ತುಮಕೂರು: ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿರುವ ಗ್ರಾಮ ಒನ್ ಕೇಂದ್ರಗಳಲ್ಲಿ ಮೊದಲಾದ್ಯತೆಯ ಮೇರೆಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಕಾರ್ಡ್‌ಗಳನ್ನು ನೀಡಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿ, ಗ್ರಾಮ ಒನ್ ಯೋಜನೆಯು ಮುಖ್ಯಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆಯಡಿ ನೂರಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತಿದೆ. ಯೋಜನೆಯಡಿ ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಹೊಂದಿದ್ದು, ಇದರಿಂದ ಜನರು ಸರ್ಕಾರಿ ಕೆಲಸಗಳಿಗಾಗಿ ನಗರಗಳಿಗೆ ಬಂದು ಹೋಗುವುದು ತಪ್ಪುತ್ತದೆ ಎಂದರಲ್ಲದೆ, ತಹಶೀಲ್ದಾರ್, ತಾಲ್ಲೂಕು ಆರೋಗ್ಯಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಸೋಮವಾರದಿಂದ 9 ಮತ್ತು 10ನೇ ತರಗತಿ ಪ್ರಾರಂಭಿಸಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ಮೂರನೇ ಅಲೆಯು ನಿಯಂತ್ರಣಕ್ಕೆ ಬರುತ್ತಿದ್ದರೂ ಲಸಿಕಾಕರಣ ಪೂರ್ಣಗೊಳಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಎರಡನೇ ಡೋಸ್ ಲಸಿಕಾಕರಣವು ಶೇ. 91 ರಷ್ಟು ಮಾತ್ರ ಪೂರ್ಣಗೊಂಡಿದ್ದು, ಬಾಕಿ ಇರುವ ಲಸಿಕಾಕರಣವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ 15- 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲನೇ ಡೋಸ್ ಶೇ.75 ರಷ್ಟು, ಎರಡನೇ ಡೋಸ್ ಶೇ.24 ರಷ್ಟು ಪೂರ್ಣಗೊಂಡಿದ್ದು ಲಸಿಕಾಕರಣವಾಗಬೇಕಿರುವ ವಿದ್ಯಾರ್ಥಿಗಳ ಮಾಹಿತಿ ಶಾಲಾ- ಕಾಲೇಜುಗಳಿಂದ ಪಡೆದು ಶೇ.100 ರಷ್ಟು ಲಸಿಕಾಕರಣ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಬೂಸ್ಟರ್ ಡೋಸ್ ಲಸಿಕಾಕರಣವು ಶೇ.44 ರಷ್ಟಾಗಿದ್ದು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಿ ಶೇ.100ರಷ್ಟು ಗುರಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಂದಾಯ ಗ್ರಾಮ ರಚನೆಗಳ ಬಗ್ಗೆ ತಹಶೀಲ್ದಾರ್ ಗಳು ಹೆಚ್ಚು ಕಾರ್ಯ ಪ್ರವೃತ್ತರಾಗಬೇಕು ಎಂದರಲ್ಲದೆ, ಪೈಕಿ- ಪಹಣಿ ಒಟ್ಟುಗೂಡಿಸುವಿಕೆ, 3/9 ಮಿಸ್‌ಮ್ಯಾಚ್, ಭೂಮಿ ಪೆಂಡೆನ್ಸಿ ಪ್ರಕರಣಗಳು ತ್ವರಿತ ವಿಲೇವಾರಿಯಾಗದ ಬಗ್ಗೆ ಬೇಸರ ವ್ಯಕ್ತಿಪಡಿಸಿದ ಅವರು, ಸದರಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಕಾಲ, ನಾಡಕಚೇರಿ ಪರಿಶೀಲನೆ, ನಮೂನೆ 1-5 ಸಿದ್ಧಪಡಿಸುವ ಪ್ರಗತಿ, ನಮೂನೆ 50-53 ವಿಲೇವಾರಿ ಹಾಗೂ ನಮೂನೆ 57ರ ಗಣಕೀಕರಣ, ಸ್ಮಶಾನ ಹಾಗೂ ವಿವಿಧ ಉದ್ದೇಶಗಳಿಗೆ ಸರ್ಕಾರಿ ಜಮೀನು ಕಾಯ್ದಿರಿಸುವುದು ಸೇರಿದಂತೆ ವಿವಿಧ ಕೆಲಸಗಳು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.
ಘನತ್ಯಾಜ್ಯ ವಿಲೇವಾರಿಗಾಗಿ ಸೂಕ್ತ ಸ್ಥಳ ಕಾಯ್ದಿರಿಸುವ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಜಿಲ್ಲಾಧಿಕಾರಿಯವರ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು ತಹಶೀಲ್ದಾರ್, ಕಾರ್ಯ ನಿರ್ವಾಹಣಾಧಿಕಾರಿಗಳು ಈ ಕುರಿತು ಕ್ರಮವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಕಂದಾಯ ಇಲಾಖೆಯು ಸ್ಮಶಾನಕ್ಕಾಗಿ ಈಗಾಗಲೇ ಭೂಮಿಯನ್ನು ಮಂಜೂರು ಮಾಡುತ್ತಿದ್ದು ಸರ್ಕಾರಿ ಭೂಮಿ ಲಭ್ಯವಿಲ್ಲದಿದ್ದಲ್ಲಿ ಹೊಸ ಜಾಗ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿ, ಸ್ಥಳ ಪರಿಶೀಲಿಸಿ ಹದ್ದುಬಸ್ತ್ ಮಾಡಿಸಿಕೊಟ್ಟರೆ ನರೇಗಾ ಯೋಜನೆಯಡಿ ಸ್ಮಶಾನವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ ಕೋವಿಡ್‌ನಿಂದ ಮೃತಪಟ್ಟ 953 ಜನರ ಪೈಕಿ 706 ಮೃತರ ದಾಖಲೆಗಳು ಸ್ವೀಕೃತಗೊಂಡಿವೆ. ಉಳಿದ 247 ಪ್ರಕರಣಗಳಿಗೆ ಸರಿಯಾದ ಮಾಹಿತಿಯನ್ನು ನಮೂದಿಸಿ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ವಿ.ಅಜಯ್, ತಹಶೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಪಾಲಿಕೆ ಆಯುಕ್ತೆ ರೇಣುಕಾ, ಡಿಎಚ್‌ಓ ಡಾ.ನಾಗೆಂದ್ರಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮೋಹನ್‌ದಾಸ್ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಗ್ರಾಮ ಒನ್ ಕೇಂದ್ರಗಳಲ್ಲಿ ಆರೋಗ್ಯ ಕಾರ್ಡ್ ನೀಡಿ
ಸರ್ಕಾರಿ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಿ: ಜಿಲ್ಲಾಧಿಕಾರಿ
Get real time updates directly on you device, subscribe now.
Prev Post
Comments are closed.