ರವೀಂದ್ರ ಕಲಾನಿಕೇತನದಲ್ಲಿ ರಾಜ್ಯಮಟ್ಟದ ಕಲಾ ಶಿಬಿರ

210

Get real time updates directly on you device, subscribe now.

ತುಮಕೂರು: ಕರ್ನಾಟಕ ಲಲಿತಾ ಕಲಾ ಅಕಾಡೆಮಿ, ಬೆಂಗಳೂರು ಹಾಗೂ ರವೀಂದ್ರ ಕಲಾನಿಕೇತನ ಚಿತ್ರಕಲಾ ಮಹಾವಿದ್ಯಾಲಯ ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಗಿರಿಜನ ಉಪಯೋಜನೆ ಅಡಿಯಲ್ಲಿ ನಗರದ ರವೀಂದ್ರ ಕಲಾನಿಕೇತನ ಚಿತ್ರಕಲಾ ಮಹಾವಿದ್ಯಾಲಯ ಫೆಬ್ರವರಿ 16 ರಿಂದ 19 ವರೆಗೆ ನಾಲ್ಕು ದಿನಗಳ ರಾಜ್ಯಮಟ್ಟದ ಕಲಾ ಶಿಬಿರ ಆಯೋಜಿಸಲಾಗಿದೆ ಎಂದು ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಸದಸ್ಯ ಎಂ.ಎನ್‌.ನರಸಿಂಹಮೂರ್ತಿ ತಿಳಿಸಿದ್ದಾರೆ.

