ಟೆಂಡರ್‌ ಗಿಟ್ಟಿಸಿಕೊಳ್ಳಲು ನಡೆಯುತ್ತಿದೆ ತಂತ್ರಗಾರಿಕೆ

ನಿಗದಿ ದರಕ್ಕಿಂತ ಕಡಿಮೆ ದರ ನಮೂದು- ಕಾಮಗಾರಿ ಗುಣಮಟ್ಟ ಮಾಯ!

240

Get real time updates directly on you device, subscribe now.

ಕುಣಿಗಲ್‌: ದೇಶ ಮತ್ತು ರಾಜ್ಯದಲ್ಲಿ ಅಗತ್ಯ ವಸ್ತು ಸೇರಿದಂತೆ ಕಟ್ಟಡ ಕಾಮಗಾರಿ ವಸ್ತುಗಳ ಬೆಲೆ ಗಗನಮುಖಿಯಾಗಿದೆ, ಬೆಲೆ ಏರಿಕೆ ಖಂಡಿಸಿ ಹಲವು ಪ್ರತಿಭಟನೆ ನಡೆಯುತ್ತಿವೆ, ಆದರೆ ಸರ್ಕಾರದ ಕೆಲ ಕಾಮಗಾರಿಗಳ ಟೆಂಡರ್‌ ಪಡೆಯಲು ನಿಗದಿ ಮಾಡಿದ ದರಕ್ಕಿಂತ ಕಡಿಮೆ ದರ ನಮೂದು ಮಾಡಿ ಕೆಲಸ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ಹಲವು ಪ್ರಶ್ನೆ ಹುಟ್ಟುಹಾಕಿದೆ.

