ಶಿರಾ: ಶಿರಾ ತಾಲ್ಲೂಕಿನಲ್ಲಿ ಮಿಂಚಿನ ಸಂಚಾರ ಮಾಡುತ್ತಾ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಯಕೆ ಹೊಂದಿರುವುದಾಗಿ ಹೇಳಿಕೊಂಡಿರುವ ಕಾಂಗ್ರೆಸ್ ಯುವ ಮುಖಂಡ ಸಾಸಲು ಸತೀಶ್ ಅನೇಕ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ, ಆ ಮೂಲಕ ಎಲ್ಲರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇದೀಗ ಆಂಧ್ರ ಪ್ರದೇಶದ ಯಾದವ ಮುಖಂಡ ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ರಘುವೀರರೆಡ್ಡಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ, ತಾನು ಶಿರಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ, ಅಲ್ಲದೆ ತಾವು ತೆರೆಯುತ್ತಿರುವ ಜನ ಸಂಪರ್ಕ ಕ್ಷಿಚೇರಿ ಉದ್ಘಾಟನೆಗೂ ಆಹ್ವಾನ ನೀಡಿದ್ದಾರೆ.
ಹೌದು, ಶಿರಾ ನಗರಲ್ಲಿ ಫೆಬ್ರವರಿ 14 ರ ಸೋಮವಾರ ಬೆಳಗ್ಗೆ 11.30 ರಿಂದ 1 ಗಂಟೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ನಗರದ ಹೊರ ವಲಯದಲ್ಲಿರುವ ಕರಿಯಮ್ಮದೇವಿ ದೇವಸ್ಥಾನದ ಬಳಿ ನೂತನ ಜನಸಂಪರ್ಕ ಕಚೇರಿ ಭೂಮಿ ಪೂಜೆ ಏರ್ಪಡಿಸಲಾಗಿದೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುತ್ತಿರುವ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಾಸಲು ಸತೀಶ್ ತಮ್ಮ ನೂತನ ಜನಸಂಪರ್ಕ ಕಚೇರಿ ಭೂಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ ಮಾಜಿ ಎಪಿಸಿಸಿ ಅಧ್ಯಕ್ಷ ಮತ್ತು ಮಜಿ ಸಚಿವ ಎನ್.ರಘುವೀರ್ ರೆಡ್ಡಿ ಆಗಮಿಸಲಿದ್ದಾರೆ, ಅಲ್ಲದೆ ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಸಂಸದ ಸಂತೋಷ್ ಲಾಡ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ, ಅಲ್ಲದೆ ಅಪಾರ ಸಂಖ್ಯೆಯಲ್ಲಿ ಸಾಸಲು ಸತೀಶ್ ಅಭಿಮಾನಿಗಳು, ಅಹಿಂದ ವರ್ಗದ ಮುಖಂಡರು ಈ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ, ಈ ಕಾರ್ಯಕ್ರಮದಿಂದ ಶಿರಾ ಕಾಂಗ್ರೆಸ್‌ನಲ್ಲಿ ಯಾವೆಲ್ಲಾ ಬೆಳವಣಿಗೆ ನಡೆಯಬಹುದು ಎಂಬ ಕುತೂಹಲ ಮೂಡಿದೆ.
ಸಾಸಲು ವೇಗದ ನಡೆ- ಟಿಬಿಜೆಗೆ ಕಿರಿಕಿರಿ
1.5 ಲಕ್ಷದಷ್ಟಿರುವ ಅಹಿಂದ ವರ್ಗಗಳ ಮತಗಳು ಒಗ್ಗೂಡಿಸುವ ಮುನ್ಸೂಚನೆಯಿದ್ದೂ ಈಗಾಗಲೇ ತಾಲ್ಲೂಕಿನಾದ್ಯಂತ ಅಹಿಂದ ವರ್ಗಗಳ ಒಗ್ಗೂಡುವ ಚರ್ಚೆಗೆ ವೇಗ ಹೆಚ್ಚಿದೆ, ಇದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಕಿರಿಕಿರಿ ಉಂಟು ಮಾಡಿದ್ದು ಶಿರಾ ಕ್ಷೇತ್ರದಲ್ಲಿ ಸಾಸಲು ಸತೀಶ್ ಪ್ರವಾಸ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪೂರಕವೆಂಬಂತೆ ಶಿರಾದಲ್ಲಿ ವಾಸ್ತವ್ಯ ಹೂಡಲು ಸಾಸಲು ನೂತನ ಮನೆ ನಿರ್ಮಿಸಲು ಮುಂದಾಗಿರುವುದು ಅಹಿಂದ ವರ್ಗಕ್ಕೆ ಶಕ್ತಿ ಬಂದಂತಾಗಿದೆ. ಅಲ್ಲದೆ ಟಿಬಿಜೆ ವಲಯದಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಸಾಸಲು ಸತೀಶ್ ಇಷ್ಟೆಲ್ಲಾ ವೇಗವಾಗಿ ಕ್ಷೇತ್ರದಲ್ಲಿ ಸಾಗಲು ಮತ್ತು ಪಕ್ಷ ಸಂಘಟನೆಗೆ ಇಳಿದಿರುವ ಹಿಂದೆ ಯಾವೆಲ್ಲಾ ಶಕ್ತಿ ಕೆಸಲ ಮಾಡುತ್ತಿವೆ ಎಂಬ ಯಕ್ಷ ಪ್ರಶ್ನೆಯೂ ಎದುರಾಗಿದೆ. ಒಟ್ಟಾರೆ ಶಿರಾ ಕಾಂಗ್ರೆಸ್‌ನಲ್ಲಿ ದೊಡ್ಡ ಬೆಳವಣಿಗೆಗಳೇ ನಡೆಯುತ್ತಿರುವುದು ಸುಳ್ಳಲ್ಲ.
Comments are closed.