘಟನೆಯ ನಿರಂತರ ಒತ್ತಡವಿದೆ, ಕುರಿಪಾಳ್ಯದ ನಾಗರಿಕರು ಈ ಯೋಜನೆಯನ್ನು ಒಪ್ಪಿದ್ದರೆ ಅವರಿಗೆ ಈ ಯೋಜನೆ ಹೋಗುತ್ತಿತ್ತು, ಮುಂದಿನ ದಿನಗಳಲ್ಲಿ ಈ ನಗರಕ್ಕೆ ಕುಡಿಯುವ ನೀರಿನ ಘಟಕ, ಈಗಿರುವ ಮೂಲ ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಇನ್ನಿತರೆ ಕೆಲಸ ಮಾಡಲಾಗುವುದು, ಉಳಿದ ಜಾಗವನ್ನು ನಗರಪಾಲಿಕೆಗೆ ಹಸ್ತಾಂತರಿಸಲಾಗುವುದು ಎಂದರು.
ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ.ಪಿ.ಮಹೇಶ್‌ ಮಾತನಾಡಿ, ಈ ಯೋಜನೆ ಇಲ್ಲಿನ ಜನರಿಗೆ ಸಿಗಬಾರದೆಂದು ಎಷ್ಟೆಲ್ಲಾ ಪ್ರಯತ್ನವನ್ನು ಬೇರೆಯವರು ಬಯಸಿದರು ದೇವರ ಆಶೀರ್ವಾದ ಸಂಘಟನೆಯ ಹೋರಾಟ ಯುವಕರ ಛಲದಿಂದ ಹಾಗೂ ಡಾ.ಜಿ.ಪರಮೇಶ್ವರ್‌ ಅವರ ಆಸಕ್ತಿಯಿಂದ ಯೋಜನೆ ಈಡೇರಿದೆ ಎಂದರು.
ಕಾರ್ಮಿಕ ಮುಖಂಡ ಸೈಯದ್‌ ಮುಜೀಬ್‌ ಮಾತನಾಡಿ ಜನರ ನಿರಂತರ ಚಳವಳಿಯಿಂದ ಅಧಿಕಾರಿಗಳ ಗಮನ ಸೆಳೆಯಲು ಯಶಸ್ವಿಯಾಗಿದ್ದು ಕೊಳಗೇರಿ ಸಮಿತಿಯ ಗುರಿ ಮುಟ್ಟುವ ಕೆಲಸ ಸಫಲವಾಗಿದ್ದು ಎಷ್ಟೋ ಹಿರಿಯರು ಜೀವ ಕಳೆದುಕೊಂಡು ಈ ಪ್ರತಿಫಲವನ್ನು ನೀಡಿದ್ದಾರೆ, ಅವರ ತ್ಯಾಗಕ್ಕೆ ನಾವು ಋಣಿಯಾಗಬೇಕೆಂದರು.
ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಸ್ಮಾರ್ಟ್‌ಸಿಟಿ ಎಂ.ಡಿ ರಂಗಸ್ವಾಮಿ, ಪಾಲಿಕೆ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ಮಂಜುನಾಥ್‌, ಹಿರಿಯ ಚಿಂತಕ ಕೆ.ದೊರೈರಾಜ್‌, ಸ್ಲಂಜನಾಂದೋಲನ ಕರ್ನಾಟಕದ ಸಂಚಾಲಕ ಎ.ನರಸಿಂಹಮೂರ್ತಿ, ಕೆಪಿಸಿಸಿ ಮುಖಂಡ ಎಕ್ಬಾಲ್‌ಅಹ್ಮದ್‌, ದಸಂಸ ಮುಖಂಡರಾದ ಬಿ.ಹೆಚ್‌ ಗಂಗಾಧರ್‌, ಪಿ.ಎನ್‌.ರಾಮಯ್ಯ, ಮಾದಿಗ ದಂಡೋರದ ಮುಖಂಡ ಪಾವಗಡ ಶ್ರೀರಾಮ್‌,ಆಟೋ ಶಿವರಾಜ್‌,ರಂಜನ್‌, ಅರುಣ್‌.ಟಿ.ಜಿ, ತಿರುಮಲಯ್ಯ, ಕಣ್ಣನ್‌, ಮುರುಗ, ಗೋವಿಂದ್‌ ಸ್ವಾಮಿ, ಕೃಷ್ಣ, ಮಾಧವ, ರಾಜ, ಚಕ್ರಪಾಣಿ, ಮಾರಿ, ಕಾಶಿರಾಜ್‌, ಶೆಟ್ಟಾಳಯ್ಯ, ಶಂಕ್ರಯ್ಯ, ದೊಡ್ಡರಂಗಯ್ಯ, ಜಾಬೀರ್‌, ಶಾರದಮ್ಮ, ಮಹಾದೇವಮ್ಮ, ಸುಧಾ, ನಿರ್ಮಲ, ಮಂಗಳಮ್ಮ, ಲಕ್ಷ್ಮೀಪತಿ, ಹನುಮಕ್ಕ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!