ರವೀಂದ್ರ ಕಲಾ ನಿಕೇತನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಲಲಿತಾ ಕಲಾ ಅಕಾಡೆಮಿಗೆ 2014 ರಿಂದ ಇದುವರೆಗೂ ನೀಡಿರುವ ಅನುದಾನ ಸದ್ಬಳಕೆ ನಿಟ್ಟಿನಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಮಾರು 20 ಜನ ಯುವ ಪ್ರತಿಭಾವಂತ ಕಲಾವಿದರನ್ನು ಆಯ್ಕೆ ಮಾಡಿ, ಅವರಿಂದ ರಾಜ್ಯ ಮಟ್ಟದ ಕಲಾ ಶಿಬಿರ ಆಯೋಜಿಸಲಾಗಿದೆ, ಶಿಬಿರದ ಅಂತಿಮ ದಿನ ರಚನೆಯಾದ ಎಲ್ಲಾ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ರಾಜ್ಯಮಟ್ಟದ ಕಲಾಶಿಬಿರದ ಜೊತೆ ಜೊತೆಗೆ ಹಿರಿಯ ಕಲಾವಿದರಾ ಎಂ.ಟಿ.ಬಿ.ಆಚಾರ್ಯ ಅವರ ಜನ್ಮಶತಾಬ್ದಿ ಕಾರ್ಯಕ್ರಮದ ಅಂಗವಾಗಿ ಅವರ 31 ವಿಶಿಷ್ಟ ಕಲಾಕೃತಿಗಳನ್ನು ಪ್ರದರ್ಶನ ಸಹ ಇಲ್ಲಿ ಆಯೋಜಿಸಲಾಗಿದೆ, ಈ ಕಾರ್ಯಕ್ರಮದಲ್ಲಿ ಎಂಟಿಬಿ ಆಚಾರ್ಯ ಅವರ ಶಿಷ್ಯರಾದ ವಿಆರ್‌ಸಿ ಶೇಖರ್‌ ಅವರು ಆಚಾರ್ಯ ಅವರ ಕುರಿತು ಮಾತನಾಡಲಿದ್ದಾರೆ ಎಂದು ವಿವರ ನೀಡಿದರು.
ಗಿರಿಜನ ಉಪಯೋಜನೆಯ ಈ ರಾಜ್ಯಮಟ್ಟ ಕಲಾ ಶಿಬಿರದಲ್ಲಿ ಭಾಗವಹಿಸಿ, ಕಲಾಕೃತಿ ರಚಿಸುವ ಪ್ರತಿಯೊಬ್ಬ ಶಿಬಿರಾರ್ಥಿಗು ತಲಾ 25 ಸಾವಿರ ರೂ. ಗೌರವ ಸಂಭಾವನೆ ನೀಡಲಾಗುವುದು, ಕರ್ನಾಟಕ ಲಲಿತಾ ಕಲಾ ಅಕಾಡೆಮಿಯಿಂದ 15 ವರ್ಷಗಳ ನಂತರ ನಡೆಯುತ್ತಿರುವ ರಾಜ್ಯಮಟ್ಟದ ಕಲಾ ಶಿಬಿರ ಇದಾಗಿದೆ ಎಂದು ಎಂ.ಎನ್‌.ನರಸಿಂಹಮೂರ್ತಿ ತಿಳಿಸಿದರು.
ಫೆಬ್ರವರಿ 16 ರಂದು ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಕಲಾಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಲಲಿತಾ ಕಲಾ ಆಕಾಡೆಮಿಯ ಅಧ್ಯಕ್ಷ ಡಿ.ಮಹೇಂದ್ರ ವಹಿಸುವರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಟಿ.ಎಲ್‌.ಎಸ್‌.ಪ್ರೇಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಬಸವಯ್ಯ, ಹಿರಿಯ ಕಲಾವಿದರಾದ ಕಿಶೋರ್‌ಕುಮಾರ್‌, ಲಲಿತ ಕಲಾ ಅಕಾಡೆಮಿಯ ರಿಜಿಸ್ಟಾರ್‌ ಆರ್‌.ಚಂದ್ರಶೇಖರ್‌ ಭಾಗವಹಿಸಲಿದ್ದಾರೆ.
ಎಂ.ಟಿ.ವಿ.ಆಚಾರ್ಯ ಇವರ ಜನ್ಮ ಶತಮಾನೋತ್ಸವ ಕಲಾ ಪ್ರದರ್ಶನವನ್ನು ಹಿರಿಯ ಕಲಾವಿದರಾದ ವಿ.ಆರ್‌.ಸಿ.ಶೇಖರ್‌ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ವಹಿಸುವರು, ಅಕಾಡೆಮಿ ರಿಜಿಸ್ಟಾರ್‌ ಆರ್‌.ಚಂದ್ರಶೇಖರ್‌, ಎಂ.ಎನ್‌.ನರಸಿಂಹಮೂರ್ತಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಫೆಬ್ರವರಿ 19 ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಬಿ.ಜೋತಿಗಣೇಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್‌, ರವೀಂದ್ರ ಕಲಾ ನಿಕೇತನದ ಪ್ರಾಚಾರ್ಯ ಅಶೋಕ್‌.ಎಸ್‌.ಕೆ. ಉಪಸ್ಥಿತರಿರುವರು.
ಕರ್ನಾಟಕ ಲಲಿತ ಕಲಾ ಆಕಾಡೆಮಿ ವತಿಯಿಂದ ಕಳೆದ ಸಾಲಿನಲ್ಲಿ ಲಭ್ಯವಿದ್ದ 80 ಲಕ್ಷ ರೂ. ಅನುದಾನದಲ್ಲಿ ಪರಿಶಿಷ್ಟ ಜಾತಿ, ವರ್ಗ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಹಿರಿಯ ಕಲಾವಿದರಿಗೆ ತಲಾ 2 ಲಕ್ಷ ರೂ.ಗಳ ಪೆಲೋಶಿಫ್‌ ನೀಡಲಾಗಿದೆ, ಹಾಗೆಯೇ ಕಿರಿಯ ವಿಭಾಗದಲ್ಲಿ ತಲಾ ಐದು ಜನರಿಗೆ, ಒಂದು ಲಕ್ಷ ರೂ. ಗಳ ಪೆಲೋಶಿಫ್‌ ನೀಡಲಾಗುತ್ತಿದೆ, ಅಲ್ಲದೆ ಕಳೆದ ಸಾಲಿನಲ್ಲಿ ಚಿತ್ರಕಲಾ ವಿಭಾಗದಲ್ಲಿ ಕಲಿಯುತ್ತಿರುವ ಸುಮಾರು 101 ಜನ ವಿದ್ಯಾರ್ಥಿಗಳಿಗೆ 10.10 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರವೀಂದ್ರ ಕಲಾನಿಕೇತನದ ಪ್ರಾಚಾರ್ಯ ಅಶೋಕ್.ಎಸ್‌.ಕೆ. ಇದ್ದರು.

Get real time updates directly on you device, subscribe now.

Comments are closed.

error: Content is protected !!