ದೇಸಿ ಕಲೆ ಉಳಿಸಿ ಬೆಳೆಸುವ ಕಾರ್ಯವಾಗಲಿ: ಮಹೇಂದ್ರ

ಯುವ ಕಲಾವಿದರು ಚಿತ್ರಕಲಾ ಶಿಬಿರಗಳಲ್ಲಿ ಹೆಚ್ಚೆಚ್ಚು ಭಾಗವಹಿಸಲಿ

107

Get real time updates directly on you device, subscribe now.

ತುಮಕೂರು: ಸಮಾಜದಲ್ಲಿ ಪ್ರತಿನಿಧಿಸುವ ಯುವಪೀಳಿಗೆಯ ಕಲಾವಿದರು ಇಂತಹ ಚಿತ್ರಕಲಾ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಮಹೇಂದ್ರ.ಡಿ ತಿಳಿಸಿದರು.

ನಗರದ ಆರ್‌.ಟಿ.ನಗರದ ರವೀಂದ್ರ ಕಲಾನೀಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ನೇತೃತ್ವದಲ್ಲಿ ಆಯೋಜಿಸಿದ್ದ ಗಿರಿಜನ ಉಪ ಯೋಜನೆಯಡಿ ರಾಜ್ಯ ಮಟ್ಟದ ಕಲಾ ಶಿಬಿರ ಹಾಗೂ ಎಂಟಿವಿ ಆಚಾರ್ಯ ಅವರ ಸ್ವರಚಿತ ಚಿತ್ರ ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಸರ್ಕಾರ, ಗಿರಿಜನ ಕಲಾವಿದ ಪ್ರೋತ್ಸಾಹಿಸುವ ಹಿತದೃಷ್ಟಿಯಿಂದ ಹಲವು ಯೋಜನೆ ಜಾರಿಗೆ ತಂದಿದೆ, ಹೆಚ್ಚೆಚ್ಚು ಯುವಕರು ಅಂತಹ ಆ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು, ರಾಜ್ಯದೆಲ್ಲೆಡೆ ಅಭೂತಪೂರ್ವ ಕಲಾ ಶಿಬಿರ ತೊಡಗಿಸುತ್ತ ಜನಪದೀಯ ದೇಸಿ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಜನಮಾನಸದಲ್ಲಿ ಉಳಿದುಕೊಳ್ಳುವ ಈ ಕಲಾ ಕ್ಷೇತ್ರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಸಾಧನೆಗೈದ ಅದೆಷ್ಟೊ ಮಹನೀಯರಿದ್ದಾರೆ, ಅಂತಹವರ ಜೀವನ ಚರಿತ್ರೆ ಅಧ್ಯಯನ ನಡೆಸುವ ಮೂಲಕ ತಮ್ಮ ಚಿತ್ರಕಲೆಯ ಪ್ರತಿಭೆಗೆ ಸ್ಪೂರ್ತಿಯಾಗಿಸಿಕೊಳ್ಳಬೇಕು ಜೊತೆಗೆ ತಮ್ಮ ಕಲೆಯನ್ನ ಸಮಾಜಕ್ಕೆ ತೋರಿಸಿ ಮನ್ನಣೆ ಪಡೆಯಬೇಕು, ಇದಕ್ಕೆ ನಮ್ಮ ಅಕಾಡೆಮಿ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಹಿರಿಯ ಕಲಾವಿದ ವಿ.ಆರ್‌.ಸಿ ಶೇಖರ್‌, ಆಚಾರ್ಯ ಒಬ್ಬ ಅದ್ಭುತ ಖ್ಯಾತ ಚಿತ್ರ ಕಲಾವಿದರು, ನಾನು ಅವರ ಶಿಷ್ಯ ಎಂದು ನೆನೆಯುವಲ್ಲಿ ಹೆಮ್ಮೆ ಎನಿಸುತ್ತಿದೆ, ಅವರು ಚಿತ್ರಕಲೆಗೆ ಕೊಟ್ಟ ಕೊಡುಗೆ ನಿಜಕ್ಕೂ ಸಾಮಾಜಿಕ ಕ್ರಾಂತಿಯನ್ನೆ ಹುಟ್ಟು ಹಾಕಿದೆ, ರಷ್ಯಾ ಸೇರಿದಂತೆ ಹಲ ಪರ ರಾಷ್ಟ್ರಗಳಲ್ಲಿ ಸ್ವರಚಿತ ಚಿತ್ರಗಳು ಪ್ರದರ್ಶನಗೊಂಡು ಮನ್ನಣೆಗಳಿಸಿವೆ, ಅವರ ಪ್ರತಿ ಚಿತ್ರದಲ್ಲೂ ಬದುಕಿನ ಅನುಭಾವನೆಗಳ ಆಸ್ವಾದತೆ ಎದ್ದು ಕಾಣುತಿತ್ತು ಎಂದು ತಿಳಿಸಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಟಿ.ಎಲ್‌.ಸಿ.ಪ್ರೇಮಾ ಮಾತನಾಡಿ, ಚಿತ್ರಕಲೆ ಎನ್ನುವುದು ಭಗವಂತ ಕರುಣಿಸುವ ಅದ್ಬುತ ಕಲೆ, ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದುಕೊಳ್ಳುವ ಭವ್ಯ ಕಲೆಯಾಗಿದೆ, ಹಾಗಾಗಿ ಕಲಾವಿದರು ಇಂತಹ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ನಮ್ಮ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್ಸಿ, ಎಸ್ಟಿಯವರ ಕಲ್ಯಾಣಕ್ಕಾಗಿ ಅವರ ಮಕ್ಕಳ ಶಿಕ್ಷಣ ಪ್ರೋತ್ಸಾಹಕ್ಕಾಗಿ ಅನುದಾನ ಬಹಳಷ್ಟಿದೆ, ಅದನ್ನು ಪ್ರತಿಯೊಬ್ಬರು ಉಪಯೋಗಿಸಿಕೊಳ್ಳಬೇಕು ಎಂದರು.
