ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ರೆ ಕ್ರಮ

ಕಾಲೇಜು ಆಡಳಿತ ಮಂಡಳಿಗಳು ಕಟ್ಟುನಿಟ್ಟಾಗಿ ಆದೇಶ ಪಾಲಿಸಬೇಕು: ಡೀಸಿ

2,211

Get real time updates directly on you device, subscribe now.

ತುಮಕೂರು: ಹಿಜಾಬ್‌ ವಸ್ತ್ರ ವಿಷಯವಾಗಿ ಜಿಲ್ಲೆಯಲ್ಲಿ ರಜೆ ಘೋಷಿಸಲಾಗಿದ್ದ ಪಾಲಿಟೆಕ್ನಿಕ್‌, ಡಿಪ್ಲೋಮಾ, ಇಂಜಿನಿಯರಿಂಗ್‌ ಕಾಲೇಜು ಸೇರಿದಂತೆ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಮತ್ತು ಮೇಲ್ಪಟ್ಟ ಕಾಲೇಜುಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹಿಜಾಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶ ಪಾಲಿಸದ ಕಾಲೇಜು ಆಡಳಿತ ಮಂಡಳಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸ್‌ ಇಲಾಖಾಧಿಕಾರಿಗಳೊಂದಿಗೆ ಜೂ಼ಮ್‌ ಸಭೆ ನಡೆಸಿ ಮಾತನಾಡಿ, ಹಿಜಾಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುದಾನಿತ, ಅನುದಾನರಹಿತ, ಸರ್ಕಾರಿ ಕಾಲೇಜುಗಳು ಉಚ್ಛ ನ್ಯಾಯಾಲಯದ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು, ಆದೇಶ ಪಾಲಿಸುವಲ್ಲಿ ಆಯಾ ಕಾಲೇಜಿನ ಪ್ರಾಚಾರ್ಯರು, ಪ್ರಾಂಶುಪಾಲರು, ಆಡಳಿತ ಮಂಡಳಿಗಳೇ ಸಂಪೂರ್ಣ ಜವಾಬ್ದಾರಿ ಎಂದು ತಿಳಿಸಿದರು.
ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶ ಉಲ್ಲಂಘನೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜಿನ ಸುತ್ತಮುತ್ತ 200 ಮೀಟರ್‌ ವ್ಯಾಪ್ತಿ ಪ್ರದೇಶದಲ್ಲಿ ಮಂಗಳವಾರದಿಂದ ಮುಂದಿನ ಆದೇಶದವರೆಗೂ 144 ಸೆಕ್ಷನ್‌ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ, ನಿಷೇಧಾಜ್ಞೆ ಉಲ್ಲಂಘನೆಯಾದಲ್ಲಿ ಕಾಲೇಜಿನ ಮುಖ್ಯಸ್ಥರು ಸಂಬಂಧಿಸಿದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎಂದರಲ್ಲದೆ, ವಿದ್ಯಾರ್ಥಿಗಳು, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹೊರತುಪಡಿಸಿ ಯಾವುದೇ ಪೋಷಕ, ಪಾಲಕರಿಗೆ ನಿಷೇಧಿತ ಪ್ರದೇಶದೊಳಗೆ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.
ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮೀಪಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಶಾಂತಿ ಕಾಪಾಡುವುದು ಅತ್ಯಾವಶ್ಯಕವಿರುತ್ತದೆ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸಾರ್ವಜನಿಕರು ಸಹಕರಿಸಬೇಕು, ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಯಾವುದೇ ರೀತಿಯ ಪ್ರಚೋದನಕಾರಿ ಹೇಳಿಕೆ, ಅಭಿಪ್ರಾಯಗಳಿಗೆ ಅವಕಾಶವಿರುವುದಿಲ್ಲವೆಂದು ಸೂಚನೆ ನೀಡಿದರು.
ನಿಷೇಧಾಜ್ಞೆ ಅವಧಿಯಲ್ಲಿ ಕೆಲವು ಅವಶ್ಯಕ ಸಂದರ್ಭಗಳಲ್ಲಿ ಮಾತ್ರ ವಿದ್ಯಾರ್ಥಿಗಳ ಪಾಲಕರು, ಪೋಷಕರು, ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ಅನುಮತಿ ಪಡೆದು ಶಾಲೆಯ ಒಳಗೆ ಪ್ರವೇಶಿಸಲು ಅನುಮತಿ ನೀಡಲು ಅವಕಾಶವಿದೆ, ನಿಷೇಧಿತ ಪ್ರದೇಶದಲ್ಲಿರುವ ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ, ಆದರೆ ಸದರಿ ಅಂಗಡಿಗಳಲ್ಲಿ ಹೆಚ್ಚಿನ ಜನ ಗುಂಪು ಗೂಡುವುದನ್ನು ನಿಷೇಧಿಸಲಾಗಿದೆ ಹಾಗೂ ಯಾವುದೇ ಮತೀಯ ಭಾವನೆಗಳಿಗೆ ಭಂಗ ತರುವಂತಹ ಚಟುವಟಿಕೆಗಳು ನಡೆದಲ್ಲಿ ಸಂಬಂಧಪಟ್ಟ ಅಂಗಡಿ ಮಾಲೀಕರ ಮೇಲೆ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು, ನಿಷೇಧಿತ ಪ್ರದೇಶದಲ್ಲಿ 5 ಜನರ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದು, ಇತರೆ ಕಾನೂನು ಬಾಹಿರ ಚಟುವಟಿಕೆ ನಡೆಸುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ನಿಷೇಧಾಜ್ಞೆ ಅವಧಿಯಲ್ಲಿ ಯಾವುದೇ ಸ್ಪೋಟಕ ವಸ್ತು ಮತ್ತು ಮಾರಕಾಸ್ತ್ರಗಳನ್ನು ಕೊಂಡೊಯ್ಯುವುದು ಅಥವಾ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವಂತಿಲ್ಲ, ಯಾವುದೇ ಬಹಿರಂಗ ಪ್ರಚಾರ ಸಭೆ, ಸಮಾರಂಭ, ಮೆರವಣಿಗೆ ಮಾಡುವಂತಿಲ್ಲ, ನಿಷೇಧಾಜ್ಞೆ ಉಲ್ಲಂಘಿಸಿದವರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪೂರ್‌ ವಾಡ್‌ ಮಾತನಾಡಿ, ಕಾಲೇಜು ಆಡಳಿತ ಮಂಡಳಿಗಳು ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಪೊಲೀಸ್‌ ಠಾಣೆಯೊಂದಿಗೆ ಸಂಪರ್ಕ ಹೊಂದಿರಬೇಕು, ಯಾವುದೇ 3ನೇ ವ್ಯಕ್ತಿಯಿಂದ ದೂರುಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!