ತುಮಕೂರು: ವಿವಿಧ ಸರ್ಕಾರಿ ಇಲಾಖೆಗಳ ನೌಕರರು ಮತ್ತು ಸಿಬ್ಬಂದಿಯ ವೇತನ ಸೇರಿದಂತೆ ಇನ್ನಿತರೆ ಭತ್ಯೆಗಳ ಬಿಲ್ ಮಾಡದೆ ಪ್ರತಿಯೊಂದಕ್ಕೂ ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕರು ಆಕ್ಷೇಪಿಸುತ್ತಾ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಜಿ. ನರಸಿಂಹರಾಜು ನೇತೃತ್ವದಲ್ಲಿ ವಿವಿಧ ಇಲಾಖೆಯ ನೌಕರರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕ ಬಿ.ಎಂ. ಮುನಿರೆಡ್ಡಿ ಅವರ ಕಾರ್ಯವೈಖರಿ ವಿರುದ್ಧ ಆಕ್ರೋಶ ಹೊರ ಹಾಕಿರುವ ಸರ್ಕಾರಿ ನೌಕರರು ಅವರ ಕಚೇರಿ ಮುಂದೆಯೇ ಪ್ರತಿಭಟಿಸಿದರು.
ಜಿಲ್ಲಾ ಖಜನಾಧಿಕಾರಿ ಬಿ.ಎಂ. ಮುನಿರೆಡ್ಡಿ ಅವರು ಕಚೇರಿಯ ಕೊಠಡಿಗೆ ತೆರಳಿದ ಸರ್ಕಾರಿ ನೌಕರರು ಸದರಿ ಖಜನಾಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ನೌಕರರ ವೇತನದ ಬಿಲ್, ಪ್ರಯಾಣ ಭತ್ಯೆ ಸೇರಿದಂತೆ ಇನ್ನಿತರ ಬಿಲ್‌ಗಳನ್ನು ಮಾಡಿಕೊಡುವಲ್ಲಿ ಸದರಿ ಖಜನಾಧಿಕಾರಿಗಳು ವಿನಾ ಕಾರಣ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದುವರೆಗೂ ಖಜಾನಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಯಾವೊಬ್ಬ ಅಧಿಕಾರಿಯೂ ಈ ರೀತಿ ನಡೆದುಕೊಂಡಿರಲಿಲ್ಲ ಎಂದು ಸರ್ಕಾರಿ ನೌಕರರು ದೂರಿದರು.
ಸರ್ಕಾರಿ ನೌಕರರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಮೆಡಿಕಲ್ ಬಿಲ್‌ಗಳನ್ನು ಸಹ ಈ ಅಧಿಕಾರಿ ಮಾಡಿಕೊಡದೆ ವಿನಾ ಕಾರಣ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ. ಯಾವ ಬಿಲ್‌ಗೂ ಸಮರ್ಪಕವಾದ ಕಾರಣ ನೀಡದೆ ವಿಳಂಬ ಮಾಡುತ್ತಾ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಟಿ.ಜಿ. ನರಸಿಂಹರಾಜು ಮಾತನಾಡಿ, ನಮ್ಮ ಸಂಘದ ವತಿಯಿಂದ ಈಗಾಗಲೇ ಸದರಿ ಅಧಿಕಾರಿಗಳಿಗೆ ಎರಡು-ಮೂರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೂ ಈ ಅಧಿಕಾರಿ ತಮ್ಮ ತಪ್ಪನ್ನು ತಿದ್ದಿಕೊಳ್ಳದೇ ವಿನಾ ಕಾರಣ ನೌಕರರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ನೌಕರರ ಕೆ2 ಬಿಲ್ ಒಂದು ಲ್ಯಾಪ್ಸ್ ಆದರೆ ಮತ್ತೆ ರಿಜನರೇಟ್ ಮಾಡಿಕೊಳ್ಳಬೇಕಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಈ ಅಧಿಕಾರಿ ಮಾತ್ರ ಯಾವುದನ್ನೂ ಅರ್ಥ ಮಾಡಿಕೊಳ್ಳದೇ ತೊಂದರೆ ನೀಡುತ್ತಿದ್ದಾರೆ. ಮಕ್ಕಳ ಶಿಷ್ಯ ವೇತನ ಬಿಲ್‌ನೂ ಕೊಕ್ಕೆ ಇಡುತ್ತಿದ್ದಾರೆ ಎಂದು ಹರಿಹಾಯ್ದರು.
ಕಾನೂನು ಎಲ್ಲರಿಗೂ ಒಂದೇ. ನಾವು ಕಾನೂನು ಬಿಟ್ಟು ಬಿಲ್ ಮಾಡಿಕೊಡಿ ಎಂದು ಕೇಳುತ್ತಿಲ್ಲ. ಕಾನೂನು ಪ್ರಕಾರವೇ ಸರ್ಕಾರಿ ನೌಕರರ ಬಿಲ್‌ಗಳನ್ನು ಮಾಡಿಕೊಡಬೇಕು. ಆದರೂ ಏಕೆ ಈ ರೀತಿ ಎಲ್ಲದಕ್ಕೂ ಕೊಕ್ಕೆ ಇಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.
ಖಜಾನಾಧಿಕಾರಿ ಪ್ರತಿಕ್ರಿಯೆ
ನಾನು ನಿಯಮದ ವಿರುದ್ಧ ಒಂದೇ ಒಂದು ಬಿಲ್ ಮಾಡಿ ಕೊಡುವುದಿಲ್ಲ, ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ, ಕಾನೂನು ಪ್ರಕಾರವೇ ಕೆಲಸ ಮಾಡುತ್ತೇನೆ, ಇವರು ಮಾಡುತ್ತಿರುವ ಆರೋಪ ಶುದ್ಧ ಸುಳ್ಳು ಎಂದು ಜಿಲ್ಲಾ ಖಜಾನಾಧಿಕಾರಿ ಬಿ.ಎಂ.ಮುನಿರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸರ್ಕಾರಿ ನೌಕರರ ಸಂಘದ ನಾಗರಾಜು, ನಾಗೇಶ್, ಜಯಪ್ರಕಾಶ್, ಲಕ್ಷ್ಮಿನರಸಿಂಹಯ್ಯ, ಆರೋಗ್ಯ ಇಲಾಖೆಯ ನರಸಿಂಹಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಪಾಲ್ಗೊಂಡಿದ್ದರು.
Comments are closed.