ಈಶ್ವರಪ್ಪರ ದೇಶ ದ್ರೋಹದ ಹೇಳಿಕೆಗೆ ಖಂಡನೆ

ಕುಣಿಗಲ್ ನಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಪ್ರತಿಭಟನೆ

282

Get real time updates directly on you device, subscribe now.

ಕುಣಿಗಲ್‌: ಸಂವಿಧಾನದ ನಿಯಮಗಳ ಅಡಿಯಲ್ಲಿ ಅಧಿಕಾರ ಪಡೆದ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸಂವಿಧಾನ ವಿರೋಧಿಯಾಗಿ ಕೇಸರಿ ಧ್ವಜವನ್ನು ರಾಷ್ಟ್ರ ಧ್ವಜವನ್ನಾಗಿಸುತ್ತೇವೆ ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದು ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಲೋಹಿತ್ ಗೌಡ ಹೇಳಿದರು.

ಶುಕ್ರವಾರ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಯುವ ಕಾಂಗ್ರೆಸ್‌, ಬ್ಲಾಕ್‌ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ರಾಷ್ಟ್ರ ದ್ರೋಹಿಯಾದ ಸಚಿವ ಕೆ.ಎಸ್‌.ಈಶ್ವರಪ್ಪನವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ ರಾಷ್ಟ್ರ ಧ್ವಜಕ್ಕೆ ಸಂವಿಧಾನ ಮಾನ್ಯತೆ ನೀಡಿದೆ, ಇದೇ ಸಂವಿಧಾನದ ನಿಯಮದಡಿಯಲ್ಲಿ ಈಶ್ವರಪ್ಪ ಸಚಿವರಾಗಿದ್ದಾರೆ, ಅಧಿಕಾರದ ಮದದಲ್ಲಿ ರಾಷ್ಟ್ರ ಧ್ವಜವನ್ನೆ ಬದಲಾಯಿಸಿ ಕೇಸರಿ ಬಟ್ಟೆಯನ್ನೆ ರಾಷ್ಟ್ರ ಧ್ವಜವನ್ನಾಗಿಸುತ್ತೇವೆ ಎಂದು ಸಂವಿಧಾನ ಬಾಹಿರ ಹೇಳಿಕೆ ನೀಡಿದ್ದು ಒಂದು ಕ್ಷಣವೂ ಸಚಿವರಾಗಿ ಉಳಿಯುವ ಯಾವುದೇ ಅರ್ಹತೆ ಇಲ್ಲದಂತಾಗಿರುವುದರಿಂದ ರಾಜ್ಯಪಾಲರು ದೇಶ ದ್ರೋಹದ ಹೇಳಿಕೆ ನೀಡಿರುವ ಈಶ್ವರಪ್ಪನವರ ರಾಜೀನಾಮೆ ಪಡೆಯಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಾಸಕ ಡಾ.ರಂಗನಾಥ್‌ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಯುವ ಮುಖಂಡ ಅಮೃತೂರು ಹರೀಶ್‌ ಮಾತನಾಡಿ, ಕೇವಲ ಒಂದು ತಾಲೂಕಿನ ಹಿಜಾಬ್‌ ಸಮಸ್ಯೆಯನ್ನು ರಾಜ್ಯದ ಸಮಸ್ಯೆಯನ್ನಾಗಿಸಿ, ವಿದ್ಯಾರ್ಥಿಗಳಲ್ಲೂ ಧರ್ಮ ದ್ವೇಷ ಬಿತ್ತುವ ಕೃತ್ಯವನ್ನು ಆಡಳಿತರೂಢ ಬಿಜೆಪಿ ಸರ್ಕಾರ ಮಾಡಿದೆ, ಇಡೀ ರಾಜ್ಯ, ರಾಷ್ಟ್ರವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಘೋಷಣೆ ಮಾಡುತ್ತಾ ಕೇಸರಿ ಬಟ್ಟೆಯನ್ನು ರಾಷ್ಟ್ರ ಧ್ವಜವನ್ನಾಗಿಸುವ ಹೇಳಿಕೆ ನೀಡುತ್ತಾ ಜಾತ್ಯಾತೀತೆಯಿಂದ ದೇಶವನ್ನು ಕೇವಲ ಧರ್ಮಾಧರಿತ ರಾಷ್ಟ್ರವನ್ನಾಗಿಸಿ ಅಲ್ಪಸಂಖ್ಯಾತರು, ದಲಿತರನ್ನು ವ್ಯವಸ್ಥಿತವಾಗಿ ತುಳಿಯುವ ತಂತ್ರ ಹೆಣೆಯುತ್ತಿದ್ದಾರೆ.
ಬಿಜೆಪಿ ಸರ್ಕಾರದಿಂದ ಕೋಮು ಸಾಮರಸ್ಯಕ್ಕೆ ಧಕ್ಕೆ ಬರುವ ಜೊತೆ ಆಯಾ ಧರ್ಮವನ್ನು ಅವಲಂಬಿಸಿ ಬದುಕುವ ಜನರ ಧರ್ಮಾಚರಣೆಗೂ ನಿಯಂತ್ರಣ ಮಾಡಲು ಹೊರಟಿರುವುದು ಖಂಡನೀಯ, ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ದೇಶ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯವರು ಜನರಲ್ಲಿ ಕೋಮು ದ್ವೇಷ, ಧರ್ಮ ದ್ವೇಷ ಸೃಷ್ಟಿಸಿ ತಮ್ಮ ರಾಜಕಾರಣದ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ, ಬಿಜೆಪಿಯ ಇಂತಹ ಅಪಾಯಕಾರಿ ಧರ್ಮ ರಾಜಕಾರಣಕ್ಕೆ ಎಲ್ಲಾ ವರ್ಗದ ಜನರು ಎಚ್ಚೆತ್ತು ಖಂಡಿಸದೆ ಇದ್ದಲ್ಲಿ ಮುಂದೆ ಬಹಳಷ್ಟು ತೊಂದರೆ ಅನುಭವಿಸಬೇಕು, ಸಚಿವ ಈಶ್ವರಪ್ಪನವರ ಹೇಳಿಕೆ ಗಮನಿಸಿದರೆ ಇವರ ಮನೋಭಾವ ಎಂತಹುದು ಎಂದು ತಿಳಿಯುತ್ತದೆ, ಆದ್ದರಿಂದ ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗಣ್ಣಗೌಡ ಮಾತನಾಡಿದರು. ಸದಸ್ಯರಾದ ಮಂಜುಳಾ, ರೂಪಿಣಿ, ಜಯಲಕ್ಷ್ಮೀ, ಶ್ರೀನಿವಾಸ, ರಾಮು, ಉದಯ, ಮುಖಂಡರಾದ ಬೇಗೂರು ನಾರಾಯಣ, ಮಾರುತಿ, ಸದಾಖತ್‌, ಸ್ವಾಮಿ, ಶಂಕರ, ರಾಜಣ್ಣ, ಏಜಾಸ್‌, ಕೀರ್ತಿ ಇತರರು ಇದ್ದರು. ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!