ಪುರಸಭೆಯು ಸೇರಿದಂತೆ ವಿವಿಧ ಇಲಾಖೆಗಳ ವಾರ್ಷಿಕ ಹಲವು ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ನಡೆಸುತ್ತಿದ್ದು, ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಪರವಾನಗಿ ಪಡೆದ ಗುತ್ತಿಗೆದಾರರು, ಸರ್ಕಾರವು ವಿವಿಧ ತಾಂತ್ರಿಕ ಸಮಿತಿ ಅನುಮೋದಿಸಿದ ಟೆಂಡರ್‌ ದರಕ್ಕಿಂತ ಕನಿಷ್ಠ ಶೇ.5 ರಿಂದ ಶೇ.32 ರಷ್ಟು ಕಡಿಮೆ ದರ ನಮೂದು ಮಾಡಿ ಟೆಂಡರ್‌ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ನೋಡಿದರೆ ಬೆಲೆ ಏರಿಕೆಯ ಸಮಸ್ಯೆಗೆ ಸವಾಲೊಡ್ಡುವಂತಿದೆ, ಉದಾಹರಣೆಗೆ ಕುಣಿಗಲ್‌ ಪುರಸಭೆಯ ವಾರ್ಡ್‌ ಒಂದರಲ್ಲಿ ಸಿಸಿ ಚರಂಡಿ ನಿರ್ಮಾಣಕ್ಕೆ ಆರು ಲಕ್ಷ ರೂ. ಮೊತ್ತ ನಿಗದಿ ಮಾಡಿ ಟೆಂಡರ್‌ ಕರೆಯಲಾಗಿದೆ. ಒಟ್ಟಾರೆ ಆರು ಲಕ್ಷ ರೂ ಮೊತ್ತದ ಟೆಂಡರ್‌ ಪಡೆಯಲು 12 ಮಂದಿ ಗುತ್ತಿಗೆದಾರರು ಟೆಂಡರ್‌ ಹಾಕಿದ್ದು ನಿಗದಿತ ಮೊತ್ತಕ್ಕಿಂತ ಶೇ.32 ರಷ್ಟು ಕಡಿಮೆ ನಮೂದು ಮಾಡಿದೆ, ಅಂದರೆ ಆರು ಲಕ್ಷ ರೂ. ಮೊತ್ತದ ಕಾಮಗಾರಿಯನ್ನು ನಾಲ್ಕು ಲಕ್ಷಕ್ಕೆ ಪೂರ್ಣಗೊಳಿಸುವುದಾಗಿ ನಮೂದು ಮಾಡಿದ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿದ್ದಾರೆ.
ಕಾಮಗಾರಿಗೆ ಆರು ಲಕ್ಷ ರೂಪಾಯಿಗಳನ್ನು ಸರ್ಕಾರದ ವಿವಿಧ ಇಲಾಖೆಯ ತಾಂತ್ರಿಕ ಸಮಿತಿಯ ಸದಸ್ಯರು ನಿಗದಿ ಮಾಡಿದ ದರ ಅನ್ವಯಿಸಿ ಟೆಂಡರ್‌ ಕರೆದಿದ್ದು ಅದೆ ಕಾಮಗಾರಿಯನ್ನು ಗುತ್ತಿಗೆದಾರನೊಬ್ಬ ಕೇವಲ 4.04 ಲಕ್ಷಕ್ಕೆ ಮಾಡುವುದಾಗಿ ಗುತ್ತಿಗೆ ಪಡೆದಿರುವುದು ಸಹಜವಾಗಿ ಹಲವು ಪ್ರಶ್ನೆ ಹುಟ್ಟುಹಾಕಿದೆ, ಕೇವಲ ಸಿಸಿ ಚರಂಡಿ ನಿರ್ಮಾಣವಲ್ಲದೆ ಪೈಪ್‌ಲೈನ್‌ ಕಾಮಗಾರಿಗೆ ಶೇ.27.48 ರಷ್ಟು ಕಡಿಮೆ ಮೊತ್ತಕ್ಕೆ, ಪಂಪು ಮೋಟಾರ್‌ ಅಳವಡಿಕೆಗೆ ಶೇ.9.32 ರಷ್ಟು ಕಡಿಮೆ, ಬೋರ್‌ವೆಲ್‌ ಕೊರೆಯಲು ಶೇ.12.41 ಕಡಿಮೆ ದರ, ಪ್ಲೇವರ್‌ ಬಾಕ್ಸ್ ಅಳವಡಿಸಲು ಶೇ.25.54 ರಷ್ಟು ಕಡಿಮೆ ಮೊತ್ತ ನಮೂದು ಮಾಡಿ ಟೆಂಡರ್‌ ಪಡೆದಿರುವುದು ಕಂಡು ಬಂದಿದೆ. ಪಟ್ಟಣದ ದೊಡ್ಡಪೇಟೆಯ ಮುಖ್ಯರಸ್ತೆಯಲ್ಲಿನ ಸಿಸಿ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರೊಬ್ಬರು ಶೇ.28 ರಷ್ಟು ಕಡಿಮೆ ದರ ನಮೂದು ಮಾಡಿ ಪಡೆದು ಕಾಮಗಾರಿ ನಿರ್ವಹಣೆ ವೇಳೆ ಮೂರನೆ ವಾರ್ಡ್‌ ಸದಸ್ಯರು, ಸ್ವತಃ ಕಂಟ್ರಾಕ್ಟರ್‌ ಆಗಿರುವ ಸದಸ್ಯರಾಮು, ನಿಂತು ಕಾಮಗಾರಿ ಮಾಡಿಸಿದ ಪರಿಣಾಮ ಕಾಮಗಾರಿ ಗುಣಮಟ್ಟದಿಂದ ಕೂಡಿತಾದರೂ ಗುತ್ತಿಗೆ ಪಡೆದವರು ಮಾತ್ರ ಹೈರಾಣಾಗಿ ಗುತ್ತಿಗೆ ಪಡೆದಿರುವ ಇನ್ನು ಕೆಲ ಕೆಲಸಗಳ ಆರಂಭಕ್ಕೆ ಮೀನಾಮೇಷ ಎಣಿಸುವಂತಾಗಿದೆ.
ನಿಗದಿತ ಮೊತ್ತಕ್ಕಿಂತ ಕಡಿಮೆ ದರ ನಮೂದು ಮಾಡಿ ನಿರ್ವಹಿಸುವ ಕಾಮಗಾರಿ ಗುಣಮಟ್ಟದ ಬಗ್ಗೆ ಪರಿಶೀಲನೆಗೆ ಸಮರ್ಪಕವಾಗಿ ಅಧಿಕಾರಿಗಳು ಹೋಗದೆ, ತಪಾಸಣೆ ಮಾಡದೆ ಇರುವುದು, ಕಾಮಗಾರಿ ವೇಳೆ ಇಲಾಖಾಧಿಕಾರಿಗಳು ಹಾಜರಿದ್ದು ನಿಗದಿತ ಪರಿಮಾಣ ಹಾಕಿರುವ ಬಗ್ಗೆ ಖಾತರಿಪಡಿಸದಿರುವುದು, ಕಡಿಮೆ ದರ ನಮೂದಿಸಿ ಎಷ್ಟರ ಮಟ್ಟಿಗೆ ಗುಣಮಟ್ಟ ನಿರ್ವಹಣೆ ಮಾಡುತ್ತಾರೆ ಎಂಬುದು ಅನುಮಾನಾಸ್ಪದವಾಗಿದೆ ಎಂದು ಪುರಸಭೆ ಬಿಜೆಪಿ ಸದಸ್ಯ ನಾಗಣ್ಣ ಆತಂಕ ವ್ಯಕ್ತಪಡಿಸಿದರೆ.
ಶಾಸಕ ಡಾ.ರಂಗನಾಥ್‌, ಸರ್ಕಾರ ಟೆಂಡರ್‌ಗೆ ದರ ನಿಗದಿ ಮಾಡುತ್ತದೆ, ಆದರೂ ಕಡಿಮೆ ದರ ನಮೂದು ಮಾಡಿ ಪಡೆಯುವ ಕಾಮಗಾರಿಯ ಗುಣಮಟ್ಟ ಇತರೆ ವಿಷಯಗಳು ಅಧಿಕಾರಿಗಳ ಪರಿಶೀಲನೆ ಮೇಲೆ ಅವಲಂಬಿತವಾಗಿರುತ್ತದೆ, ನಮ್ಮ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ, ಕಡಿಮೆ ದರ ನಮೂದಿಸಿ ಗುತ್ತಿಗೆ ಪಡೆಯುವ ವ್ಯವಸ್ಥೆ ಬಗ್ಗೆ ಸರ್ಕಾರವೇ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಕಡಿಮೆ ದರ ನಮೂದು ಮಾಡಿ ಕಾಮಗಾರಿ ನಿರ್ವಹಣೆ ಮಾಡುವವರ ಕ್ರಮದಿಂದ ಅಗತ್ಯ ವಸ್ತುಗಳು ಸೇರಿದಂತೆ ಕಟ್ಟಡ ಕಾಮಗಾರಿ ಬೆಲೆ ಏರಿಕೆಯ ಪರಿಣಾಮ ಯಾವುದು ಇಲ್ಲವೋ ಅಥವಾ ಕಾಮಗಾರಿ ಗುಣಮಟ್ಟ ಹೇಗೆ ಎಂಬುದು ಮಾತ್ರ ಚರ್ಚೆಗೆ ಗ್ರಾಸವಾಗಿದೆ.

Get real time updates directly on you device, subscribe now.

Comments are closed.

error: Content is protected !!