ತುಮಕೂರು: ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಮಂಡಿಪೇಟೆ ವೃತ್ತದಲ್ಲಿ ಒಳಚರಂಡಿಯ ಪೈಪ್‌ಲೈನ್ ಒಡೆದು ಹೋಗಿರುವ ಪರಿಣಾಮ ಭೂ ಕುಸಿತ ಉಂಟಾಗಿರುವ ಘಟನೆ ನಡೆದಿದೆ.
ಮಂಡಿಪೇಟೆ ವೃತ್ತದಲ್ಲಿ ಉಂಟಾಗಿರುವ ಭೂ ಕುಸಿತದಿಂದಾಗಿ ಈ ಭಾಗದ ವರ್ತಕರು, ಹಮಾಲರು ಹಾಗೂ ಗ್ರಾಹಕರು ಸುಗಮ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿದೆ. ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಮಂಡಿಪೇಟೆಗೆ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಈಗ ವಾಹನಗಳ ಸಂಚಾರಕ್ಕೂ ತೀವ್ರ ಅಡಚಣೆಯಾಗಿದೆ.
ರಸ್ತೆ ಬದಿಯಲ್ಲೆ ಭೂಕುಸಿತ ಉಂಟಾಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ, ಅದೃಷ್ಟವಶಾತ್ ಯಾವುದೇ ಅಪಘಾತ ಸಂಭವಿಸಿಲ್ಲ.
ಮಂಡಿಪೇಟೆ ರಸ್ತೆಯಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ಕೈಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆ ಗುಣಮಟ್ಟದಿಂದಾಗಿ ಈ ಭೂ ಕುಸಿತ ಉಂಟಾಗಿದೆ ಎಂಬುದು ಈ ಭಾಗದ ಸಾರ್ವಜನಿಕರ ಆರೋಪವಾಗಿದೆ.
ಮಂಡಿಪೇಟೆ ಸರ್ಕಲ್‌ನಲ್ಲಿ ಭೂಕುಸಿತ ಉಂಟಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಬೆಳ್ಳಂ ಬೆಳಗ್ಗೆಯೇ ಶಾಸಕ ಜ್ಯೋತಿಗಣೇಶ್ ಪಾಲಿಕೆ ಮತ್ತು ಇಂಜಿನಿಯರ್‌ಗಳು, ಪಾಲಿಕೆ ಸದಸ್ಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಗುಣಮಟ್ಟದಿಂದ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್, ಮಂಡಿಪೇಟೆ ಸರ್ಕಲ್ ನಲ್ಲಿ ಭೂ ಕುಸಿತವಾಗಿರುವ ಸ್ಥಳ ಹಳೇ ಎಪಿಎಂಸಿ ಇದ್ದಂತಹ ಜಾಗ, ಕಳೆದ 26 ವರ್ಷಗಳ ಹಿಂದೆ ಮೊದಲ ಹಂತವಾಗಿ ಆಗಿದ್ದಂತಹ ಯುಜಿಡಿ ಕಾಮಗಾರಿಯ ಪೈಪ್‌ಲೈನ್‌ಗಳನ್ನು 15- 16 ಅಡಿ ಕೆಳಗೆ ಹಾಕಲಾಗಿದ್ದು, ಈ ಪೈಪುಗಳು ಒಡೆದು ಹೋಗಿ ಈ ಭೂ ಕುಸಿತ ಉಂಟಾಗಿದೆ ಎಂದರು.
ಇತ್ತೀಚೆಗಷ್ಟೆ ಸ್ಮಾರ್‌್ೂಸಿಟಿ ವತಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ, ಆದರೆ ಈ ಭಾಗದಲ್ಲಿ ಪೈಪ್ ಒಡೆದು ಹೋಗಿರುವ ಬಗ್ಗೆ ಯಾವುದೇ ಸೂಚನೆ ಗೊತ್ತಾಗಿಲ್ಲ, 25 ವರ್ಷ ಆದ ಮೇಲೆ ಯುಜಿಡಿ ಪೈಪ್ ಡ್ಯಾಮೇಜ್ ಆಗಿ ಭೂ ಕುಸಿತವಾಗಿದೆ, ಆಗ ಮಾಡಿದ್ದ ಕಾಮಗಾರಿಯಲ್ಲಿ ಸಿಮೆಂಟ್ ಪೈಪ್‌ಗಳನ್ನು ಹಾಕಲಾಗಿದ್ದು, ಈ ಸಿಮೆಂಟ್ ಮಣ್ಣಿನಲ್ಲಿ ಕರಗಿ ಹೋಗಿ ದೊಡ್ಡ ಗುಂಡಿ ಬಿದ್ದಿದೆ ಎಂದು ಹೇಳಿದರು.
ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ದುರಸ್ಥಿಗಾಗಿ ಕಾರ್ಯೋನ್ಮುಖರಾಗಿದ್ದಾರೆ, ಆದರೆ ರಸ್ತೆ ಕಾಮಗಾರಿಯಾದ ಮೇಲೆ ಈ ರೀತಿಯಾಗಿರುವುದು ಬೇಸರ ತಂದಿದೆ ಎಂದರು.
ನಗರದ ವಿವೇಕಾನಂದ ರಸ್ತೆಯಲ್ಲೂ ಇದೇ ರೀತಿಯಾಗಿತ್ತು, ಹಾಗಾಗಿ ಆ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಕೆಲಸ ಪೂರ್ಣಗೊಳಿಸುವವರೆಗೂ ರಸ್ತೆ ಕಾಮಗಾರಿಗೆ ಅವಕಾಶ ನೀಡಿರಲಿಲ್ಲ ಎಂದ ಅವರು ವಿವೇಕಾನಂದ ರಸ್ತೆಯಲ್ಲಿ 5 ಬಾರಿ ಭೂ ಕುಸಿತವಾಗಿತ್ತು, ರಾಜ್ಯಮಟ್ಟದಿಂದ ಐದಾರು ಮಂದಿ ತಜ್ಞರನ್ನು ಕರೆಸಿ ಸಲಹೆ ಸೂಚನೆ ಪಡೆದು ಈಗ ಕಾಮಗಾರಿ ಮಾಡಲಾಗಿದೆ ಎಂದರು.
ಮಂಡಿಪೇಟೆ ರಸ್ತೆಯ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಚರ್ಚ್ ಸರ್ಕಲ್ ಬಳಿ ಭೂ ಕುಸಿತವಾಗಿತ್ತು, ಆಗ ಪೈಪ್‌ಲೈನ್ ಬದಲಾವಣೆ ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ, ಆದರೆ ಈ ಜಾಗದಲ್ಲಿ ಪೈಪ್ ಡ್ಯಾಮೇಜ್ ಆಗಿರುವುದು ಯಾರಿಗೂ ಗೊತ್ತಾಗಿಲ್ಲ ಎಂದರು.
ಮಂಡಿಪೇಟೆ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ, ಸದಾ ವಾಹನ ದಟ್ಟಣೆ ಇರುತ್ತದೆ, ಹಾಗಾಗಿ ಮುಂದಿನ 15- 20 ದಿನದಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಮಂಡಿಪೇಟೆಯ ವ್ಯಾಪಾರಸ್ಥರು ತಾಳ್ಮೆಯಿಂದ ವರ್ತಿಸುವುದರ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ, ಅವರು ಇವರ ಮೇಲೆ ಹೇಳೋದು, ಇವರು ಅವರ ಮೇಲೆ ಹೇಳುತ್ತಾ ಅಧಿಕಾರಿಗಳ ಮೇಲೆ ದೂರಿದರೆ ಏನೂ ಪ್ರಯೋಜನವಾಗುವುದಿಲ್ಲ, ಹೊಸ ಪೈಪ್‌ಲೈನ್ ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು, ಅಲ್ಲಿಯವರೆಗೆ ಜನತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪಾಲಿಕೆಯ ಕಾರ್ಯಪಾಲಕ ಅಭಿಯಂತರರಾದ ಆಶಾ ಮಾತನಾಡಿ, ಈ ಯುಜಿಡಿ ಲೈನ್ ಪ್ರಮುಖವಾದ ಲೈನ್ ಆಗಿದ್ದು, ಇಲ್ಲಿ ಹಾಕಲಾಗಿರುವ ಪೈಪ್ ಮಣ್ಣಲ್ಲಿ ನೆನೆದು ಕರಗಿ ಹೋಗಿ ಈ ರೀತಿಯಾಗಿದೆ, ಶೀಘ್ರದಲ್ಲೇ ಕೆಲಸ ಆರಂಭಿಸಿ 15 ರಿಂದ 20 ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ದೀಪಶ್ರೀ ಮಹೇಶ್, ಮನೋಹರಗೌಡ ಮತ್ತಿತರರು ಹಾಜದ್ದರು.
Get real time updates directly on you device, subscribe now.
Next Post
Comments are closed.