ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ, 100 ಕೋಟಿ ಕೊಡಿ

ಯಜಮಾನರ ಸಮಾವೇಶದಲ್ಲಿ ಸರ್ಕಾರಕ್ಕೆ ತಿಗಳ ಮುಖಂಡರ ಒತ್ತಾಯ

171

Get real time updates directly on you device, subscribe now.

ತುಮಕೂರು: ಕೃಷಿಯನ್ನೇ ನಂಬಿ ಬದುಕುತ್ತಿರುವ ತಿಗಳ ಸಮುದಾಯದ ಕುಲದೈವ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿಯನ್ನು ಸರಕಾರದ ಕಾರ್ಯಕ್ರಮವಾಗಿ ಆಚರಣೆ ಮತ್ತು ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ, 100 ಕೋಟಿ ರೂ. ಅನುದಾನ ಮೀಸಲು ನೀಡಬೇಕೆಂದು ಸಮುದಾಯದ ಮುಖಂಡ ಪ್ರೆಸ್‌ ರಾಜಣ್ಣ ಸರಕಾರ ಒತ್ತಾಯಿಸಿದ್ದಾರೆ.

ನಗರದ ಕೋಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 4 ಕಟ್ಟೆ, 4 ದೇಶ, 80 ಗಡಿ ಯಜಮಾನರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರಕಾರ ಪ್ರತಿ ವರ್ಷ ಮಾರ್ಚ್‌ 28 ರಂದು ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿಯನ್ನು ನಾಡಹಬ್ಬವಾಗಿ ಆಚರಿಸಬೇಕು ಎಂಬುದು ಸಮುದಾಯದ ಬಹುದಿನದ ಬೇಡಿಕೆಯಾಗಿದೆ, ಅಲ್ಲದೆ ಸಮುದಾಯದ ಮಕ್ಕಳ ಸಮಗ್ರ ಅಭಿವೃದ್ಧಿಗೆ ತಿಗಳ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪಿಸಿ, 100 ಕೋಟಿ ರೂ. ಮೀಸಲಿಡಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದರು.
ಈ ವಿಚಾರವನ್ನು 4 ಕಟ್ಟೆ, 4 ದೇಶ ಹಾಗೂ 80 ಗಡಿಗಳ ಯಜಮಾನರು, ಅಣೇಕಾರರು, ಮುದ್ರೆಯವರು, ಯುವ ಜನತೆಗೆ ತಿಳಿಸಿ, ಸರಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ, ಸಮಾವೇಶದಲ್ಲಿ ಶ್ರೀ ಅಗ್ನಿಬನ್ನಿ ರಾಯಸ್ವಾಮಿ ಜಯಂತಿ ಆಚರಣೆಯ ಹಿಂದಿನ ಉದ್ದೇಶವನ್ನು ಹಿರಿಯರು ತಿಳಿಸಿದ್ದಾರೆ, ಅಲ್ಲದೆ ಅಭಿವೃದ್ಧಿ ನಿಗಮದ ಸ್ಥಾಪನೆಯಿಂದ ಜನಾಂಗಕ್ಕೆ ಆಗುವ ಉಪಯೋಗಗಳ ಬಗ್ಗೆಯೂ ತಿಳಿಸಿದ್ದು, ತಮ್ಮ ತಮ್ಮ ಗ್ರಾಮಗಳಲ್ಲಿ ಮಾರ್ಚ್‌ 28 ರಂದು ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಆಚರಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರೆಸ್‌ ರಾಜಣ್ಣ ತಿಳಿಸಿದರು.
ತಿಗಳ ಸಮುದಾಯದ ಮುಖಂಡ ಟಿ.ಎಲ್‌.ಆಂಜನೇಯ ಪ್ರಾಸ್ತಾವಿಕವಾಗಿ ಮಾತನಾಡಿ, ಇದುವರೆಗೂ ತಿಗಳ ಸಮುದಾಯಕ್ಕೆ ಯಾವುದೇ ರಾಜಕೀಯ ಪ್ರಾತಿನಿಧ್ಯ ದೊರೆತ್ತಿಲ್ಲ, ನೆ.ಲ.ನರೇಂದ್ರಬಾಬು ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದನ್ನು ಹೊರತು ಪಡಿಸಿದರೆ ಆ ನಂತರದಲ್ಲಿ ರಮೇಶ್‌ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಲಾಗಿತ್ತು, ಆ ನಂತರದಲ್ಲಿ ನಮ್ಮ ಸಮುದಾಯದ ಜನಪ್ರತಿನಿಧಿಗಳಿಲ್ಲದೆ ಸದನದಲ್ಲಿ ನಮ್ಮ ಕಷ್ಟ, ಸುಖಃಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ, ಇದು ಕೂಡ ಜನಾಂಗದ ಅಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರಲಿದೆ, ಹಾಗಾಗಿ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಮತ್ತು ತಿಗಳ ಅಭಿವೃದ್ಧಿ ನಿಗಮದ ಬೇಡಿಕೆ ಮುಂದಿಡಲಾಗಿದೆ, ಸರಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ನಾವೆಲ್ಲರೂ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಆಲೋಚನೆ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕುಂಭಣ್ಣ, ಎನ್‌.ಎಸ್‌.ಶಿವಣ್ಣ, ಪಾಲಿಕೆ ಸದಸ್ಯರಾದ ನರಸಿಂಹಮೂರ್ತಿ, ಎ.ಜಿ.ಶ್ರೀನಿವಾಸ್, ಟಿ.ಎನ್‌.ನಾರಾಯಣಸ್ವಾಮಿ, ಯುವ ಘಟಕದ ಅಧ್ಯಕ್ಷ ಮಾರುತಿ, ಕಾರ್ಯದರ್ಶಿ ಮಂಜುನಾಥ್‌ ಸೇರಿದಂತೆ ಎಲ್ಲಾ ಕಟ್ಟೆ, ದೇಶ, ಗಡಿಗಳ ಮುಖಂಡರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!