ಹಿರಿಯ ಕಲಾವಿದ ಕಿಶೋರ್‌ ಕುಮಾರ್‌ ಮಾತನಾಡಿ, ಇಂದಿನ ಆಧುನಿಕ ಕಾಲಮಾನದಲ್ಲಿ ಜನಪದ ಕಲೆಗಳು ನಶಿಸಿ ಹೋಗುತ್ತಿವೆ. ಕಾರಣ ಜನಪದವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವಾಗದೆ ಇರುವುದಾಗಿದೆ, ಜೊತೆಗೆ ಕಲಾ ಶಾಲೆಗಳಲ್ಲಿ ಅನಿಮೇಷನ್‌ ವಿಷಯ ಅಳವಡಿಸುವ ಪ್ರಯತ್ನವಾಗಬೇಕು ಎಂದು ಅಕಾಡೆಮಿ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಕಲಾ ಶಿಬಿರದ ಮುಖ್ಯ ಉದ್ದೇಶ ನಿಮ್ಮಲ್ಲಿನ ಪ್ರತಿಭೆ, ಭಾವನೆ ಸಮಾಜಕ್ಕೆ ಪ್ರದರ್ಶಿಸುವುದು ಎಂದು ತಿಳಿಸಿದರು.
ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಬಸವಯ್ಯ ಮಾತನಾಡಿ, ಅದೆಷ್ಟೋ ಪ್ರಾಮಾಣಿಕ ಕಲಾವಿದರು ಶತ ಶತಮಾನಗಳಿಂದ ನಮ್ಮ ನಾಡಿನಲ್ಲಿ ಕಲೆಯನ್ನು ಮೈಗೂಡಿಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ, ಕಲೆಗೆ ಅಂತಿಮವಿಲ್ಲ, ಇದಕ್ಕೆ ಯಾವುದೇ ಶಿಕ್ಷಣವಿಲ್ಲದೆ ಬರುವಂತಹ ಕಲೆಯೂ ಆಗಿರಬಹುದು ಎಂದು ಗಿರಿಜನರಲ್ಲಿದ್ದ ಕಲೆಯ ಅನುಭವದ ಕಥಾ ಪ್ರಸಂಗ ತಿಳಿಸಿದರು.
ಅಕಾಡೆಮಿ ಸದಸ್ಯ ಸಂಚಾಲಕ ನರಸಿಂಹಮೂರ್ತಿ ಮಾತನಾಡಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಚಿತ್ರಕಲೆ ಅಭಿವೃದ್ಧಿಗಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಸಹಕಾರಿಯಾಗುತ್ತಿದೆ, ಇತ್ತೀಚಿಗೆ 1.40 ಕೋಟಿ ಹಣ ಗಿರಿಜನ ಉಪಯೋಗದಡಿಯಲ್ಲಿ ತರುವ ಪ್ರಯತ್ನ ಅಕಾಡೆಮಿ ಅಧ್ಯಕ್ಷರು ಮಾಡಿರುವುದು ಸಂತಸದ ಸಂಗತಿ, ಜೊತೆಗೆ 25 ಸಾವಿರ ಪ್ರೋತ್ಸಾಹ ಧನ ನಿಗದಿಯಾಗಿರುವುದು ಶ್ಲಾಘನೆ ವ್ಯಕ್ತಪಡಿಸಿದರು.
ಎಂ.ಟಿ.ವಿ.ಆಚಾರ್ಯರ ಜನ್ಮ ಶತಾಬ್ದಿಯ ಅಂಗವಾಗಿ ಅವರ ಸ್ವರಚಿತ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿತ್ತು, ಬಂದಂತಹ ಗಣ್ಯರು ಕುತೂಹಲದಿಂದ ಚಿತ್ರಪಟ ದರ್ಶಿಸಿದರು, ಹಾಗೇಯೇ ನಾಲ್ಕು ದಿನ ನಡೆಯುವ ಚಿತ್ರಕಲಾ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಇಪ್ಪತ್ತು ಮಂದಿ ಚಿತ್ರಕಲಾವಿದರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ರಿಜಿಸ್ಟಾರ್‌ ಚಂದ್ರಶೇಖರ್‌, ಮಾಜಿ ಅಕಾಡೆಮಿ ಸದಸ್ಯ ಮನು ಚಕ್ರವರ್ತಿ, ಜಿಲ್ಲಾ ಚಿತ್ರಕಲಾ ಸಂಘದ ಅಧ್ಯಕ್ಷ ರವೀಶ್‌.ಕೆ.ಎಂ, ಉಪಾಧ್ಯಕ್ಷ ರಂಗಸ್ವಾಮಯ್ಯ, ಸಂಘಟನಾ ಕಾರ್ಯದರ್ಶಿ ಎಸ್‌.ವಿ.ಆನಂದ್‌ ಇದ್ದರು.

Get real time updates directly on you device, subscribe now.

Comments are closed.

error: Content is protected !!